ವಜ್ರೇಶ್ವರಿ ಕಂಬೈನ್ಸ್ ಭವ್ಯ ಪರಂಪರೆಗೆ 50 ವರ್ಷ; ಸೋಲು ಗೆಲುವಿನ ಲೆಕ್ಕ ಕೊಟ್ಟ ಅಶ್ವಿನಿ
ಪಾರ್ವತಮ್ಮ ರಾಜ್‌ಕುಮಾರ್ ಹುಟ್ಟುಹಾಕಿದ ಶ್ರೀ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ಯಶಸ್ವಿಯಾಗಿ 50 ವರ್ಷ ಪೂರೈಸಿದೆ. 'ತ್ರಿಮೂರ್ತಿ' ಚಿತ್ರದ ಮೂಲಕ ಸಂಸ್ಥೆ ಚಿತ್ರ ನಿರ್ಮಾಣ ಆರಂಭಿಸಿತ್ತು. ಆ ಸಿನಿಮಾ 1975ರಲ್ಲಿ ತೆರೆಗೆ ಬಂದಿತ್ತು. ಇದೀಗ ಅದೇ ಪರಿವಾರದ ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ 'ಎಕ್ಕ' ಸಿನಿಮಾ ಬಿಡುಗಡೆ ಆಗ್ತಿದೆ.
ಯುವ ರಾಜ್‌ಕುಮಾರ್ ನಟನೆಯ 2ನೇ ಸಿನಿಮಾ ಇದು. ಪಿಆರ್‌ಕೆ ಜೊತೆಗೆ ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿವೆ. ರೋಹಿತ್ ಪದಕಿ ನಿರ್ದೇಶನದ ಚಿತ್ರದಲ್ಲಿ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರು. ಚರನ್ ರಾಜ್ ಸಂಗೀತದಲ್ಲಿ ಚಿತ್ರದ ಆಲ್ಬಮ್ ಹಿಟ್ ಆಗಿದೆ.

ಡಾ. ರಾಜ್‌ಕುಮಾರ್ ನಟನೆಯ 'ಸಂಪತ್ತಿಗೆ ಸವಾಲ್' ಸಿನಿಮಾ ರಾಜ್ಯಾದ್ಯಂತ ಭರ್ಜರಿ ಯಶಸ್ಸು ಗಳಿಸಿತ್ತು. ಆದರೂ ನಿರ್ಮಾಪಕರು ತಮಗೆ ನಷ್ಟವಾಗಿದೆ ಎಂದು ಹೇಳಿಕೊಂಡು ಸುತ್ತಾಡಿದ್ದರು. ಇದರಿಂದ ಬೇಸತ್ತು ಪಾರ್ವತಮ್ಮ ರಾಜ್‌ಕುಮಾರ್ ತಾವೇ ಚಿತ್ರ ನಿರ್ಮಾಣ ಮಾಡೋಣ, ಲಾಭ, ನಷ್ಟ ನಮಗೆ ಇರಲಿ ಎಂದು ನಿರ್ಧರಿಸಿದ್ದರು. ಆಗ ಹುಟ್ಟಿದ್ದೇ ಶ್ರೀ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ.
ಮುಂದೆ ವಜ್ರೇಶ್ವರಿ ಸಂಸ್ಥೆಯಲ್ಲಿ ಸಾಕಷ್ಟು ಸಿನಿಮಾಗಳು ನಿರ್ಮಾಣವಾಗಿದ್ದವು. ಈ ಸಂಸ್ಥೆಯಲ್ಲಿ ಬಂದ ಕೊನೆ ಸಿನಿಮಾ 'ರನ್ ಆಂಟನಿ'. ಪೂರ್ಣಿಮಾ ಎಂಟರ್‌ಪ್ರೈಸಸ್, ದಾಕ್ಷಾಯಿಣಿ ಕಂಬೈನ್ಸ್ ಹೆಸರಿನಲ್ಲಿ ಕೂಡ ಪಾರ್ವತಮ್ಮ ಸಿನಿಮಾ ನಿರ್ಮಾಣ ಮಾಡುತ್ತಾ ಬಂದಿದ್ದರು. ಸಂಸ್ಥೆ 50 ವರ್ಷ ಪೂರೈಸಿರುವ ಸಂಭ್ರಮದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸ್ಪೆಷಲ್ ಟ್ರಿಬ್ಯೂಟ್ ವೀಡಿಯೋ ಹಂಚಿಕೊಂಡಿದ್ದಾರೆ. ಸಂಸ್ಥೆಯ ಪರಂಪರೆಯ ಬಗ್ಗೆ ತಾವೇ ಮಾತನಾಡಿದ್ದಾರೆ.
ಆರಂಭದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಸಂದರ್ಶನದ ವೀಡಿಯೋವನ್ನು ನೋಡಬಹುದು. "ನನ್ನ 5 ಜನ ಮಕ್ಕಳು ನನಗೆ 5 ಕಣ್ಣುಗಳು ಇದ್ದ ಹಾಗೆ. ನನಗೆ 4 ಮಕ್ಕಳು ಹುಟ್ಟಿದ ಬಳಿಕ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಬಂದೆ. ಪುನೀತ್ 25 ದಿನದ ಮಗುವಾಗಿದ್ದಾಗ ಅವನಿಂದಲೇ ಕ್ಯಾಮರಾ ಸ್ವಿಚ್ ಆನ್ ಮಾಡಿಸಿದ್ದೆ" ಎಂದು ಅವರು ವಜ್ರೇಶ್ವರಿ ಕಂಬೈನ್ಸ್ ಬಗ್ಗೆ ಮಾತನಾಡಿರುವುದನ್ನು ನೋಡಬಹುದು.
ಬಳಿಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಧ್ವನಿಯಲ್ಲಿ "ಹೀಗೆ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಆರಂಭವಾಯಿತು. ಅಮ್ಮ, ಅಪ್ಪಾಜಿ ಕೇವಲ ಸಿನಿಮಾಗಳನ್ನು ನಿರ್ಮಾಣ ಮಾಡಲಿಲ್ಲ. ಚಂದನವನದ ಪರಂಪರೆ ಎತ್ತಿ ಹಿಡಿದರು. ನಿರ್ಮಿಸಿದ 86 ಸಿನಿಮಾಗಳಲ್ಲಿ 75 ಹಿಟ್‌ಗಳು. 'ಆನಂದ್' ಆಗಿ ಬಂದ ಶಿವಣ್ಣ, 'ಚಿರಂಜೀವಿ ಸುಧಾಕರ' ಆಗಿ ಬಂದ ರಾಘಣ್ಣ, 'ಅಪ್ಪು' ಆಗಿ ಬಂದ ನನ್ನ ಅಪ್ಪು. ಸಿನಿಮಾಗಳು ಇತಿಹಾಸ ಆಯ್ತು. ಜೊತೆಗೆ ಹೆಸರುಗಳು ಶಾಶ್ವತವಾಗಿ ಅಚ್ಚಳಿಯದೇ ಉಳಿಯಿತು. 'ಸಿದ್ದಾರ್ಥ' ಆಗಿ ವಿನಯ್, ಈಗ ಎಕ್ಕ ಆಗಿ 'ಯುವ', ವಜ್ರೇಶ್ವರಿ ಬರೀ ನಮ್ಮ ಸಂಸ್ಥೆಯ ಪರಿವಾರ ಮಾತ್ರವಲ್ಲ, ಎಲ್ಲಾ ಕಲಾವಿದರು, ಅಭಿಮಾನಿಗಳು, ತಂತ್ರಜ್ಞರು ಕಟ್ಟಿರುವ ಕನಸಿನ ಅರಮನೆ ವಜ್ರೇಶ್ವರಿ ಕಂಬೈನ್ಸ್" ಎಂದು ಹೇಳಿರುವುದನ್ನು ಕೇಳಬಹುದು.
'ಶಂಕರ್ ಗುರು', 'ಜೀವನಚೈತ್ರ', 'ಓಂ', 'ನಂಜುಂಡಿ ಕಲ್ಯಾಣ', 'ಅಪ್ಪು', 'ಆಕಾಶ್', 'ಅಪ್ಪು', 'ಆನಂದ್', 'ಮೃತ್ಯುಂಜಯ', 'ಯಾರೇ ಕೂಗಾಡಲಿ', 'ದೇವತಾ ಮನುಷ್ಯ', 'ಆಕಸ್ಮಿಕ', 'ಹಾಲು ಜೇನು' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳು ಈ ಸಂಸ್ಥೆಯಲ್ಲಿ ನಿರ್ಮಾಣವಾಗಿತ್ತು. ಪಾರ್ವತಮ್ಮ ತಾವು ಬೆಳೆದು ತಮ್ಮವರನ್ನು ಬೆಳೆಸುವ ಪ್ರಯತ್ನ ಮಾಡಿದರು. ಕನ್ನಡ ಚಿತ್ರರಂಗದಲ್ಲೇ ಬಹಳ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಎನಿಸಿಕೊಂಡಿದೆ. ವಜ್ರೇಶ್ವರಿ ಕಂಬೈನ್ಸ್ ಸಹೋದರ ಸಂಸ್ಥೆ ಪಿಆರ್‌ಕೆ ಪ್ರೊಡಕ್ಷನ್ 8 ವರ್ಷಗಳ ಹಿಂದೆ ಹುಟ್ಟಿತ್ತು. ಪುನೀತ್ ರಾಜ್‌ಕುಮಾರ್ ಸಂಸ್ಥೆ ಹುಟ್ಟುಹಾಕಿ ಚಿತ್ರ ನಿರ್ಮಾಣ ಆರಂಭಿಸಿದ್ದರು.


Click it and Unblock the Notifications











