»   » ಕ್ರಿಕೆಟ್ಟಿನಿಂದ ಕಿರುತೆರೆಗೆ ಜಾರಿರುವ ಶ್ರೀಕಾಂತ್‌,

ಕ್ರಿಕೆಟ್ಟಿನಿಂದ ಕಿರುತೆರೆಗೆ ಜಾರಿರುವ ಶ್ರೀಕಾಂತ್‌,

Posted By: Staff
Subscribe to Filmibeat Kannada

ಸ್ಟೈಲಿಷ್‌ ಹೊಡೆತಗಳಿಗೆ ಹೆಸರಾದ ಭಾರತ ಕ್ರಿಕೆಟ್‌ ತಂಡದ ಮಾಜಿ ಓಪನರ್‌ ಕೃಷ್ಣಮಾಚಾರಿ ಶ್ರೀಕಾಂತ್‌ ಕನ್ನಡ ಕಿರುತೆರೆಯಲ್ಲಿ ತಮ್ಮ ಇನಿಂಗ್ಸ್‌ ಪ್ರಾರಂಭಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತಿಗೆ ಸಿಕ್ಕಾಗ ಶ್ರೀಕಾಂತ್‌ ಮೊಗದಲ್ಲಿ ಕನ್ನಡ ಕಿರುತೆರೆಗೆ ಅಡಿಯಿಟ್ಟ ಸಂತೋಷ, ತಲೆಯಲ್ಲಿ ನೂರಾರು ಯೋಜನೆಗಳು.

ಕನ್ನಡ ಧಾರಾವಾಹಿ ನಿರ್ಮಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು ಶ್ರೀಕಾಂತ್‌. ಅಂದಹಾಗೆ ಶ್ರೀಕಾಂತ್‌ ನಿರ್ಮಾಣದ ಮೆಗಾ ಧಾರಾವಾಹಿ ಹೆಸರು-'ಗೌತಮಿ". ಕ್ರಿಸ್‌ ಶ್ರೀಕಾಂತ್‌ ಸ್ಪೋರ್ಟ್ಸ್‌ ಎಂಟರ್‌ಟೈನ್‌ಮೆಂಟ್‌ ಪ್ರೆೃವೇಟ್‌ ಲಿಮಿಟೆಡ್‌ ಈಟೀವಿಗಾಗಿ ನಿರ್ಮಿಸಿರುವ 'ಗೌತಮಿ" ಮೆಗಾ ಧಾರಾವಾಹಿ ಅಕ್ಟೋಬರ್‌ 1 ರಿಂದ ತನ್ನ ಪ್ರಸಾರ ಪ್ರಾರಂಭಿಸುತ್ತಿದೆ. ಶನಿವಾರ, ಭಾನುವಾರ ಹೊರತುಪಡಿಸಿ ಪ್ರತಿದಿನ ಇಳಿಸಂಜೆ 6.30 ಕ್ಕೆ ಮನೆ ಮನೆಯಲ್ಲಿ ಗೌತಮಿಯ ಹಾಜರಿ.

ಗೌತಮಿ ಎಂದರೆ ಈಕೆ ಕಿಸಾ ಗೋತಮಿಯಲ್ಲ , ಇವಳು ಸಮಾಜದಿಂದ ನಲುಗಿದ ಹೆಣ್ಣು. ಬೆಂಕಿಯಲ್ಲಿ ಅರಳಿದ ಹೂ ಎಂದರೂ ಸರಿಯಾದೀತು. ಸಮಾಜದ ಉರಿಗಣ್ಣಿನ ನಡುವೆಯೇ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುವ ಗೌತಮಿ ಸುಮಾರು 250 ಕಂತುಗಳಲ್ಲಿ ಪ್ರಸಾರವಾಗಲಿದ್ದಾಳೆ. ಕೆಎಸ್‌ಆರ್‌ ದಾಸ್‌ ನಿರ್ದೇಶನ, ಹಂಸಲೇಖಾ ಸಂಗೀತ ರಕ್ಷೆ ಅವಳ ಪಾಲಿಗೆ.

ಅನಂತನಾಗ್‌, ಪದ್ಮಾ ವಾಸಂತಿ, ವಾಣಿಶ್ರೀ, ಮಾಧುರಿ, ಡಾ.ಸಂಜಯ್‌ ಮುಂತಾದ ಖ್ಯಾತನಾಮರನ್ನು ಗೌತಮಿಗಾಗಿ ಶ್ರೀಕಾಂತ್‌ ಕಲೆ ಹಾಕಿದ್ದಾರೆ. ಗರ್ವದ ಮೂಲಕ ಈಗಾಗಲೇ ಕಿರುತೆರೆಯಲ್ಲಿ ಪ್ರಭುತ್ವ ಸಾಧಿಸಿರುವ ಅನಂತನಾಗ್‌ಗೆ ಗೌತಮಿ ಮೂಲಕ ಮತ್ತೊಂದು ಸವಾಲಿನ ಪಾತ್ರ. ಮಂಡ್ಯ ರಮೇಶ್‌, ಡಿಂಗ್ರಿ ನಾಗರಾಜ್‌, ಬ್ಯಾಂಕ್‌ ಜನಾರ್ಧನ್‌ ಕೂಡ ಗೌತಮಿ ತಂಡದಲ್ಲಿದ್ದಾರೆ. ಗೌತಮಿ ಗೆಲುವಿನ ಬಗ್ಗೆ ಶ್ರೀಕಾಂತ್‌ ಅವರಿಗಂತೂ ತುಂಬು ವಿಶ್ವಾಸ.

ಕನ್ನಡದಲ್ಲಿ ಅನೇಕ ಟೀವಿ ಧಾರಾವಾಹಿಗಳನ್ನು ನಿರ್ಮಿಸುವ ಉದ್ದೇಶ ಇರುವುದನ್ನು ಶ್ರೀಕಾಂತ್‌ ಸುದ್ದಿಗೋಷ್ಠಿಯಲ್ಲಿ ತೋಡಿಕೊಂಡರು. ಗೌತಮಿ ಆರಂಭವಷ್ಟೇ. ಬರುವ ತಿಂಗಳುಗಳಲ್ಲಿ ಕ್ರಿಕೆಟ್‌ ಹಾಗೂ ಕ್ರಿಕೆಟೇತರ ಕಾರ್ಯಕ್ರಮಗಳನ್ನು ಈಟೀವಿಗಾಗಿ ರೂಪಿಸುವ ಪ್ಲಾನ್‌ಗಳು ಶ್ರೀಕಾಂತ್‌ ಅವರಲ್ಲಿವೆ.

ಅಂದಹಾಗೆ, ಶ್ರೀಕಾಂತ್‌ ಕಿರುತೆರೆಗೆ ಹೊಸಬರೇನಲ್ಲ . ಈಗಾಗಲೇ ತಮಿಳು ಹಾಗೂ ತೆಲುಗು ವಾಹಿನಿಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನಿರ್ಮಿಸಿ ಜನಪ್ರಿಯತೆ ಗಳಿಸಿದ್ದಾರೆ. 'ಗೋಲ್ಡನ್‌ ಮೂಮೆಂಟ್ಸ್‌ ಆಫ್‌ ಇಂಡಿಯನ್‌ ಕ್ರಿಕೆಟ್‌" ಸರಣಿಯಂತೂ ಶ್ರೀಕಾಂತ್‌ ಅವರಿಗೆ ಅಪಾರ ಯಶಸ್ಸು ತಂದುಕೊಟ್ಟಿತ್ತು . ಆ ಯಶಸ್ಸು ಕನ್ನಡಕ್ಕೂ ಅವರನ್ನು ಕರೆ ತಂದಿದೆ. ಬೆಂಗಳೂರನ್ನು ಕಾರ್ಯಕ್ಷೇತ್ರವಾಗಿಸಿಕೊಳ್ಳುವ ಒಲವೂ ಅವರೊಳಗೆ ಮೊಳೆತಿದೆ. ಶ್ರೀಕಾಂತ್‌ಗೆ ಶುಭವಾಗಲಿ. ಅವರ ಇನಿಂಗ್ಸ್‌ ದೀರ್ಘವಾಗಿರಲಿ.

ಬಾಲಂಗೋಚಿ: ಮಾಲ್ಕಂ ಮಾರ್ಷಲ್‌ ಬೌನ್ಸರ್‌ ಎದುರಿಸುವುದು ಕಷ್ಟವೋ, ಟೀವಿ ಧಾರಾವಾಹಿ ನಿರ್ಮಾಣ ಕಷ್ಟವೋ? ಶ್ರೀಕಾಂತ್‌ ತಿಣುಕದೆ ಹೇಳಿದರು, ಮಾರ್ಷಲ್‌ ಬೌನ್ಸರ್‌ ಎದುರಿಸುವುದೇ ಸುಲಭ!

English summary
Krishnamachari Srikkanth, is now opening his innings in the field of Kannada television

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada