ಸಚಿವರು, ಶಾಸಕರಿಗೆ ಸಿನಿಮಾ ತೋರಿಸಲಿದ್ದಾರೆ ಸ್ಪೀಕರ್ ಕಾಗೇರಿ
'ದಿ ಕಶ್ಮೀರ್ ಫೈಲ್ಸ್' ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ಚರ್ಚೆಯಾಗುತ್ತಿದೆ. ಇದೊಂದು 'ಪ್ರೊಪಾಗಾಂಡಾ' ಸಿನಿಮಾ ಎಂದು ಕೆಲವರು, ಮರೆಮಾಚಲಾದ ಇತಿಹಾಸ ಎಂದು ಇನ್ನು ಕೆಲವರು ವಾದಿಸುತ್ತಿದ್ದಾರೆ.
ಈ ನಡುವೆ ಬಿಜೆಪಿ ಹಾಗೂ ಬಿಜೆಪಿ ಬೆಂಬಲಿಕ ಸಂಘ-ಸಂಸ್ಥೆಗಳಿಂದ 'ದಿ ಕಶ್ಮೀರ್ ಫೈಲ್ಸ್' ಸಿನಿಮಾಕ್ಕೆ ದೊಡ್ಡಮಟ್ಟದ ಪ್ರಚಾರ ದೊರೆತಿದೆ. ಸಿನಿಮಾ ಉತ್ತಮ ಗಳಿಕೆಯನ್ನು ಕಾಣುತ್ತಿದೆ.
ಕರ್ನಾಟಕ ರಾಜ್ಯ ಸರ್ಕಾರವು 'ದಿ ಕಶ್ಮೀರ್ ಫೈಲ್ಸ್' ಸಿನಿಮಾಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸಿದೆ. ಇಷ್ಟೇ ಅಲ್ಲದೆ ಇದೀಗ ರಾಜ್ಯ ಸರ್ಕಾರದ ಶಾಸಕರು ಹಾಗೂ ಸಚಿವರುಗಳಿಗೆ ಈ ಸಿನಿಮಾದ ವಿಶೇಷ ಶೋ ಅನ್ನು ಆಯೋಜಿಸಲಾಗಿದೆ.

ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಶೇಷ ಕಾಳಜಿವಹಿಸಿ ಎಲ್ಲ ಶಾಸಕರು ಹಾಗೂ ಸಚಿವರಿಗೆ ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ನಾಳೆ (ಮಾರ್ಚ್ 15) ರಂದು ಸಂಜೆ 6:15 ಕ್ಕೆ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನು ಕೆಲವು ಬಿಜೆಪಿ ಶಾಸಕರು, ಸಚಿವರು ಈಗಾಗಲೇ 'ದಿ ಕಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಸಿನಿಮಾ ವೀಕ್ಷಿಸಿದ ಸಿಎಂ ಬೊಮ್ಮಾಯಿ, ''ಈ ಸಿನಿಮಾ ನೋಡಿದ ಬಳಿಕ ನನಗೆ ಮಾತನಾಡಲು ಆಗುತ್ತಿಲ್ಲ. ಯಾವ ರೀತಿ ಕಾಶ್ಮೀರದಲ್ಲಿ ಪಂಡಿತರ ಮೇಲೆ ದಾಳಿಯಾಗಿತ್ತು ಎನ್ನುವದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಅದೆಷ್ಟೋ ಜನ ಉಗ್ರರ ಕೈಲಿ ಸಿಕ್ಕಿ ಪ್ರಾಣವನ್ನ ಬಿಟ್ಟಿದ್ದಾರೆ. ಹೀಗಾಗಿಯೇ ಅಲ್ಲಿ ಆರ್ಟಿಕಲ್ 370 ಅನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೆರವುಗೊಳಿಸಿತು. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಪ್ರತಿಯೊಬ್ಬ ಭಾರತೀಯರು ಈ ಸಿನಿಮಾವನ್ನ ನೋಡಬೇಕು. ಹೀಗಾಗಿ ನಾನು ಸಿನಿಮಾದ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿ ಅದೇಶ ಮಾಡುತ್ತೇನೆ'' ಎಂದಿದ್ದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿರುವ ಕ್ರಮವನ್ನು ಸಹ ಸ್ಪೀಕರ್ ಕಾಗೇರಿ ಸ್ವಾಗತಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾಕ್ಕೆ ಕರ್ನಾಟಕದಲ್ಲಿ ಮಾತ್ರವೇ ಅಲ್ಲ, ಗುಜರಾತ್, ಹರಿಯಾಣ, ಮಧ್ಯ ಪ್ರದೇಶಗಳಲ್ಲಿಯೂ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಬಿಜೆಪಿ ಬೆಂಬಲಿಗರು, ಮುಖಂಡರುಗಳು ಈ ಸಿನಿಮಾವನ್ನು ನೋಡುತ್ತಿದ್ದಾರೆ. ನಿನ್ನೆ ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿಯವರು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ್ದಾರೆ. ಪ್ರಧಾನಿ ಮೋದಿ ಇಂದಲೂ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು 1990 ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾದ ಕತೆಯನ್ನು ಒಳಗೊಂಡಿದೆ. ಕಶ್ಮೀರಿ ಪಂಡಿತರು ಏಕೆ ಮತ್ತು ಹೇಗೆ ಜಮ್ಮು ಕಾಶ್ಮೀರ ಬಿಟ್ಟು ತೆರಳಿದರು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಅನುಪಮ್ ಖೇರ್, ಚಕ್ರವರ್ತಿ ಮಿಥುನ್, ಕನ್ನಡದ ನಟ ಪ್ರಕಾಶ್ ಬೆಳವಾಡಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಇನ್ನಿತರರು ನಟಿಸಿದ್ದಾರೆ.


Click it and Unblock the Notifications











