ನಾಯಕಿಯನ್ನ ಮುಟ್ಟದೇ ಪ್ರೀತಿ ಮಾಡೋ ನಾಯಕನ 'ಗಿಣಿ' ಕಥೆ
ಸಾಮಾನ್ಯವಾಗಿ ಸಿನಿಮಾ ಅಂದ್ಮೇಲೆ ಅಲ್ಲೊಬ್ಬ ಹೀರೋ, ಅವರಿಗೊಬ್ಬಳು ಹೀರೋಯಿನ್ ಇರ್ತಾರೆ. ಇಬ್ಬರ ಮಧ್ಯೆ ಲವ್ ಸೀನ್, ರೋಮ್ಯಾನ್ಸ್, ಡ್ಯಾನ್ಸ್, ಮುತ್ತು ಹೀಗೆ ಪ್ರತಿಯೊಂದು ಸಿನಿಮಾದಲ್ಲೂ ಇದು ಕಾಮನ್.
ಆದ್ರೆ, 'ಗಿಣಿ ಹೇಳಿದ ಕಥೆ'ಯಲ್ಲಿ ಇದಕ್ಕೆ ವಿರುದ್ಧವಾದ ಪ್ರೀತಿ. ನಾಯಕಿಯನ್ನ ಮುಟ್ಟದೇ ಪ್ರೀತಿ ಮಾಡ್ತಾರಂತೆ ಈ ಹೀರೋ. ಇದು ಅಪರೂಪದಲ್ಲೊಂದು ಅಪರೂಪ. ಮದುವೆ ಆಗೋವರೆಗೂ ಮುಟ್ಟದೇ ಹುಡುಗಿಯನ್ನ ಪ್ರೀತಿ ಮಾಡೋದು ಈ ಹೀರೋ ಸ್ಟೈಲ್. ಮುಟ್ಟುವ ಸಂದರ್ಭ ಬಂದಾಗ ಏನಾಗುತ್ತೆ ಎಂಬುದಕ್ಕೆ ಅಲ್ಲೊಂದು ಟ್ವಿಸ್ಟ್ ಇದೆಯಂತೆ.
ಹೌದು, 'ಗಿಣಿ ಹೇಳಿದ ಕಥೆ'ಯಲ್ಲಿ ಒಂದು ನವಿರಾದ ಪ್ರೇಮಕಥೆ ಇದೆ. ಕಾರು ಡ್ರೈವರ್ ಮತ್ತು ಸ್ಕೂಲ್ ಟೀಚರ್ ನಡುವಿನ ಲವ್ ಸ್ಟೋರಿ ಯುವಪ್ರೇಕ್ಷಕರಿಗೆ ಮಜಾ ಕೊಡುತ್ತೆ. ಈ ಲವ್ ಸ್ಟೋರಿ ಜೊತೆಗೆ ಒಂದಿಷ್ಟು ಕಮರ್ಷಿಯಲ್ ಅಂಶಗಳು ಸೇರಿ ಒಂದೊಳ್ಳೆ ಕಥೆಯಾಗಿದೆ.

ಅಂದ್ಹಾಗೆ, ಗಿಣಿ ಹೇಳಿದ ಕಥೆಯ ನಾಯಕ ದೇವ್ ರಂಗಭೂಮಿ, ನಾಯಕಿ ಗೀತಾಂಜಲಿ. ಇಬ್ಬರಿಗೂ ಇದು ಮೊದಲ ಸಿನಿಮಾ. ಇಬ್ಬರಲ್ಲೂ ಈ ಚಿತ್ರದ ಬಗ್ಗೆ ಹೆಚ್ಚು ನಂಬಿಕೆ ಇದೆ. ವಿಶೇಷ ಅಂದ್ರೆ, ನಾಯಕ ದೇವ್ ನಟನೆಯ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರವನ್ನ ನಿರ್ಮಾಣ ಕೂಡ ಮಾಡಿದ್ದಾರೆ.

ಜನವರಿ 11 ರಂದು ಅಂದ್ರೆ ಇದೇ ಶುಕ್ರವಾರ 'ಗಿಣಿ ಹೇಳಿದ ಕಥೆ' ತೆರೆಮೇಲೆ ಬರ್ತಿದೆ. ಹೆಚ್ಚಾಗಿ ಬಿಲ್ಡಿಪ್ ಇಲ್ಲದೇ, ಪರಿಶುದ್ಧವಾದ ಕಥೆಯೊಂದಿಗೆ ಸ್ವಚ್ಛ ಮನರಂಜನೆ ನೀಡುವ ದೃಷ್ಟಿಯಲ್ಲಿ ಗಿಣಿ ಕಥೆ ಹೇಳಲಿದೆ.
ಇನ್ನುಳಿದಂತೆ ಮಾಲತೇಶ್, ನೀತುರಾಯ್, ಹಾವೇರಿ ಶ್ರೀಧರ್, ಮಹಂತೇಶ್, ಮುಂತಾದವರಿದ್ದಾರೆ. ಅಂದ್ಹಾಗೆ, ಈ ಚಿತ್ರವನ್ನ ನಿರ್ದೇಶನ ಮಾಡಿರೋದು ನಾಗರಾಜ್ ಉಪ್ಪುಂದ. ನಿರ್ದೇಶನದ ಜೊತೆಗೆ ಛಾಯಾಗ್ರಹಣದ ಜವಾಬ್ದಾರಿಯೂ ಇವರದ್ದೇ. ಹಿತನ್ ಹಾಸನ್ ಅವರು ಸಂಗೀತ ನೀಡಿದ್ದಾರೆ.


Click it and Unblock the Notifications











