"ಇಲ್ಲಿಗೆ ಮುಗ್ದಿಲ್ಲಮ್ಮ, ರಾಜ್ ಕುಡಿ 'ಯುವ' ಬರ್ತಿದ್ದಾನೆ"; ಶ್ರೀಮುರಳಿ ಖಡಕ್ ಮಾತು
ಡಾ. ರಾಜ್‌ಕುಮಾರ್ ಮೊಮ್ಮಗ ಯುವರಾಜ್‌ಕುಮಾರ್ ಸಿನಿಎಂಟ್ರಿಗೆ ದಿನಗಣನೆ ಶುರುವಾಗಿದೆ. 'ಯುವ' ಸಿನಿಮಾ ಮಾರ್ಚ್ 28ಕ್ಕೆ ತೆರೆಗೆ ಬರ್ತಿದೆ. ರಾಘಣ್ಣ ಕಿರಿಮಗನನ್ನು ತೆರೆಮೇಲೆ ನೋಡಲು ದೊಡ್ಮನೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ವಾರವೇ ಚಿತ್ರದ ಮೊದಲ ಹಾಡು ಬಿಡುಗಡೆ ಆಗಲಿದೆ.
ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವ' ಚಿತ್ರಕ್ಕೆ ಹೊಂಬಾಳೆ ಫಿಲ್ಮ್ ಸಂಶ್ಥೆ ಬಂಡವಾಳ ಹೂಡಿದೆ. ಯುವ ರಾಜ್‌ಕುಮಾರ್ ಜೋಡಿಯಾಗಿ ಸಪ್ತಮಿ ಗೌ ನಟಿಸುತ್ತಿದ್ದಾರೆ. ಇನ್ನುಳಿದಂತೆ ಅಚ್ಯುತ್ ಕುಮಾರ್, ಪ್ರಕಾಶ್ ರಾಜ್, ಸಂದೀಪ್ ಮಲಾನಿ ಚಿತ್ರದ ತಾರಾಗಣದಲ್ಲಿದ್ದಾರೆ. ಕಳೆದ ಡಿಸೆಂಬರ್‌ನಲ್ಲೇ ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ತಡವಾಗುತ್ತಿದೆ.

'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ಯುವ ರಾಜ್‌ಕುಮಾರ್ ಬಣ್ಣದ ಲೋಕಕ್ಕೆ ಬರಬೇಕಿತ್ತು. ಆ ಸಿನಿಮಾ ನಿಂತ ಬಳಿಕ 'ಯುವ' ಶುರುವಾಯಿತು. ಚಿತ್ರದಲ್ಲಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಯಾಗಿ ಯುವ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ತನ್ನವರಿಗೆ ಹೋರಾಡುವ ನಾಯಕನಾಗಿ ಅಣ್ಣಾವ್ರ ಮೊಮ್ಮಗ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಈಗಾಗಲೇ ಡಾ. ರಾಜ್‌ಕುಮಾರ್ ಹಾದಿಯಲ್ಲಿ ಅದೇ ಕುಟುಂಬದ ಹಲವರು ಕನ್ನಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಅಣ್ಣಾವ್ರ ಬಳಿಕ ಮಕ್ಕಳಾದ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಬಣ್ಣ ಹಚ್ಚಿದ್ದರು. ಜೊತೆಗೆ ಸೋದರ ಸಂಬಂಧಿಗಳಾದ ವಿಜಯ್ ರಾಘವೇಂದ್ರ, ಶ್ರೀಮುರಳಿ ಕೂಡ ಬಂದರು. ಇದೀಗ ಡಾ. ರಾಜ್ ಮೊಮ್ಮಕ್ಕಳ ಸರದಿ ಶುರುವಾಗಿದೆ. ಒಬ್ಬರ ಹಿಂದೆ ಒಬ್ಬರು ಬಣ್ಣ ಹಚ್ಚಿ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.
ಉಳಿದವರಿಗಿಂತ ಯುವ ರಾಜ್‌ಕುಮಾರ್ ಸಿನಿ ಆರಂಗೇಟ್ರಂ ಭಾರೀ ನಿರೀಕ್ಷೆ ಮೂಡಿಸಿದೆ. ಕೆಲವರು ಪುನೀತ್ ರಾಜ್‌ಕುಮಾರ್ ಅವರನ್ನು ಯುವ ರಾಜ್‌ಕುಮಾರ್ ಅವರಲ್ಲಿ ನೋಡಲು ಆರಂಭಿಸಿದ್ದಾರೆ. ಇದೇ ಕಾರಣಕ್ಕೆ 'ಯುವ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡುತ್ತಿದೆ. ಇದೀಗ ನಟ ಶ್ರೀಮುರಳಿ ಯುವ ಸಿನಿಎಂಟ್ರಿ ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ. ಕೋರಮಂಗದಲ್ಲಿ ನಡೆದ 'ಕನ್ನಡ ಕುಣಿತ' ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರೋರಿಂಗ್ ಸ್ಟಾರ್ ಭಾಗವಹಿಸಿದ್ದರು.

ವೇದಿಕೆ ಮೇಲೆ 'ಬೊಂಬೆ ಹೇಳುತೈತೆ' ಹಾಡು ಹಾಡಿ ಶ್ರೀಮುರಳಿ ಮಾತನಾಡಿದರು. "ಇಲ್ಲಿಗೆ ಮುಗ್ದಿಲ್ಲಮ್ಮ, ರಾಜ್ ಕುಡಿ ಎಂಟ್ರಿ ಕೊಡ್ತಾ ಇದೆ. ಯುವ ರಾಜ್‌ಕುಮಾರ್. ಆದಷ್ಟು ಬೇಗ 'ಯುವ' ಸಿನಿಮಾ ಬರ್ತಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನ ಇರುವ ಸಿನಿಮಾ ಬರ್ತಿದೆ. ಇದನ್ನು ಯಾಕೆ ಹೇಳ್ತಿದ್ದೀನಿ ಅಂದ್ರೆ, ಇಲ್ಲಿಗೆ ಮುಗಿಯಲಿಲ್ಲ. ಈಗ ಸ್ಟಾರ್ಟ್. ವಿನಯ್, ಯುವ, ಧೀರೆನ್ ಇದ್ದಾರೆ. ನಾನು, ಅಣ್ಣ, ಶಿವಣ್ಣ ಮಾಮ, ರಾಘು ಮಾಮ ಎಲ್ಲರೂ ಇದ್ದೀವಿ. ನಮ್ಮೆಲ್ಲರ ಜೊತೆ ನೀವೆಲ್ಲಾ ಇದ್ದೀರಾ ಎನ್ನುವ ನಂಬಿಕೆ ಇದೆ" ಎಂದು ಶ್ರೀಮುರಳಿ ಹೇಳಿದ್ದಾರೆ.
ಶ್ರೀಮುರಳಿ ಖಡಕ್ ಮಾತುಗಳು ವೈರಲ್ ಆಗುತ್ತಿದೆ. ಇನ್ನು 'ಬಘೀರ' ಸಿನಿಮಾ ಕೂಡ ನೋಡಿ ಗೆಲ್ಲಿಸಿ ಎಂದು ಶ್ರೀಮುರಳಿ ಮನವಿ ಮಾಡಿದರು. ರೋರಿಂಗ್ ಸ್ಟಾರ್ 'ಬಘೀರ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದ ಟೀಸರ್ ಸೂಪರ್ ಹಿಟ್ ಆಗಿದೆ. ಹಾಲಿವುಡ್ ರೇಂಜ್ ಝಲಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಪ್ರಶಾಂತ್ ನೀಲ್ ಚಿತ್ರಕ್ಕೆ ಕಥೆ ಬರೆದಿದ್ದು ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಡಾ. ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.


Click it and Unblock the Notifications











