ಈ ವರ್ಷ ನಟ ದರ್ಶನ್ ಹುಟ್ಟುಹಬ್ಬಕ್ಕೆ ಭಾರೀ ಸರ್‌ಪ್ರೈಸ್?
ನಟ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ 'ಡೆವಿಲ್' ಚಿತ್ರೀಕರಣದಲ್ಲಿ ಭಾಗವಹಿಸುತ್ತಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಹುಟ್ಟುಹಬ್ಬ ಹತ್ತಿರವಾಗುತ್ತಿದೆ. ಫೆಬ್ರವರಿ 16ರಂದು ದರ್ಶನ್ ಹುಟ್ಟುಹಬ್ಬ. ಅಭಿಮಾನಿಗಳು ಈ ಸಂಭ್ರಮವನ್ನು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ.
ಕೊರೊನಾ ಹಾವಳಿಯಿಂದ ಎರಡ್ಮೂರು ವರ್ಷ ಅಭಿಮಾನಿಗಳ ಜೊತೆ ಅದ್ಧೂರಿ ಹುಟ್ಟುಹಬ್ಬ ಆಚರಣೆಗೆ ದರ್ಶನ್ ಬ್ರೇಕ್ ಹಾಕಿದ್ದರು. ಇನ್ನು ಹುಟ್ಟುಹಬ್ಬದ ವೇಳೆ ಹಾರ, ಕೇಕ್, ಉಡುಗೊರೆ ತರಬೇಡಿ. ಅದರ ಬದಲು ದವಸ ಧಾನ್ಯ ತಂದು ಕೊಡಿ. ಅದನ್ನು ಅವಶ್ಯಕತೆ ಇರುವವರಿಗೆ ತಲುಪಿಸುತ್ತೇವೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಕಳೆದ ವರ್ಷ ಕೂಡ ಅಭಿಮಾನಿಗಳು ದವಸ ಧಾನ್ಯ ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆ.

'ಕಾಟೇರ' ಸಕ್ಸಸ್ ಸಂಭ್ರಮದಲ್ಲಿ ಕಳೆದ ವರ್ಷ ಹುಟ್ಟುಹಬ್ಬದ ದಿನ ದರ್ಶನ್ ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ನೆಚ್ಚಿನ ನಟನ ಕೈಲುಕಿ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಆದರೆ ಈ ವರ್ಷ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರಾ? ಇಲ್ವಾ? ಎನ್ನುವ ಗೊಂದಲ ಮೂಡಿದೆ. ಇತ್ತೀಚೆಗೆ ಫ್ಯಾಮಿಲಿ ಸಮೇತ ಮೈಸೂರಿನ ತಮ್ಮ ಫಾರ್ಮ್‌ಹೌಸ್‌ನಲ್ಲಿ ದರ್ಶನ್ ಸಂಕ್ರಾಂತಿ ಹಬ್ಬ ಆಚರಿಸಿದ್ದರು.
'ಡೆವಿಲ್' ಸಿನಿಮಾ ಚಿತ್ರೀಕರಣದ ನಡುವೆಯೇ ದರ್ಶನ್ ಗಾಯಗೊಂಡಿದ್ದರು. ಹಾಗಾಗಿ ಚಿತ್ರೀಕರಣ ನಿಂತಿತ್ತು. ಕೈ ಸರ್ಜರಿ ಬಳಿಕ ದರ್ಶನ್ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಆ ಬಳಿಕ ಮತ್ತೆ ಚಿತ್ರೀಕರಣ ಆರಂಭಿಸುವ ವೇಳೆಗೆ ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದರು. ಇದೀಗ ಜಾಮೀನು ಪಡೆದು ಹೊರ ಬಂದಿದ್ದಾರೆ.
ಮೂರ್ನಾಲ್ಕು ಸಿನಿಮಾಗಳಲ್ಲಿ ದರ್ಶನ್ ನಟಿಸಬೇಕಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕ್ರಿಸ್‌ಮಸ್ ವೇಳೆಗೆ 'ಡೆವಿಲ್' ಸಿನಿಮಾ ತೆರೆಗೆ ಬರಬೇಕಿತ್ತು. ಆ ಸಿನಿಮಾ ತಡವಾಗಿದ್ದರಿಂದ ದರ್ಶನ್ ನಟಿಸಬೇಕಿರುವ ಮುಂದಿನ ಸಿನಿಮಾಗಳು ನಿಧಾನವಾಗುತ್ತಿದೆ. ಮಾರ್ಚ್‌ನಲ್ಲಿ ಮತ್ತೆ 'ಡೆವಿಲ್' ಶೂಟಿಂಗ್ ಅಖಾಡಕ್ಕೆ ದರ್ಶನ್ ಇಳಿಯುತ್ತಾರೆ ಎನ್ನಲಾಗ್ತಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಸಣ್ಣ ಟೀಸರ್ ಬಿಡುಗಡೆ ಆಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಕಳೆದ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ 'D58' ಡೈಲಾಗ್ ಟೀಸರ್ ಸಹ ಬಂದಿತ್ತು. ಪ್ರೇಮ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಿಸಲಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ಚಿತ್ರದ ಪೋಸ್ಟರ್ ರಿಲೀಸ್ ಆಗುತ್ತಾ ಕಾದುನೋಡಬೇಕಿದೆ. ಇನ್ನು ಈ ಎರಡು ಸಿನಿಮಾಗಳ ಬಳಿಕ 'ವೀರ ಸಿಂಧೂರ ಲಕ್ಷ್ಮಣ'ನಾಗಿ ದರ್ಶನ್ ನಟಿಸಬೇಕಿದೆ. ತರುಣ್ ಸುಧೀರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರದ ಬಗ್ಗೆ ಏನಾದರೂ ಅಪ್‌ಡೇಟ್ ಸಿಗುತ್ತಾ ಎಂದು ಅಭಿಮಾನಿಗಳು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ.
ನ್ಯಾಯಾಲಯದಲ್ಲಿ ಅನುಮತಿ ಪಡೆದು ನಟ ದರ್ಶನ್ ಮೈಸೂರಿನ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಲ್ಲೇ ಈ ಬಾರಿ ಹುಟ್ಟುಹಬ್ಬ ಆಚರಿಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ಅಭಿಮಾನಿಗಳು ಸ್ಪೆಷಲ್ ಸಿಡಿಪಿ ರಿಲೀಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಲಿದ್ದಾರೆ.
ದೊಡ್ಡ ದೊಡ್ಡ ನಿರ್ಮಾಪಕರು ದರ್ಶನ್ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದಾರೆ. ಈಗಾಗಲೇ ಕೆಲವರು ಅಡ್ವಾನ್ಸ್ ಸಹ ಕೊಟ್ಟಿದ್ದಾರೆ. ಆದಷ್ಟು ಬೇಗ ದರ್ಶನ್ ಚಿತ್ರೀಕರಣದಲ್ಲಿ ಭಾಗಿ ಆಗಬೇಕು ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ.


Click it and Unblock the Notifications











