ನಾನು ಬದುಕಬೇಕು, ಮೊದಲಿನಂತೆ ಆಗಬೇಕು ; ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿ ಕಣ್ಣೀರಾದ ವಧು ಖ್ಯಾತಿಯ ಶ್ರೀಧರ್..!
ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ.. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಕೆಲವೊಂದು ಬಾರಿ ಸಂಕಷ್ಟಗಳು ಒಂದಾದ ಮೇಲೊಂದು ಬಂದೆರಗಿ ಜೀವನವನ್ನು ದುಸ್ತರವನ್ನಾಗಿಸುತ್ತೆ. ಯಾಕಾದರೂ ಬದುಕಬೇಕು .. ದೇವರು ಯಾಕೆ ಈ ಶಿಕ್ಷೆ ಕೊಡುತ್ತಿದ್ದಾನೆ .. ಎಂಬ ಭಾವನೆ ಮೂಡುತ್ತೆ. ಕ್ಷಣ ಕ್ಷಣಕ್ಕೂ ದುಗುಡ ದುಮ್ಮಾನ ಹೆಚ್ಚಾಗುತ್ತೆ.
ಮನುಷ್ಯ ಎಷ್ಟೇ ಯೋಜನೆ- ಯೋಚನೆ ಹಾಕಿಕೊಂಡರೂ ವಿಧಿಯ ಯೋಜನೆ ಬೇರೆಯೇ ಆಗಿರುತ್ತೆ. ಇದಕ್ಕೆ ವಧು ಧಾರಾವಾಹಿಯ ಖ್ಯಾತಿಯ ಶ್ರೀಧರ್ ಬದುಕು ಸದ್ಯದ ಉದಾಹರಣೆ. ಹೌದು, ಶ್ರೀಧರ್.. ಕನ್ನಡ ಕಿರುತೆರೆಯ ಖ್ಯಾತ ಹೆಸರು. ವಧು ಮತ್ತು ಪಾರು ಧಾರಾವಾಹಿಯಲ್ಲಿ ನೀವು ಇವರನ್ನು ನೋಡಿರುತ್ತೀರಾ. ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರದಲ್ಲಿ ಕೂಡ ಶ್ರೀಧರ್ ಕಾಣಿಸಿಕೊಂಡಿದ್ದರು.

ಇಂಥಾ ಶ್ರೀಧರ್ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದಾರೆ. ಗುರುತು ಸಿಗದಂತೆ ಶ್ರೀಧರ್ ಬದಲಾಗಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಕೂಡ ಸಿಲುಕಿದ್ದಾರೆ. ಕಮಲಿ ಖ್ಯಾತಿಯ ಅಂಕಿತಾ, ಸ್ವಪ್ನಾ ದೀಕ್ಷಿತ್, ವರ್ಷಿತಾ ಸೇನಿ ಸೇರಿ ಹಲವಾರು ಕಿರುತೆರೆಯ ಕಲಾವಿದರು ಶ್ರೀಧರ್ ಅವರ ಕಷ್ಟಕ್ಕೆ ಮಿಡಿದಿದ್ದಾರೆ. ಸಹಾಯ ಮಾಡುವಂತೆ ಅನೇಕರಲ್ಲಿ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.
ಇವರೆಲ್ಲರ ಮನವಿಗೆ ಜನಸಾಮಾನ್ಯರಿಂದ ಮತ್ತು ಕಿರುತೆರೆಯ ಬಾಕಿ ಕಲಾವಿದರಿಂದ ಸ್ಪಂದನೆ ಸಿಗುತ್ತಿದೆ. ಇದರ ನಡುವೆ ಈಗ ಶ್ರೀಧರ್ ತಮ್ಮ ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಹೇಗಿದ್ದ ನಾನು ಹೇಗಾದೇ ಎಂದು ನೊಂದು ಕಣ್ಣೀರು ಹಾಕಿದ್ದಾರೆ.
ಕಾಲೆಲ್ಲ ಊದಿಕೊಂಡಿತು
ಹೌದು, ಶ್ರೀಧರ್ ತಮ್ಮ ಆರೋಗ್ಯದ ಕುರಿತು ಕೆಲ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಈ ಆಡಿಯೋ ಈಗ ವೈರಲ್ ಆಗಿದ್ದು ಅಕ್ಟೋಬರ್‌ನಲ್ಲಿ ನನಗೆ ಆರೋಗ್ಯ ಸಮಸ್ಯೆ ಶುರುವಾಯ್ತು ಎಂದು ಹೇಳಿದ್ದಾರೆ. ತಮ್ಮ ಆರೋಗ್ಯದ ಕುರಿತು ಮಾತನಾಡಿರುವ ಶ್ರೀಧರ್, ಅಕ್ಟೋಬರ್‌ನಲ್ಲಿಯೇ ನನಗೆ ಈ ಆರೋಗ್ಯ ಸಮಸ್ಯೆ ಶುರುವಾಗಿತ್ತು ಎಂದು ಹೇಳಿದ್ದಾರೆ.
ಮೊದಲು ಜ್ವರ ಬಂತು ಆ ನಂತರ ಕಫ ಆಯ್ತು ಹೀಗಾಗಿ ನಾನು ಡಾಕ್ಟರ್ ಬಳಿ ಚೆಕಪ್ ಮಾಡಿಸಿದೆ, ಆದರೆ ಆರೋಗ್ಯ ಮಾತ್ರ ಸರಿಯಾಗಲಿಲ್ಲ ಎಂದಿರುವ ಶ್ರೀಧರ್ ಆಗ ನನ್ನ ಕಾಲೆಲ್ಲ ಊದಿಕೊಳ್ಳಲು ಶುರುವಾಯ್ತು ಎಂದು ಹೇಳಿದ್ದಾರೆ.
ನೋವಲ್ಲೇ ಚಿತ್ರೀಕರಣಕ್ಕೆ ಹೋಗಿದ್ದೇ
ನನ್ನ ದೇಹದಲ್ಲಿ ವಿಟಮಿನ್, ಪ್ರೋಟಿನ್, ಎಲ್ಲವೂ ಕಡಿಮೆ ಆಯ್ತು, ಕಾಲು ಊದಿಕೊಂಡಾಗ ಕೂಡ ನಾನು ವಧು ಮತ್ತು ಸಿಂಧೂ ಭೈರವಿ ಚಿತ್ರೀಕರಣಕ್ಕೆ ಹೋಗುತ್ತಿದ್ದೇ ಆದರೆ ಆಗ ನನಗೆ ತುಂಬಾ ಸುಸ್ತಾಗಲು ಶುರುವಾಯ್ತು ಎಂದಿರುವ ಶ್ರೀಧರ್ ನಾನೊಬ್ಬನೇ ಇರುವುದರಿಂದ ನನ್ನ ಆರೈಕೆ ಮಾಡೋರು ಯಾರು ಇರಲಿಲ್ಲ, ಬಹುಶಃ ಯಾರಾದರೂ ಇದ್ದಿದ್ದರೆ ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇನ್ನು ಅನಾರೋಗ್ಯಕ್ಕೀಡಾದ ನಂತರ ನನ್ನ ಸ್ನೇಹಿತರೊಬ್ಬರು ಆರ್ಯುವೇದಿಕ್ ಡಾಕ್ಟರ್ ಬಳಿ ಕರೆದುಕೊಂಡು ಹೋದರು ಎಂದು ಹೇಳಿರುವ ಶ್ರೀಧರ್ ಅಲ್ಲಿ ನನಗೆ 20 ದಿನ ಪಥ್ಯ ಮಾಡೋಕೆ ಹೇಳಿದರು ಆ ನಂತರ ನನ್ನ ಇಡೀ ದೇಹವೇ ಊದಿಕೊಂಡಿತು ಎಂದು ಹೇಳಿದ್ದಾರೆ.
ನಡೆಯೋಕು ಆಗುತ್ತಿಲ್ಲ
ಮುಂದುವರೆದು ಆ ನಂತರ ನಾನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದೆ. ಅಲ್ಲಿ 15 ದಿನ ಇದ್ದೆ ಆದರೆ ಅಲ್ಲಿ ಯಾವುದೇ ಚಿಕಿತ್ಸೆ ಕೊಡಲಿಲ್ಲ ಎಂದಿರುವ ಶ್ರೀಧರ್ ಆ ನಂತರ ನನ್ನನ್ನು ಬ್ಯಾಪಿಸ್ಟ್ ಆಸ್ಪತ್ರೆಗೆ ಸೇರಿಸಿದರು ಎಂದು ಹೇಳಿದ್ದಾರೆ.
ಅಮ್ಮ ನನ್ನ ಜೊತೆ ಇದ್ದಾರೆ, ಚಿಕಿತ್ಸೆ ನಡೆಯುತ್ತಿದೆ, ಸಂಪೂರ್ಣ ದೇಹಕ್ಕೆ ಇನ್ಪೇಕ್ಷನ್ ಆಗಿದೆ, ಅಲ್ಸರ್ ಆಗಿದೆ, ನಡೆಯೋದಕ್ಕೂ ಕೂಡ ಆಗುತ್ತಿಲ್ಲ ಎಂದಿರುವ ಶ್ರೀಧರ್ ಬದುಕು ತುಂಬಾ ಕಷ್ಟ ಅನ್ನಿಸುತ್ತಿದೆ, ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.
ಬದುಕಬೇಕು ಮೊದಲಿನಂತೆ ಆಗಬೇಕು
ನನಗೆ ಯಾವ ದುರಭ್ಯಾಸ ಇಲ್ಲ ಆದರೂ ನನಗೆ ಯಾಕೆ ಈ ರೀತಿ ಆಗಿದೆ ಎಂದು ನೊಂದುಕೊಂಡು ಮಾತನಾಡಿರುವ ಶ್ರೀಧರ್ ಸ್ನೇಹಿತರು ಸಹಾಯ ಮಾಡುತ್ತಿದ್ದಾರೆ, ನಾನು ಬದುಕಬೇಕು, ಮೊದಲಿನಂತೆ ಆಗಬೇಕು, ಹಲವು ತಿಂಗಳಿಂದ ಮನೆಯ ಬಾಡಿಗೆಯನ್ನು ಕೂಡ ಕಟ್ಟಿಲ್ಲ, ನಟನೆಯ ಜೊತೆ ನಾನು ಇಡ್ಲಿ, ದೋಸೆ, ವಡೆ ಮಾರುತ್ತಿದ್ದೆ ಎಂದು ಕಣ್ಣೀರು ಹಾಕಿದ್ದಾರೆ.
ಸದ್ಯ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ನನ್ನ ಜೊತೆ ಕೆಲಸ ಮಾಡಿದ ನನ್ನ ಧಾರಾವಾಹಿಯ ಎರಡು ಮೂರು ಸ್ನೇಹಿತರು ಬಂದು ಮಾತನಾಡಿಸಿಕೊಂಡು ಹೋಗಿದ್ದಾರೆ ಎಂದಿರುವ ಶ್ರೀಧರ್ ಅವರು ಆರ್ಥಿಕ ಸಹಾಯವನ್ನು ಕೂಡ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು ದಿನಕ್ಕೆ ಹತ್ತು ಹನ್ನೆರಡು ಸಾವಿರ ಖರ್ಚಾಗುತ್ತಿದೆ, ಏನಾದರೂ ಟೆಸ್ಟ್‌ಗಳನ್ನು ಮಾಡಿಸಿದರೆ ಬಿಲ್ ಇನ್ನು ಹೆಚ್ಚಾಗುತ್ತೆ ಎಂದು ಬೇಸರ ಮಾಡಿಕೊಂಡಿರುವ ಶ್ರೀಧರ್ ಈಗಾಗಲೇ ಮೂರು ಲಕ್ಷ ಖರ್ಚು ಆಗಿದೆ ಎಂದು ಹೇಳಿದ್ದಾರೆ.
ನನಗೆ ಯಾರು ಇಲ್ಲ ಅಂದುಕೊಂಡಿದ್ದೇ
ಐಸಿಯುನಲ್ಲಿ ದಾಖಲಾದರೆ ಒಂದು ದಿನಕ್ಕೆ 60 ಸಾವಿರ ಬೇಕಂತೆ, ಆ ಹಂತಕ್ಕೆ ಹೋಗದೇ ಇರಲಿ ಎಂದು ನಾನು ಬೇಡಿಕೊಳ್ಳುತ್ತಿದ್ದೇನೆ ಎಂದಿರುವ ಶ್ರೀಧರ್ ಸದ್ಯ ನನ್ನ ತಾಯಿ ನನ್ನನ್ನೂ ಈಗ ನೋಡಿಕೊಳ್ಳುತ್ತಿದ್ದಾರೆ, ದಿನದ ಖರ್ಚಿಗೆ ಹಣ ಸಿಕ್ಕರೆ ಸಾಕು ಎನ್ನುವಂತಾಗಿದೆ ನನ್ನ ಪರಿಸ್ಥಿತಿ ಎಂದು ತಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ.
ನನಗೆ ಯಾರು ಇಲ್ಲ ಎಂದುಕೊಂಡಿದ್ದೇ ಆದರೆ ಅನೇಕರು ನನಗೆ ಸಹಾಯ ಮಾಡುತ್ತಿದ್ದಾರೆ, ಇದೆಲ್ಲದರಿಂದ ಮಾತ್ರೆಗೆ, ನನ್ನ ಸಣ್ಣ ಪುಟ್ಟ ಖರ್ಚಿಗೆ ಇದರಿಂದ ಸಹಾಯವಾಗುತ್ತಿದೆ ಎಂದಿರುವ ಶ್ರೀಧರ್
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರ ಬರುವಾಗ ಎಷ್ಟು ಬಿಲ್ ಆಗುತ್ತೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ಧಾರೆ. ನಾನು ಹೊರ ಬಂದ ನಂತರ ಕೂಡ ಒಂದೆರಡು ವರ್ಷ ಯಾವ ಕೆಲಸ ಕೂಡ ಮಾಡುವಂತೆ ಇಲ್ಲ ನಾನು ಎಷ್ಟು ಚೆನ್ನಾಗಿದ್ದೆ ಗೊತ್ತಾ? ಎಂದು ಶ್ರೀಧರ್ ಕಣ್ಣೀರು ಹಾಕಿದ್ದಾರೆ.
ಹೀಗೆ ಶ್ರೀಧರ್ ತಮ್ಮ ಮನದ ನೋವನ್ನು ಮಾಧ್ಯಮದವರ ಜೊತೆ ಹಂಚಿಕೊಂಡಿದ್ದು ಸದ್ಯ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕರು ಶ್ರೀಧರ್ ಬೇಗ ಗುಣಮುಖರಾಗಲಿ, ಅವರ ಸಂಕಷ್ಟಗಳೆಲ್ಲ ದೂರವಾಗಲಿ ಎಂದು ಹಾರೈಸುತ್ತಿದ್ದಾರೆ. ಇನ್ನು, ಆಸ್ಪತ್ರೆಗೆ ದಾಖಲಾಗುವ ಮುನ್ನ ಕಿಚ್ಚ ಸುದೀಪ್ ಅವರ ಜೊತೆ ಶ್ರೀಧರ್ ಮ್ಯಾಕ್ಸ್ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆ ಶ್ರೀಧರ್ ಅವರ ಕಷ್ಟಕ್ಕೆ ಸುದೀಪ್ ನೆರವಾಗಲಿ ಎಂದು ಆಶಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ಅವರಲ್ಲಿ ಈ ವಿಚಾರದಲ್ಲಿ ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ.
ಒಟ್ನಲ್ಲಿ ಸದ್ಯ ಶ್ರೀಧರ್ ತಮ್ಮ ಆರೋಗ್ಯದ ಕುರಿತು ಮಾತನಾಡಿದ್ದು, ಆರೋಗ್ಯದಲ್ಲಿ ಚೇತರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ. ತಮ್ಮ ಅಭಿನಯದಿಂದ ಅನೇಕರ ಮನ ಗೆದ್ದ ಕನ್ನಡದ ಈ ಪ್ರತಿಭಾವಂತ ನಟ ಶೀಘ್ರ ಗುಣಮುಖರಾಗಲಿ, ಆಸ್ಪತ್ರೆಯಿಂದ ಹೊರ ಬಂದು ಮೊದಲಿನಂತೆ ಆಗಲಿ, ಕಿರುತೆರೆ ಮತ್ತು ಹಿರಿತೆರಯಲ್ಲಿ ಮತ್ತಷ್ಟು ವೈವಿಧ್ಯಮಯ ಪಾತ್ರಗಳನ್ನು ಶ್ರೀಧರ್ ನಿರ್ವಹಿಸುವಂತಾಗಲಿ, ತಮ್ಮ ಕಲಾ ಸೇವೆಯನ್ನು ಶ್ರೀಧರ್ ಮುಂದುವರೆಸಲಿ ಎನ್ನುವುದೇ ನಮ್ಮ ಆಶಯ.


Click it and Unblock the Notifications











