'ಬಘೀರ' ಹಾಲಿವುಡ್ ರೇಂಜ್ ಹೈವೋಲ್ಟೇಜ್ ಆಕ್ಷನ್ ಪ್ಯಾಕ್ಡ್ ಟೀಸರ್ ರಿಲೀಸ್
ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳ ಜೊತೆ ಈ ಬಾರಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ಬಹುನಿರೀಕ್ಷಿತ 'ಬಘೀರ' ಟೀಸರ್ ರಿಲೀಸ್ ಆಗಿದೆ.
'ಮದಗಜ' ಬಳಿಕ ಅಳೆದು ತೂಗಿ 'ಬಘೀರ' ಚಿತ್ರವನ್ನು ರೋರಿಂಗ್ ಸ್ಟಾರ್ ಒಪ್ಪಿಕೊಂಡಿದ್ದರು. ಪ್ರಶಾಂತ್ ನೀಲ್ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಡಾ. ಸೂರಿ ಆಕ್ಷನ್ ಕಟ್ ಹೇಳಿದ್ದು ಫಸ್ಟ್ ಲುಕ್‌ನಿಂದಲೇ ಸಿನಿಮಾ ಭಾರೀ ಕುತೂಹಲ ಮೂಡಿಸಿತ್ತು. ಶೂಟಿಂಗ್ ಭರದಿಂದ ಸಾಗುತ್ತಿದ್ದು ಕಾರಣಾಂತರಗಳಿಂದ ಸಿನಿಮಾ ತಡವಾಗುವಂತಾಯಿತು. ಚಿತ್ರೀಕರಣದ ವೇಳೆ ಶ್ರೀಮುರಳಿ ಗಾಯಗೊಂಡಿದ್ದು ಕೂಡ ಇದಕ್ಕೆ ಒಂದು ಕಾರಣ.

ಒಂದೂವರೆ ನಿಮಿಷದ ಆಕ್ಷನ್ ಪ್ಯಾಕ್ಡ್ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಪ್ರತಿಫ್ರೇಮ್‌ನಲ್ಲೂ ಅದ್ಧೂರಿತನ ಎದ್ದು ಕಾಣುತ್ತಿದೆ. ಶ್ರೀಮುರಳಿ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಖಾಕಿ ತೊಟ್ಟು ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿರೋ ರೋರಿಂಗ್ ಸ್ಟಾರ್ ಕರಿ ಚಿರತೆಯ ಮಾಸ್ಕ್ ಧರಿಸಿ ಮತ್ತೊಂದು ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. "ಸಮಾಜವು ಕಾಡಾಗಿ ಬದಲಾದಾಗ ಒಬ್ಬ ಪರಭಕ್ಷಕ ಮಾತ್ರ ನ್ಯಾಯಕ್ಕಾಗಿ ಘರ್ಜಿಸುತ್ತಾನೆ" ಎನ್ನುವ ಟ್ಯಾಗ್‌ಲೈನ್‌ನಲ್ಲಿ ಸಿನಿಮಾ ಮೂಡಿ ಬರ್ತಿದೆ.
'ಬಘೀರ' ಟೀಸರ್‌ನಲ್ಲಿ ವಿಷ್ಯುವಲ್ಸ್ ಹುಬ್ಬೇರಿಸುವಂತಿದೆ. ಹಾಲಿವುಡ್ ಸಿನಿಮಾಗಳ ಶೈಲಿಯ ಆಕ್ಷನ್ ಸನ್ನಿವೇಶಗಳು ಚಿತ್ರದಲ್ಲಿದೆ. ರೋರಿಂಗ್ ಸ್ಟಾರ್ ಜಬರ್ದಸ್ತ್ ಆಕ್ಷನ್ ಮೂಲಕ ಪ್ರೇಕ್ಷಕರನ್ನು ರಂಜಿಸೋಕೆ ಬರ್ತಿರೋದು ಗೊತ್ತಾಗುತ್ತಿದೆ. ಮೈ ಜುಮನ್ ಎನಿಸುವ ಸ್ಟಂಟ್ಸ್ ಮಾಡಿ ಗಮನ ಸೆಳೆದಿದ್ದಾರೆ.
ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಪೊಲೀಸ್ ಅಧಿಕಾರಿಯಾಗಿ ತಡೆಯಲು ಸಾಧ್ಯವಾಗದೇ ಇದ್ದಾಗ ಮುಸುಕುಧಾರಿಯಾಗಿ ನಾಯಕ ಹೋರಾಡುವ ಕಥೆ ಚಿತ್ರದಲ್ಲಿದೆ. ಚಿತ್ರದ ಟ್ಯಾಗ್‌ಲೈನ್ ಕೂಡ ಇದರ ಬಗ್ಗೆ ಸುಳಿವು ನೀಡುತ್ತಿದೆ. 'ಬಘೀರ' ಟೀಸರ್ ನೋಡಿದ ರೋರಿಂಗ್ ಸ್ಟಾರ್ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.
ಚೇತನ್ ಡಿಸೋಜಾ ಚಿತ್ರದ ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡಿದ್ದಾರೆ. ಹೆಚ್ಚು ಡೈಲಾಗ್ಸ್ ಇಲ್ಲದೇ ಪವರ್ ಪ್ಯಾಕ್ಡ್ ಟೀಸರ್ ಕಟ್ ಮಾಡಿದೆ ಚಿತ್ರತಂಡ. ಮೊದಲ ನೋಟದಲ್ಲೇ ಟೀಸರ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಅಜನೀಶ್ ಲೋಕನಾಥ್ ಬಿಜಿಎಂ ಜೊತೆಗೆ 'ಬಘೀರ' ಟೀಸರ್ ಸಖತ್ ಕಿಕ್ ಕೊಡ್ತಿದೆ.

ಇನ್ನು ಶ್ರೀಮುರಳಿ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಪರಾಕ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಶ್ರೀಮುರಳಿ ಹೀರೊ ಆಗಿ ನಟಿಸಲಿದ್ದು ಹಾಲೇಶ್ ಕೋಗುಂಡಿ ಆಕ್ಷನ್ ಕಟ್ ಹೇಳಲಿದ್ದಾರೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಪರಾಕ್ ಸಿನಿಮಾವನ್ನು ಬ್ರ್ಯಾಂಡ್ ಕೋಆಪರೇಟ್ಸ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ನಡಿ ನಿರ್ಮಾಣ ಮಾಡಲಾಗುತ್ತಿದೆ. ಕೋಗುಂಡಿ ಅಖಿಲೇಶ್ ಹಾಗೂ ಆಶಿಕ್ ಮಾಡಾಲ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮೇ, ಜೂನ್ ವೇಳೆಗೆ 'ಪರಾಕ್' ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.
ಮಿಲರ್ಸ್ ರೋಡ್ ಅಂಬೇಡ್ಕರ್ ಭವನನ ಹಿಂಭಾಗದ ದೇವರಾಜ್ ಅರಸ್ ಭವನದಲ್ಲಿ ನಟ ಶ್ರೀಮುರಳಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬೆಳಗ್ಗೆ 10.30ಕ್ಕೆ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಈಗಾಗಲೇ ಮಾಹಿತಿ ನೀಡಿದ್ದಾರೆ.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಶ್ರೀಮುರಳಿ 'ಉಗ್ರಂ' ಸಿನಿಮಾ ಮಾಡಿ ಕಂಬ್ಯಾಕ್ ಮಾಡಿದ್ದರು. ಬಳಿಕ 'ರಥಾವರ', 'ಮಫ್ತಿ' ಸಿನಿಮಾಗಳಲ್ಲಿ ಅಬ್ಬರಿಸಿದ್ದರು. ಕೊರೊನಾ ಹಾವಳಿ ಬಳಿಕ 'ಮದಗಜ' ಸಿನಿಮಾ ತೆರೆಕಂಡಿತ್ತು. ಚಿತ್ರಕ್ಕೆ ತಕ್ಕಮಟ್ಟಿಗೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ 'ಬಘೀರ'ನಾಗಿ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 'ನಂದೇ' ಎನ್ನುವ ಮತ್ತೊಂದು ಚಿತ್ರದಲ್ಲೂ ರೋರಿಂಗ್ ಸ್ಟಾರ್ ನಟಿಸಲಿದ್ದಾರೆ.


Click it and Unblock the Notifications











