"ನನ್ನ ಕಾಲು 100% ಹೋಗ್ಬಿಟ್ಟಿತ್ತು, ದೇವರಂಥ ಡಾಕ್ಟರ್ ನಂಗೆ ಕಾಲು ಕೊಟ್ರು"; ಶ್ರೀಮುರಳಿ
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ. ಈಗಾಗಲೇ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಟ್ರೈಲರ್ ಹೊರಬರಲು ಮುಹೂರ್ತ ಫಿಕ್ಸ್ ಆಗಿದೆ. ಇನ್ನು ಚಿತ್ರಕ್ಕಾಗಿ ಶ್ರೀಮುರಳಿ 3 ವರ್ಷ ಶ್ರಮಿಸಿದ್ದಾರೆ.
'ಬಘೀರ' ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಶ್ರೀಮುರಳಿ ನಟಿಸಿದ್ದಾರೆ. ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕಾಗಿ ದೇಹ ಹುರಿಗೊಳಿಸಿ ಬಹಳ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಪಾತ್ರಕ್ಕಾಗಿ ವಜ್ರದೇಹಿ ಆಗಿದ್ದ ರೋರಿಂಗ್ ಸ್ಟಾರ್ ಫೋಟೊಗಳು ವೈರಲ್ ಆಗುತ್ತಿದೆ. ಇನ್ನು 'ಬಘೀರ' ಚಿತ್ರೀಕರಣದ ವೇಳೆ ಎರಡ್ಮೂರು ಬಾರಿ ಅವರು ಗಾಯಗೊಂಡಿದ್ದರು. ಒಮ್ಮೆ ಒಂದು ಕಾಲು ಕಳೆದುಕೊಳ್ಳುವ ಮಟ್ಟಕ್ಕೆ ಹೋಗಿತ್ತು. ಈ ಬಗ್ಗೆ ಸ್ಟಾರ್ ಸುವರ್ಣ ವಾಹಿನಿ ಕಾರ್ಯಕ್ರಮದಲ್ಲಿ ರೋರಿಂಗ್ ಸ್ಟಾರ್ ಮಾತನಾಡಿದ್ದಾರೆ.

'ಬಘೀರ' ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಬಿಡುಗಡೆ ಆಗಿರುವು ಟೀಸರ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಹಾಲಿವುಡ್ ರೇಂಜ್ ಸ್ಟಂಟ್ಸ್, ವಿಷ್ಯುವಲ್ಸ್ ನೋಡಿ ಹುಬ್ಬೇರಿಸಿದ್ದಾರೆ. ಡಾ. ಸೂರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚೇತನ್ ಡಿಸೋಜಾ ಆಕ್ಷನ್ ಕೊರಿಯೋಗ್ರಫಿ ಮಾಡಿದ್ದಾರೆ. ಚಿತ್ರಕ್ಕಾಗಿ ಶ್ರೀಮುರಳಿ ದೇಹವನ್ನು ಬಹಳ ದಂಡಿಸಿದ್ದಾರೆ.
ಪ್ರತಿ ಚಿತ್ರದಲ್ಲೂ ಎಲ್ಲರೂ ತಮ್ಮ ಎಫರ್ಟ್ ಹಾಕುತ್ತಾರೆ. ನಾನು ಮಾತ್ರ ಅಂತ ಅಲ್ಲ. ನಮ್ಮ ತಂಡದ ಪ್ರತಿಯೊಬ್ಬರು ತಮ್ಮ ತಮ್ಮ ವಿಭಾಗದಲ್ಲಿ ಕಷ್ಟಬಿದ್ದು 'ಬಘೀರ' ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ನನಗೆ ಎರಡ್ಮೂರು ಬಾರಿ ಪೆಟ್ಟಾಗಿತ್ತು. ಒಮ್ಮೆ ಬೆನ್ನಿಗೆ ಸಮಸ್ಯೆ ಆಗಿತ್ತು. ಮತ್ತೊಮ್ಮೆ ಎಡಗಾಲು ಹೋಗ್ಬಿಟ್ಟಿತ್ತು, 100% ಎಸಿಎಲ್ ಟಿಯರ್ ಅಂತಾರೆ. ಅಂದ್ರೆ ಕಾಲು ಹೋಗ್ಬಿಟ್ಟಿತ್ತು. ದೇವರಂಥ ಡಾಕ್ಟರ್ ಕಾಲು ಕೊಟ್ಟರು. ಕಾಲಿಗೆ ಮತ್ತೆ ಜನ್ಮ ಸಿಕ್ತು. ಬಳಿಕ ವಿಶ್ರಾಂತಿ ಪಡೆದು ಚಿತ್ರೀಕರಣ ಮುಗಿಸಿದೆವು. ಸಿನಿಮಾ ಗೆಲ್ಲಿಸುವುದು ಜನರ ಕೈಯಲ್ಲಿದೆ ಎಂದು ಶ್ರೀಮುರಳಿ ಹೇಳಿದ್ದಾರೆ.
ಪ್ರತಿದಿನ 3 ರಿಂದ 4 ಗಂಟೆ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದೆ. ಬಿಡುವಿಲ್ಲದೇ ಅಷ್ಟು ಹೊತ್ತು ದೇಹ ದಂಡಿಸುತ್ತಿದ್ದೆ. ಒಂದು ದಿನ ತಪ್ಪಿಸದೇ ವಾರದಲ್ಲಿ 5-6 ದಿನ ಬೆವರಿಸಬೇಕಿತ್ತು. ದಿನ ಬೆಳಗ್ಗೆ 3.30ಗಂಟೆಗೆ ಎದ್ದು ವರ್ಕ್ಔಟ್ ಮಾಡ್ತಿದ್ದೆ. ನಮ್ಮ ಪತ್ನಿ ಅಯ್ಯೋ ಪಾಪ ಅಂತ ನನ್ನ ಪತ್ನಿ ಒಂದು ದಿನವೂ ಊಟಕ್ಕೆ ಹೆಚ್ಚು ತುಪ್ಪ, ಅನ್ನ, ಮೊಸರು ಏನು ಕೊಟ್ಟಿಲ್ಲ, ನನ್ನ ಕಷ್ಟ ಯಾರಿಗೆ ಹೇಳಲಿ ಎಂದು ಶ್ರೀಮುರಳಿ ನಕ್ಕಿದ್ದಾರೆ.

'ಬಘೀರ' ಚಿತ್ರಕ್ಕಾಗಿ ಶ್ರೀಮುರಳಿ ಹಾಕಿರುವ ಶ್ರಮದ ಬಗ್ಗೆ ಕೇಳಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಇನ್ನು ಶ್ರೀಮುರಳಿ ದೇಹ ಹುರಿಗೊಳಿಸಿರುವ ಖಡಕ್ ಆಗಿ ದರ್ಶನ್ ಕೊಟ್ಟಿರುವ ಫೋಟೊಗಳನ್ನು ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ. 'ಬಘೀರ' ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಪ್ರಕಾಶ್ ರಾಜ್, ರಂಗಾಯಣ ರಘು, ಗರುಡ ರಾಮ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಅಜನೀಶ್ ಲೋಕನಾಥ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. 'ರುದಿರ ಧಾರ' ಎನ್ನುವ ಸಾಂಗ್ ರಿಲೀಸ್ ಆಗಿ ಸಿನಿರಸಿಕರ ಮನಗೆದ್ದಿದೆ. ಎ. ಜೆ ಶೆಟ್ಟಿ ಛಾಯಾಗ್ರಹಣ 'ಬಘೀರ' ಚಿತ್ರಕ್ಕಿದೆ. ಅಕ್ಟೋಬರ್ 31ಕ್ಕೆ ಸಿನಿಮಾ ತೆರೆಗೆ ಬರಲಿದೆ. ಇದೇ ಸೋಮವಾರ(ಅಕ್ಟೋಬರ್ 21) ಬೆಳಗ್ಗೆ 9.36 ನಿಮಿಷಕ್ಕೆ ಚಿತ್ರದ ಆಕ್ಷನ್ ಪ್ಯಾಕ್ಡ್ ಟ್ರೈಲರ್ ರಿಲೀಸ್ ಆಗಲಿದೆ.


Click it and Unblock the Notifications











