"ಆಗ ನಿದ್ದೆ ಮಾಡ್ತಿದ್ರ ಎಲ್ಲಾ?" ಶಿವಣ್ಣ, ವಿನಯ್‌ಗೆ ಯುವ ಪತ್ನಿ ಶ್ರೀದೇವಿ ತಿರುಗೇಟು
ನಟಿ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ನಡುವಿನ ಸಂಘರ್ಷ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ರಮ್ಯಾ ಪರ ನಟ ವಿನಯ್ ರಾಜ್‌ಕುಮಾರ್ ಹಾಗೂ ಶಿವಣ್ಣ- ಗೀತಾ ದಂಪತಿ ಬ್ಯಾಟ್ ಬೀಸಿದ್ದರು. ರಮ್ಯಾ ಬೆಂಬಲಕ್ಕೆ ನಿಂತು ಪೋಸ್ಟ್ ಮಾಡಿದ್ದರು. ಇದೀಗ ವಿನಯ್ ಹಾಗೂ ಶಿವಣ್ಣಗೆ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಟಾಂಗ್ ಕೊಟ್ಟಿದ್ದಾರೆ.
ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಾಕಿರುವ ಶ್ರೀದೇವಿ ಭೈರಪ್ಪ ನೇರವಾಗಿಯೇ ಟಾಂಗ್ ಕೊಟ್ಟಿದ್ದಾರೆ. ಇಷ್ಟು ದಿನ ಮಲಗಿದ್ರಾ? ಎಂದು ವ್ಯಂಗ್ಯವಾಡಿದ್ದಾರೆ. "ಮಾಧ್ಯಮಗಳಲ್ಲಿ ಮಹಿಳೆಯನ್ನು ಅವಮಾನಿಸುವುದರ ವಿರುದ್ಧ ಮಾತಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಮಾತಾಡದೆ ಸುಮ್ಮನೆ ಇದ್ರಲ್ಲ, ಆವಾಗ ನಿದ್ದೆ ಮಾಡ್ತಾ ಇದ್ರ ಎಲ್ಲಾ ??" ಎಂದು ಶ್ರೀದೇವಿ ಭೈರಪ್ಪ ಒಂದು ಪೋಸ್ಟ್ ಮಾಡಿದ್ದಾರೆ.

ಇನ್ನು ನಟಿ ರಮ್ಯಾ ಬೆಂಬಲಿಸಿ ವಿನಯ್ ರಾಜ್‌ಕುಮಾರ್ ಮಾಡಿದ್ದ ಪೋಸ್ಟ್ ಟ್ಯಾಗ್ ಮಾಡಿ ಶ್ರೀದೇವಿ ಮತ್ತೊಂದು ಸ್ಟೋರಿ ಹಾಕಿದ್ದಾರೆ. "ಇಷ್ಟು ದಿನ ಎಲ್ಲಿದ್ದಪ್ಪ" ಎಂದು ಬರೆದು ನಗುವ ಎಮೋಜಿ ಹಾಕಿದ್ದಾರೆ. ಆ ಮೂಲಕ ರಮ್ಯಾ ಅವರನ್ನು ಬೆಂಬಲಿಸಲು ಮುಂದಾಗಿರುವ ಶಿವಣ್ಣ ಹಾಗೂ ವಿನಯ್ ತಮ್ಮ ಮನೆಯಲ್ಲೇ ನನಗೆ ಅನ್ಯಾಯವಾದಾಗ ಯಾಕೆ ಸುಮ್ಮನಿದ್ರಿ? ಎಂದು ಅಣಕವಾಡಿದ್ದಾರೆ.
ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದರು. ಈ ಸಂಬಂಧ ರಮ್ಯಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದೇ ವಿಚಾರವಾಗಿ ನಟ ಶಿವರಾಜ್‌ಕುಮಾರ್ ""ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖ೦ಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ; ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಸೋಶಿಯಲ್ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ, ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು, ಅವಾಚ್ಯ ಶಬ್ದಗಳಿಂದ ನಿ೦ದಿಸಿ, ದ್ವೇಷ- ಅಸೂಯೆಯನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲುವು ಸರಿಯಿದೆ, ರಮ್ಯಾ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ" ಎಂದು ಪೋಸ್ಟ್ ಮಾಡಿದ್ದರು.

ಶಿವಣ್ಣ ಪೋಸ್ಟ್ ಮಾಡುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡಲು ಆರಂಭಿಸಿದ್ದರು. ಮೊದಲು ನಿಮ್ಮ ಮನೆಯಲ್ಲಿ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಅವರಿಗೆ ಅನ್ಯಾಯವಾಗಿದೆ ನ್ಯಾಯ ಕೊಡಿಸಿ, ಎಂದು ಕಾಮೆಂಟ್ ಮಾಡುತ್ತಿದ್ದರು. ಇದೀಗ ಇದೇ ವಿಚಾರದ ಬಗ್ಗೆ ಶ್ರೀದೇವಿ ಭೈರಪ್ಪ ಪ್ರತಿಕ್ರಿಯಿಸಿದ್ದಾರೆ.
ರಮ್ಯಾಗೆ ದರ್ಶನ್ ಫ್ಯಾನ್ಸ್ ಕೆಟ್ಟದಾಗಿ ಮೆಸೇಜ್ ಮಾಡಿದ ವಿಚಾರವಾಗಿ ನಿನ್ನೆ ವಿನಯ್ "ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣುವ ಪ್ರಪಂಚ, ಬೆಳವಣಿಗೆಗೂ ಮುನ್ನ ನಾಶವಾಗಬೇಕು" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.
ಭಿನ್ನಾಭಿಪ್ರಾಯಗಳಿಂದ ನಟ ಯುವರಾಜ್‌ಕುಮಾರ್ ಪತ್ನಿಯಿಂದ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಅದಕ್ಕೆ ಶ್ರೀದೇವಿ ಭೈರಪ್ಪ ಸಿದ್ಧರಿಲ್ಲ. ಕಳೆದ ವರ್ಷ ಜೂನ್ 6ರಂದು ಯುವ ಡಿವೋರ್ಸ್ ಅರ್ಜಿ ಸಲ್ಲಿಸಿದ್ದರು.


Click it and Unblock the Notifications











