ನುಚ್ಚು ನೂರಾಯ್ತಾ ಕಿಸ್ ಬೆಡಗಿ ಶ್ರೀಲೀಲಾ ಬಾಲಿವುಡ್ ಕನಸು, ಆರಂಭದಲ್ಲಿಯೇ ವಿಘ್ನ..?
ಈ ಬಣ್ಣದ ಲೋಕನೇ ಹಾಗೇ. ಇಲ್ಲಿ ದಿನಕ್ಕೊಂದು ಸುದ್ದಿ ಸತ್ಯ ಆದರೆ, ಮಿಕ್ಕ ತೊಂಬತ್ತೊಂಬತ್ತು ಸುದ್ದಿ ಸುಳ್ಳಾಗುತ್ತಾವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಶ್ರೀಲೀಲಾ ಕುರಿತು ಮತ್ತೊಂದು ವಿಚಾರ ಸದ್ಯ ಸದ್ದು ಮಾಡುತ್ತಿದೆ.
ಹೌದು, ಅಸಲಿಗೆ.. ರಶ್ಮಿಕಾ ಅವರಂತೆಯೇ ಸ್ಯಾಂಡಲ್‌ವುಡ್‌ನಿಂದ ಕಾಣೆಯಾದ ಶ್ರೀಲೀಲಾ, ಸದ್ಯ ಪಕ್ಕದ ಆಂಧ್ರದಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇಂಥಾ ಶ್ರೀಲೀಲಾಗೆ ಈಗ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಹ ಅನುಭವ ಆಗಿದೆ. ಅದಕ್ಕೆ ಕಾರಣ ಸೈಫ್ ಅಲಿ ಖಾನ್.

ಹೌದು, ಎಲ್ಲವೂ ಅಂದುಕೊಂಡತೆ ಆಗಿದ್ದರೆ ಇಷ್ಟೊತ್ತಿಗೆ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಅಭಿನಯದ ಚೊಚ್ಚಲ ಚಿತ್ರದ ಚಿತ್ರೀಕರಣದಲ್ಲಿ ಶ್ರೀಲೀಲಾ ಇರಬೇಕಿತ್ತು. ಆದರೆ.. ಮೊನ್ನೆ ನಡೆದ ಸೈಫ್ ಅಲಿ ಖಾನ್ ಅವರ ಮೇಲಿನ ಹಲ್ಲೆ ಶ್ರೀಲೀಲಾ ಅವರ ಫ್ಲ್ಯಾನ್ ತಲೆ ಕೆಳಗಾಗಿಸಿತು.
ಇನ್ನೂ ಇಬ್ರಾಹಿಂ ಅಲಿ ಖಾನ್ ಹೇಳಿ ಕೇಳಿ ಸೈಫ್ ಅಲಿ ಖಾನ್ ಅವರ ಮುದ್ದಿನ ಮಗ. ಮೊದಲ ಪತ್ನಿಯ ಜೊತೆ ಮಾತನಾಡಿದರೂ ಮಾತನಾಡದೇ ಇದ್ದರೂ ಸೈಫ್ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಸಂಬಂಧ ಚೆನ್ನಾಗಿಯೇ ಇದೆ. ಹೀಗಾಗಿಯೇ ತಂದೆಯ ಮೇಲಾದ ಈ ಹಲ್ಲೆಯಿಂದ ವಿಚಲಿತತಾಗಿರುವ ಇಬ್ರಾಹಿಂ ಅಲಿ ಖಾನ್ ತಮ್ಮ ಚೊಚ್ಚಲ ಚಿತ್ರದ ಚಿತ್ರೀಕರಣವನ್ನು ಮುಂದೂಡಿದ್ದಾರೆ ಎನ್ನುವ ಸುದ್ದಿ ಸದ್ಯ ಮುಂಬೈನಲ್ಲಿ ಕೇಳಿ ಬರುತ್ತಿದೆ.
ಇಂಡಿಯಾ ಟುಡೇ ವರದಿಯ ಪ್ರಕಾರ ಕುನಾಲ್ ದೇಶಮುಖ್ ನಿರ್ದೇಶನದ ಡೈಲರ್ ಚಿತ್ರದ ಚಿತ್ರೀಕರಣವನ್ನು ಸದ್ಯ ಮುಂದೂಡಲಾಗಿದ್ದು ಇಬ್ರಾಹಿಂ ಅಲಿ ಖಾನ್ ತಮ್ಮ ತಂದೆಯ ಜೊತೆ ಇರಲು ನಿರ್ಧಾರವನ್ನು ಮಾಡಿದ್ದಾರೆ. ಕೇವಲ ಇಬ್ರಾಹಿಂ ಮಾತ್ರ ಅಲ್ಲ ಸೈಫ್ ಅಲಿ ಖಾನ್ ಅವರ ಮಗಳು ಸಾರಾ ಅಲಿ ಖಾನ್ ಕೂಡ ತಮ್ಮ ಚಿತ್ರಗಳ ಚಿತ್ರೀಕರಣವನ್ನೆಲ್ಲ ಕ್ಯಾನ್ಸಲ್ ಮಾಡಿದ್ದಾರೆ.
ಕುನಾಲ್ ದೇಶಮುಖ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಶಿದ್ಧತ್ ಚಿತ್ರವನ್ನು ನಿರ್ದೇಶಿಸಿದ ಅನುಭವ ಇವರದ್ದು. ಇನ್ನು ತಮ್ಮ ಮ್ಯಾಡಾಕ್ ಫಿಲ್ಮ್ಸ್ ಮೂಲಕ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ದಿನೇಶ್ ವಿಜ್ಜನ್ ಚಿಕ್ಕ ಬಜೆಟ್ ಹೂಡಿ ದೊಡ್ಡ ಲಾಭವನ್ನು ಮಾಡುವ ಬುದ್ದಿವಂತ ನಿರ್ಮಾಪಕ. ಇನ್ನುಳಿದಂತೆ ಚಿತ್ರದ ಉಳಿದ ತಾರಾಬಳಗದಲ್ಲಿ ಯಾರೆಲ್ಲ ಇರಲಿದ್ದಾರೆ ? ಚಿತ್ರದ ಹೆಸರೇನು ? ಎಂಬ ಇತ್ಯಾದಿ ವಿವರಗಳೆಲ್ಲ ಬಹಿರಂಗವಾಗಬೇಕಿವೆ.
ಅಂದ್ಹಾಗೇ ಸದ್ಯ ಬಾಲಿವುಡ್ ಕಡೆ ಮುಖ ಮಾಡಿರುವ ಶ್ರೀಲೀಲಾ ತೆಲುಗಿನ ಮಾಸ್ ಮಾಹಾರಾಜ ರವಿತೇಜಾ ಅಭಿನಯದ 'ಮಾಸ್ ಜಾತರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಿತಿನ್ ಜೊತೆ 'ರಾಬಿನ್ ಹುಡ್' ಚಿತ್ರಕ್ಕೆ ಕೂಡ ಶ್ರೀಲೀಲಾ ನಾಯಕಿ. ಈ ಚಿತ್ರಗಳನ್ನು ಹೊರತು ಪಡಿಸಿದರೆ ಶಿವಕಾರ್ತಿಕೇಯನ್ ಅಭಿನಯದ ಚಿತ್ರದ ಮೂಲಕ ತಮಿಳು ಚಿತ್ರರಂಗವನ್ನು ಕೂಡ ಶ್ರೀಲೀಲಾ ಪ್ರವೇಶಿಸುತ್ತಿದ್ಧಾರೆ. ಪವನ್ ಕಲ್ಯಾಣ್ ಅಭಿನಯದ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ಕೂಡ ಶ್ರೀಲೀಲಾ ನಟಿಸುತ್ತಿದ್ದಾರೆ
ಒಟ್ನಲ್ಲಿ ಸದ್ಯ ಶ್ರೀಲೀಲಾ ಅಭಿನಯದ ಚೊಚ್ಚಲ ಹಿಂದಿ ಚಿತ್ರದ ಚಿತ್ರೀಕರಣ ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆಯಿಂದ ಮುಂದಕ್ಕೋಗಿದೆ ಎನ್ನುವ ಮಾತು ಮುಂಬೈನಲ್ಲಿ ಕೇಳಿ ಬರುತ್ತಿದೆ. ಈ ಚಿತ್ರದ ಚಿತ್ರೀಕರಣ ಆರಂಭವಾಗುವುದು ಯಾವಾಗ ? ಚಿತ್ರ ತೆರೆಗೆ ಬರುವುದು ಯಾವಾಗೆ ? ಎಂಬ ಪ್ರಶ್ನೆಗಳಿಗೆ ಉತ್ತರ ಇನ್ನೂ ಸಿಗಬೇಕಿದೆ.


Click it and Unblock the Notifications











