»   » ಶ್ರಿಕೃಷ್ಣ ಸಂಧಾನ: ರಂಗದಿಂದ ಸಿನಿಮಾಕ್ಕೆ

ಶ್ರಿಕೃಷ್ಣ ಸಂಧಾನ: ರಂಗದಿಂದ ಸಿನಿಮಾಕ್ಕೆ

Posted By: Super
Subscribe to Filmibeat Kannada

ರಂಗಭೂಮಿಗೂ ಚಿತ್ರರಂಗಕ್ಕೂ ಅತ್ಯಂತ ನಿಕಟ ನಂಟು. ಚಿತ್ರರಂಗದ ಮಂದಿಗೆ ರಂಗಭೂಮಿಯ ಬಗೆಗೆ ಅಂಥ ಆಕರ್ಷಣೆ ಇಲ್ಲವಾದರೂ, ರಂಗಭೂಮಿಯ ಮಂದಿಗೆ ಚಿತ್ರರಂಗದಲ್ಲಿ ಕೈ ಆಡಿಸುವ ಬಯಕೆ ಕಾಡಿದ್ದಕ್ಕೆ ಸಾಕಷ್ಟು ಉದಾಹರಣೆಗಳುಂಟು. ವರನಟ ರಾಜ್‌ಕುಮಾರ್‌ ಅವರಿಂದ ಈ ಹೊತ್ತಿನ ಮಂಡ್ಯ ರಮೇಶ್‌ವರೆಗೆ ಸ್ಯಾಂಡಲ್‌ವುಡ್‌ಗೆ ಸಂದ ರಂಗಪ್ರತಿಭೆಗಳು ಅನೇಕ. ಅದೇ ರೀತಿ ಸಾಕಷ್ಟು ನಾಟಕಗಳು ಸಿನಿಮಾಗಳಾಗಿವೆ. ಈ ಸಾಲಿಗೆ ಹೊಸ ಸೇರ್ಪಡೆ 'ಶ್ರೀ ಕೃಷ್ಣ ಸಂಧಾನ!"

250 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ವಿ.ಎನ್‌.ಅಶ್ವಥ್‌ರ 'ಶ್ರೀಕೃಷ್ಣ ಸಂಧಾನ" ನಾಟಕ ಈಗ ತೆರೆಗೆ ಬರುತ್ತಿದೆ. 'ಸಂಸಾರ ತಂಡ" ಎನ್ನುವ ನಾಟಕ ತಂಡ ಈ ನಾಟಕವನ್ನು ತೆರೆಗೆ ತರುತ್ತಿರುವುದು ವಿಶೇಷ. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಲೆಯಲ್ಲಿ ಸಂಧಾನಕ್ಕೆ ಮುಹೂರ್ತದ ಮುನ್ನುಡಿ ಕಾರ್ಯಕ್ರಮವೂ ನಡೆಯಿತು.

ಶ್ರೀಕೃಷ್ಣ ಸಂಧಾನ ನಾಟಕದಲ್ಲಿ ನಟಿಸಿದ ಬಹುಪಾಲು ಕಲಾವಿದರು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ತಾರಾ ಆಕರ್ಷಣೆಯಿರಲಿ ಎಂದು ಹಳಬರಾದ ದೊಡ್ಡಣ್ಣ , ತಾರಾ, ಬ್ಯಾಂಕ್‌ ಜನಾರ್ಧನ್‌, ಮಿಮಿಕ್ರಿ ದಯಾನಂದ್‌ ಕೂಡ ತಾರಾಗಣದಲ್ಲಿದ್ದಾರೆ. ಇವರು ಕೂಡ ರಂಗಭೂಮಿ ವಾಸನೆಯನ್ನು ಅನುಭವಿಸಿದವರೇ.

ಮೂಲ ನಾಟಕದಲ್ಲಿ ಕೃಷ್ಣ ವೇಷಧಾರಿಯಾಗಿದ್ದ ಎಂ.ಎಸ್‌.ವೆಂಕಟಾದ್ರಿ ಚಿತ್ರದಲ್ಲೂ ಚಕ್ರಿಯಾಗಲಿದ್ದಾರೆ. ಅಂದಹಾಗೆ, ಕೃಷ್ಣ ಸಂಧಾನ ಪೌರಾಣಿಕ ಚಿತ್ರವಲ್ಲ . ಕಲಾಭಿಮಾನವನ್ನೇ ಬಂಡವಾಗಿರಿಸಿಕೊಂಡ ಮುಗ್ಧರು ನಾಟಕವಾಡಲು ಹೊರಟಾಗಿನ ಫಜೀತಿ ಪಾಟಲುಗಳೇ ಕಥಾವಸ್ತು . ಹೊಟ್ಟೆ ಹುಣ್ಣಾಗುವಷ್ಟು ಕಥೆ ಪ್ರಭಾವಶಾಲಿಯಾಗಿದೆ ಎನ್ನುತ್ತಾರೆ ನಿರ್ದೇಶಕ ಐ.ಅಣ್ಣಯ್ಯ.

ಎನ್‌.ಗೋಪಾಲರಾವ್‌ ಹಾಗೂ ಸಿ.ಎನ್‌.ಸುರೇಶ್‌ ಶ್ರೀಕೃಷ್ಣ ಸಂಧಾನದ ನಿರ್ಮಾಪಕ ಜೋಡಿ. ವಿ. ಮನೋಹರ್‌ ಸಂಗೀತ ನಿದೇಶನದಲ್ಲಿ ಮೂಲ ನಾಟಕದ ಕಂದ, ಸೀಸಪದ್ಯಗಳನ್ನು ಚಿತ್ರದಲ್ಲೂ ಬಳಸಿಕೊಳ್ಳಲಾಗುತ್ತಿದ್ದು , ಹಿಡಿದ ಪಟ್ಟಿಗೆ ಚಿತ್ರೀಕರಣ ಮುಗಿಸುತ್ತೇವೆ ಎನ್ನುತ್ತಾರೆ ನಿರ್ಮಾಪಕರು.

ಮುಹೂರ್ತದಲ್ಲಿ ಹಾಜರಿದ್ದು 'ಶ್ರೀ ಕೃಷ್ಣ ಸಂಧಾನ"ಕ್ಕೆ ಶುಭ ಹಾರೈಸಿದವರು-

ರಾಘವೇಂದ್ರ ರಾಜಕುಮಾರ್‌, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ.ಎನ್‌.ಚಂದ್ರಶೇಖರ್‌, ಶಾಸಕ ವಿ.ಸೋಮಣ್ಣ, ಎಸ್‌.ಎ.ಗೋವಿಂದರಾಜ್‌, ಸಾ.ರಾ.ಗೋವಿಂದು, ಉಮಾಶ್ರೀ.

English summary
New kannada movie Krishna sandhana : Theatre actors join their hands here

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada