ವಿವಾದದ ಸುಳಿಯಲ್ಲಿ 'ಗರುಡಗಮನ ವೃಷಭ ವಾಹನ': ಚಿತ್ರ ತಂಡ ಮಾಡಿದ ಎಡವಟ್ಟೇನು?

ಇತ್ತೀಚೆಗೆ ಬಿಡುಗಡೆಯಾದ ಕನ್ನಡದ 'ಗರುಡ ಗಮನ ವೃಷಭ ವಾಹನ' ಚಿತ್ರ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದೆ. ಚಿತ್ರ ರಿಲೀಸ್‌ಆದ ಬಳಿಕ ಕೆಲ ವರ್ಗದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ಸು ಕಂಡಿದೆ. ಚಿತ್ರದ ಭಿನ್ನ ರೀತಿಯ ಪರಿಕಲ್ಪನೆ ಬಗ್ಗೆ ಚಿತ್ರರಂಗದಲ್ಲೂ ಟಾಕ್ ಕ್ರಿಯೇಟ್ ಆಗಿದೆ.

ಈ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ನಿರ್ದೇಶನ ಅಭಿನಯದ ಜೊತೆಗೆ ನಟ ರಿಷಬ್‌ ಶೆಟ್ಟಿ ಕೂಡ ಅಭಿನಯದ ಮೂಲಕ ಸಾಥ್ ಕೊಟ್ಟಿದ್ದಾರೆ. ಇಬ್ಬರು ತಮ್ಮ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ.

ಈಗ ಈ ಚಿತ್ರ ವಿವಾದದ ಕೇಂದ್ರ ಬಿಂದು ಆಗಿದೆ. ಚಿತ್ರದ ಹಾಡುಗಳ ಬಗ್ಗೆ ಆಕ್ಷೇಪ ಕೇಳಿ ಬರುತ್ತಿದೆ. ಚಿತ್ರದಲ್ಲಿನ ರೌಡಿಸಂ ದೃಶ್ಯಕ್ಕೆ ಮಲೆ ಮಾದೇಶ್ವರನ ಬಗ್ಗೆ ಇರುವ ಹಾಡನ್ನು ಬಳಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ರಾಜ್‌ ಬಿ ಶೆಟ್ಟಿಯ ಕಲ್ಪನೆಯ 'ಸೋಜುಗಾದ ಸೂಜು ಮಲ್ಲಿಗೆ'ಗೆ ಆಕ್ಷೇಪ!

ರಾಜ್‌ ಬಿ ಶೆಟ್ಟಿಯ ಕಲ್ಪನೆಯ 'ಸೋಜುಗಾದ ಸೂಜು ಮಲ್ಲಿಗೆ'ಗೆ ಆಕ್ಷೇಪ!

'ಗರುಡಗಮನ ವೃಷಭ ವಾಹನ' ಚಿತ್ರದಲ್ಲಿನ 'ಸೋಜುಗಾದ ಸೂಜು ಮಲ್ಲಿಗೆ' ಹಾಡು ಮಿಲಿಯನ್​ಗಟ್ಟಲೆ ವೀವ್ಸ್​ ಪಡೆದು ಹಿಟ್‌ ಲಿಸ್ಟ್‌ ಸೇರಿದೆ. ಅದರ ಬೆನ್ನಲ್ಲೇ ಇದೇ ಚಿತ್ರದ ಮತ್ತೊಂದು ಹಾಡು 'ಚಂದ್ರಚೂಡ ಶಿವಶಂಕರ ಪಾರ್ವತಿ' ಎನ್ನುವ ಸಾಹಿತ್ಯ ಇರುವ ಲಿರಿಕಲ್ ವಿಡಿಯೋ ಕೂಡ ಬಿಡುಗಡೆ ಆಗಿದೆ. ಆದರೆ ಸಿನಿಮಾದಲ್ಲಿ ರೌಡಿಸಂ, ಕೊಲೆ, ರಕ್ತಪಾತದ ಹಿನ್ನೆಲೆಯಲ್ಲಿ ಈ ಗೀತೆಗಳನ್ನು ಬಳಸಿರುವುದಕ್ಕೆ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಬಹಿರಂಗ ಪತ್ರ ಬರೆದಿದ್ದು, ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಪತ್ರದಲ್ಲಿ ಅವರು ಹೇಳಿರುವುದು ಏನು? ಎನ್ನುವುದನ್ನು ಮುಂದೆ ಓದಿ..

'ಗರುಡಗಮನ ವೃಷಭ ವಾಹನ' ಹಾಡಿನ ಬಗ್ಗೆ ಸ್ವಾಮೀಜಿ ಬಹಿರಂಗ ಪತ್ರ!

'ಗರುಡಗಮನ ವೃಷಭ ವಾಹನ' ಹಾಡಿನ ಬಗ್ಗೆ ಸ್ವಾಮೀಜಿ ಬಹಿರಂಗ ಪತ್ರ!

ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಚಲನಚಿತ್ರ 'ಗರುಡ ಗಮನ ವೃಷಭ ವಾಹನ' ಚಿತ್ರದಲ್ಲಿ ಪುರಾಣದ ಐತಿಹ್ಯಗಳನ್ನು ಹೋಲಿಸಿ ಚಿತ್ರಕಥೆಯನ್ನು ರೂಪಿಸಲಾಗಿದೆ ಎಂದು ಕೇಳಿ ತಿಳಿದಿದ್ದೇವೆ. ಸಿನಿಮಾ ರಂಗಕ್ಕೆ ಇದೇನೂ ಹೊಸತಲ್ಲ. ಆದರೆ ಈ ಸಿನಿಮಾದ ಒಂದು ಕೊಲೆಯ ನಂತರದ ದೃಶ್ಯದ ಹಿನ್ನೆಲೆಯಾಗಿ ಕೊಲೆಗಾರನು ನರ್ತಿಸುವಾಗ 'ಸೋಜುಗದ ಸೂಜು ಮಲ್ಲಿಗೆ' ಎಂಬ ಮಲೆ ಮಹದೇಶ್ವರ ಸ್ವಾಮಿ ಕುರಿತಾದ ಜಾನಪದ ಗೀತೆಯನ್ನು ಹೊಸದಾಗಿ ಸಂಯೋಜಿಸಿದ ಸಂಗೀತದ ಮೂಲಕ ಹಾಡಿಸಲಾಗಿದೆ".

ಹೀನಕೃತ್ಯದ ದೃಶ್ಯಕ್ಕೆ ಮಾದೇವನ ಹಾಡು ಬಳಸಿದ್ದು ಸರಿಯೇ?

ಹೀನಕೃತ್ಯದ ದೃಶ್ಯಕ್ಕೆ ಮಾದೇವನ ಹಾಡು ಬಳಸಿದ್ದು ಸರಿಯೇ?

"ಯಾವುದೇ ಕಲಾತ್ಮಕ ಕೃತಿಗಳ ಹಾಗೆಯೇ ಸಿನಿಮಾ ರಂಗವೂ ರಚನಾತ್ಮಕವಾಗಿ ಮತ್ತು ಸಮಾಜಮುಖಿಯಾಗಿ ನಡೆದುಕೊಳ್ಳಬೇಕಾಗಿರುವುದು ಈ ಕಾಲದ ಅಗತ್ಯ. ಹೀಗೆ ಮಾಡುವಾಗ ಸೃಜನಶೀಲತೆಯು ಹಲವು ರೂಪಗಳನ್ನು ಪಡೆದುಕೊಳ್ಳುತ್ತದೆ. ಇದಕ್ಕೆ ಯಾರ ವಿರೋಧವೂ ಇರಕೂಡದು. ಆದರೆ ಪ್ರಸ್ತುತ ಪ್ರಕರಣದಲ್ಲಿ ಸಿನಿಮಾ ನಿರ್ದೇಶಕರು ಮಂಗಳೂರಿನ ಸುತ್ತಮುತ್ತಲ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಒಂದು ಕ್ರೌರ್ಯದತ್ತ ವಾಲುವ ಕಥಾಹಂದರವನ್ನು ರೂಪಿಸಿ ಅದರಲ್ಲಿ ನಡೆಯುವ ಕೊಲೆಯೆಂಬ ಹೀನಕೃತ್ಯ ಮಾಡಿ ಸಂಭ್ರಮಿಸುವ ದೃಶ್ಯದ ಹಿನ್ನೆಲೆಯಾಗಿ ಮಾದೇವನನ್ನು ಪೂಜಿಸುವ, ಆರಾಧಿಸುವ ಜಾನಪದ ಹಾಡನ್ನು ಬಳಸಿರುವುದನ್ನು ನೋಡಿದಾಗ ನಿರ್ದೇಶಕರ ಮಾರುಕಟ್ಟೆ ಆಧಾರಿತ ಚಿಂತನೆಯ ಬಗ್ಗೆ ಅನುಕಂಪ ಮೂಡುತ್ತದೆ".

ಕರ್ನಾಟಕದ ಜನತೆಯೇ ಪ್ರಶ್ನಿಸಿ ಉತ್ತರ ಕಂಡುಕೊಳ್ಳಬೇಕಿದೆ: ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು

ಕರ್ನಾಟಕದ ಜನತೆಯೇ ಪ್ರಶ್ನಿಸಿ ಉತ್ತರ ಕಂಡುಕೊಳ್ಳಬೇಕಿದೆ: ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು

ಮಂಗಳೂರಿನ ದಟ್ಟ ಅನುಭವ ಕೊಡುವ ಚಿತ್ರದಲ್ಲಿ ಮೈಸೂರು ಸೀಮೆಯಲ್ಲಿ ಅತಿಹೆಚ್ಚು ಜನಪ್ರಿಯವಾಗಿರುವ ಮಾದೇವನ ಸ್ತುತಿಸುವ, ಈಗ ಹಠಾತ್ತಾಗಿ ಜನಪ್ರಿಯವಾಗಿರುವ ಗೀತೆಯನ್ನು ಯಾವುದೇ ಕಾರಣವಿಲ್ಲದೆ ಸೃಜನಶೀಲತೆ ಎಂಬ ಕಾರಣ ನೀಡಿ ಬಳಸಿರುವುದು ಏಕೆ ಎಂಬುದನ್ನು ಕನ್ನಡ ನಾಡಿನ ಜನರೇ ನಿರ್ಧರಿಸಬೇಕು. ಮಂಗಳೂರು ಸೀಮೆಯಲ್ಲೂ ನೂರಾರು ಶೈವ ಸ್ಥಾನಗಳಿವೆ; ಶಿವನನ್ನು ಸ್ತುತಿಸುವ ನೂರಾರು ಜನಪ್ರಿಯ ಹಾಡುಗಳಿವೆ. ಹೀಗಿದ್ದೂ ದೂರದ ಮಲೈ ಮಹದೇಶ್ವರನ ಕುರಿತ ಹಾಡನ್ನು ಬಳಸುವ ಅನಿವಾರ್ಯತೆ ಅವರಿಗೆ ಏಕೆ ಬಂತು ಎಂಬುದನ್ನು ಕರ್ನಾಟಕದ ಜನತೆಯೇ ಪ್ರಶ್ನಿಸಿ ಉತ್ತರ ಕಂಡುಕೊಳ್ಳಬೇಕಿದೆ.

ಈ ಹಾಡಲ್ಲದೆ ದಾಸಶ್ರೇಷ್ಠ ಪುರಂದರದಾಸರ 'ಚಂದ್ರಚೂಡ ಶಿವಶಂಕರ ಪಾರ್ವತಿ' ಹಾಡನ್ನೂ ಇದೇ ಸಿನಿಮಾದಲ್ಲಿ ಇನ್ನೊಂದು ಸನ್ನಿವೇಶಕ್ಕೆ ಬಳಸಿಕೊಂಡಿದ್ದಾರೆ ಎಂಬುದನ್ನೂ ತಿಳಿದಿದ್ದೇವೆ. ಪುರಂದರ ದಾಸರಾಗಲೀ, ಮನುಷ್ಯತ್ವದಿಂದ ದೈವತ್ವಕ್ಕೇರಿದ ಮಹಾಮಹಿಮ ಮಲೆ ಮಹದೇಶ್ವರ ಸ್ವಾಮಿಗಳಾಗಲೀ, ಭಕ್ತಿ ಪರವಶತೆಯಿಂದ ಪದ್ಯಗಳನ್ನು ರಚಿಸಿದ ಜನಪದರಾಗಲೀ ಈ ಹಾಡುಗಳ ಮೇಲೆ ಯಾವ ಹಕ್ಕುಗಳನ್ನೂ ಇಟ್ಟುಕೊಂಡಿಲ್ಲ. ತಮ್ಮ ಹಾಡುಗಳೆಲ್ಲವೂ ಸಮಾಜದ ಅಭ್ಯುದಯಕ್ಕಾಗಿ ಎಂದೇ ಅವರೆಲ್ಲ ಭಾವಿಸಿದ್ದರು. ಇಂದೇನಾದರೂ ಈ ಹಾಡುಗಳು ಕೃತಿಸ್ವಾಮ್ಯದಡಿ ಇದ್ದ ಪಕ್ಷದಲ್ಲಿ ಏನಾಗುತ್ತಿತ್ತು ಎಂಬುದನ್ನೂ ಈ ನಾಡಿನ ಚಿಂತಕರು, ಸಿನಿಮಾ ರಂಗದ ಅನುಭವಿಗಳು ಯೋಚಿಸಬೇಕಲ್ಲವೆ?.

ಶತಮಾನಗಳ ಕಾಲ ಉಳ್ಳವರು ಬಡವರು ಎಂಬ ಭೇದ ಭಾವವಿಲ್ಲದೆ ಈ ಹಾಡುಗಳನ್ನು ಭಜಿಸುತ್ತ ಶಿವನ ಸಾನಿಧ್ಯ ಬಯಸುತ್ತ ಮೈಲುಗಟ್ಟಲೆ ಪಾದಯಾತ್ರೆ ಮಾಡಿ ಬರುವ ಅಸಂಖ್ಯ ಭಕ್ತರು ಮಹದೇಶ್ವರ ಬೆಟ್ಟವನ್ನು ಹತ್ತುವುದು ತಮ್ಮಲ್ಲಿರುವ ಎಲ್ಲ ಬಗೆಯ ಅರಿ ಷಡ್ವರ್ಗಗಳು ನಾಶವಾಗಲಿ ಎಂದೇ ಹೊರತು ಕ್ರೌರ್ಯದ ಮಾನಸಿಕತೆ ಬೆಳೆಯಲಿ ಎಂದು ಅಲ್ಲವೇ ಅಲ್ಲ.

ವಾಣಿಜ್ಯ ಉದ್ದೇಶದಿಂದ ಮೂಲವನ್ನು ತಿರುಚುವುದು ಸರಿಯೇ: ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು

ವಾಣಿಜ್ಯ ಉದ್ದೇಶದಿಂದ ಮೂಲವನ್ನು ತಿರುಚುವುದು ಸರಿಯೇ: ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು

ಶತಮಾನಗಳ ಕಾಲ ಬಾಳಿದ ಈ ಹಾಡುಗಳು, ಭಗವದ್ಗೀತೆ, ಶಿವಶರಣರ ವಚನಗಳು ಮುಂತಾದ ಸಂತ ಸಾಹಿತ್ಯ, ಜನಪದ ಸಾಹಿತ್ಯದ ಕೃತಿಗಳು ಈ ಎಲ್ಲ ಘಟನೆಗಳನ್ನೂ ಮೀರಿ ಇನ್ನೂ ನೂರಾರು ವರ್ಷಗಳ ಕಾಲ ಜನರ ಮನದಾಳದಲ್ಲಿ ಇದ್ದೇ ಇರುತ್ತವೆ. ಅದರೆ ಡಿಜಿಟಲ್‌ ವೇದಿಕೆಗಳಲ್ಲಿ ಹೆಚ್ಚು ಕಾಲ ಬಾಳುವ ಸಿನಿಮಾಗಳಲ್ಲಿ ಹೀಗೆ ಸಂಬಂಧವಿಲ್ಲದೆ, ಸತರ್ಕವಿಲ್ಲದೆ ಸೃಜನಶೀಲತೆಯ ಹೆಸರಿನಲ್ಲಿ ಹಾಡುಗಳನ್ನು ಬಳಸಿ, ಇನ್ನೊಬ್ಬರು ಹಾಡುವಾಗ ಈ ಕ್ರೌರ್ಯದ ಸನ್ನಿವೇಶಗಳೇ ನೆನಪಾಗುವ ಹಾಗೆ ಮಾಡುವ ಮಾನಸಿಕತೆಗೆ ಏನೆನ್ನಬೇಕು? ಜಾನಪದ, ತಾತ್ವಿಕ ಹಾಡುಗಳ ಸಾಂಸ್ಕೃತಿಕ ಮೌಲ್ಯವನ್ನು ಉಳಿಸಿ ಬೆಳೆಸುವುದು ಮುಖ್ಯವೋ, ಅವುಗಳನ್ನು ವಾಣಿಜ್ಯ ಉದ್ದೇಶದ ರೂಪಕಗಳನ್ನಾಗಿ ರೂಪಾಂತರಿಸುವುದು ಮುಖ್ಯವೋ? ಇದನ್ನೂ ಜನರೇ ತೀರ್ಮಾನಿಸಬೇಕು. ಸೃಜನಶೀಲತೆ ಎಂಬುದು ಸಾಂಸ್ಕೃತಿಕ ಪತನಕ್ಕೆ ಕಾರಣವಾಗದೆ, ಸಮಾಜದ ಉನ್ನತಿಗೆ ಬಳಕೆಯಾಗಲಿ ಎಂದಷ್ಟೆ ಅಂತಿಮವಾಗಿ ಹೇಳಬಹುದಾದ ಮಾತು.

ಕ್ಷಮೆ ಕೇಳಿ ಆಗಬೇಕಾಗಿರೋದೇನೂ ಏನು ಇಲ್ಲ: ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು

ಕ್ಷಮೆ ಕೇಳಿ ಆಗಬೇಕಾಗಿರೋದೇನೂ ಏನು ಇಲ್ಲ: ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು

ಅದ್ಭುತ ಪ್ರತಿಭೆಗಳ ಸಂಗಮ ಎಂದೇ ಸುದ್ದಿಯಾಗಿರುವ ಸಿನೆಮಾ ನಿರ್ಮಾಣ ತಂಡದ ಯಾರೊಬ್ಬರ ಕ್ಷಮೆ ಕೇಳಿ ಆಗಬೇಕಾದ್ದೇನೂ ಇಲ್ಲ. ಕ್ಷಮಾಭಾವವು ವ್ಯಕ್ತಿಯ ಅಂತರಂಗದಲ್ಲಿ ಅದಾಗೇ ಮೂಡಬೇಕೇ ವಿನಃ ಯಾವುದೇ ಒತ್ತಡಕ್ಕೆ ಕೃತಕವಾಗಿ ಹುಟ್ಟಬಾರದು. ಆತ್ಮಸಾಕ್ಷಿ ಇದ್ದವರಿಗೆ ಕ್ಷಮೆ ಕೇಳಬೇಕೇ ಬೇಡವೆ ಎಂದು ನಿರ್ಧರಿಸುವುದೂ ಕಷ್ಟವಾಗುವುದಿಲ್ಲ! ಕೊಲೆಗೆ ರೂಪಕವಾಗಿ ದೇವರ ಹಾಡನ್ನು, ದುರ್ಗಾಸ್ತುತಿಯನ್ನು ಬಳಸುವುದು ತುಂಬ ಹಳೆಯ ತಂತ್ರ. ಹಲವು ಟಿವಿ ಸೀರಿಯಲ್‌ಗಳಲ್ಲೂ ಹೀಗೆ ಮಾಡಿದ್ದಾರೆ ಎಂದು ಕೇಳಿದ್ದೇವೆ. ಇಂತಹ ಚರ್ವಿತಚರ್ವಣ ಸಿದ್ಧ ಮಾದರಿಗಳನ್ನು ಮೀರುವ ಸೃಜನಶೀಲತೆ ಇವರಿಗೆಲ್ಲ ಒದಗಲಿ ಎಂದು ಹಾರೈಸುತ್ತೇವೆ. ಶತಮಾನಗಳಿಂದ ಅರಳಿದ ಜನಪದ ಸೊಗಡಿನ ಹಾಡೊಂದರ ಮೌಲ್ಯವನ್ನು, ಅದರಿಂದ ದೊರಕುವ ಅಮೂಲ್ಯ ದೈವಿಕ ರೂಪಕಗಳನ್ನು ಒಂದು ಸಿನಿಮಾದ ವಾಣಿಜ್ಯ ಉದ್ದೇಶದ ರೂಪಕಕ್ಕಾಗಿ ಬಲಿ ಕೊಡುವುದು ಎಷ್ಟು ಸರಿ?

ಮಹದೇಶ್ವರರು ನೈಜ ವ್ಯಕ್ತಿಯಾಗಿದ್ದು ದೈವತ್ವಕ್ಕೆ ಬೆಳೆದವರು. ಅವರು ಜಾತಿ ಪಂಥ ಭೇದವಿಲ್ಲದೆ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ. ಅವರು ಸಕಲಜೀವಿಗಳಿಗೂ ಲೇಸನ್ನೇ ಬಯಸುವವರು; ಅಲ್ಪಮತಿಗಳಿಗೆ ಜ್ಞಾನ ನೀಡಿ, ಅಂತಹವರ ಅಪಸವ್ಯಗಳನ್ನು ಕ್ಷಮಿಸಿ ನಸುನಗು ಬೀರಿದ ಮಹಾಯೋಗಿ. ಇಂತಹ ಮಹಾಮಹಿಮರ ಬಗ್ಗೆ ಇದ್ದ ಅದ್ಭುತ ಗೀತೆಯೊಂದನ್ನು ಹಾಡುವಾಗ ಯಾವುದೋ ಲೌಕಿಕ ಜಗತ್ತಿಗೆ ಸೇರಿದ ಹಿಂಸಾತ್ಮಕ ಕಥೆಯೊಳಗಿನ ಕ್ರೌರ್ಯವು ನೆನಪಾಗುವಂತೆ ಮಾಡಿದ ನಿರ್ದೇಶಕರನ್ನೂ ಮಹದೇಶ್ವರರು ಹರಸಲಿ; ಅವರಿಗೆ ಮುಂದೆಂದೂ ಇಂತಹ ಚಿಂತನೆಗಳು ಬರದಂತೆ ಸದ್ಬುದ್ಧಿ ನೀಡಲಿ.

ಹೀಗೆ ಚಿತ್ರದಲ್ಲಿ ಬಳಸಲಾಗಿರುವ ಎರಡು ಹಾಡುಗಳ ಬಗ್ಗೆ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಸುದೀರ್ಘ ಪತ್ರ ಪರೆದಿದ್ದಾರೆ.

More from Filmibeat

English summary
Sri Shantha Mallikarjuna Swamy Questions Garuda Gamana Vrishabha Vahana Movie Song, know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X