ಸೆನ್ಸಾರ್ ಮುಗಿಸಿದ 'ಬಘೀರ'; ಮಂಡಳಿ ಸೂಚಿಸಿದ 4 ಬದಲಾವಣೆಗಳು ಏನೇನು?
ಡಾ. ಸೂರಿ ನಿರ್ದೇಶನದ 'ಬಘೀರ' ಸಿನಿಮಾ ಬಿಡುಗಡೆಗೆ 4 ದಿನ ಮಾತ್ರ ಬಾಕಿಯಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಸಿನಿಮಾ ಪ್ರಮೋಷನ್ ಜೋರಾಗಿದ್ದು ಪ್ರೇಕ್ಷಕರು ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾಯುತ್ತಿದ್ದಾರೆ. ರೋರಿಂಗ್ ಸ್ಟಾರ್ ಆಕ್ಷನ್ ಧಮಾಕಾ ನೋಡಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್ 'ಬಘೀರ' ಚಿತ್ರಕ್ಕೆ ಕಥೆ ಬರೆದಿದ್ದಾರೆ. ಹಾಗಾಗಿ ಅತ್ತ ತೆಲುಗು ಚಿತ್ರರಂಗದಲ್ಲೂ ಸಿನಿಮಾ ನಿರೀಕ್ಷೆ ಮೂಡಿಸಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದೆ. ರುಕ್ಮಿಣಿ ವಸಂತ್ ನಾಯಕಿಯಾಗಿ ಮಿಂಚಿದ್ದು ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ಶ್ರೀಮುರಳಿ ಅಬ್ಬರಿಸಿದ್ದಾರೆ.

ಎ. ಜೆ ಶೆಟ್ಟಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ, ಚೇತನ್ ಡಿಸೋಜಾ ಸ್ಟಂಟ್ಸ್ 'ಬಘೀರ' ಚಿತ್ರಕ್ಕಿದೆ. ದೀಪಾವಳಿ ಸಂಭ್ರಮದಲ್ಲಿ ಬಹಳ ದೊಡ್ಡದಾಗಿ ಚಿತ್ರವನ್ನು ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಮುಂದೆ ಸಿನಿಮಾ ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೂ ಡಬ್ ಆಗುವ ನಿರೀಕ್ಷೆಯಿದೆ. ಚಿತ್ರದಲ್ಲಿ ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾರಾಣಿ ಸೇರಿದಂತೆ ಅನುಭವಿ ಕಲಾವಿದರ ದಂಡೇ ಇದೆ.
ಶ್ರೀಮುರಳಿ ಬರೋಬ್ಬರಿ 3 ವರ್ಷಗಳ ಬಳಿಕ 'ಬಘೀರ' ಆಗಿ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಸದ್ಯ ಚಿತ್ರ ಸೆನ್ಸಾರ್ ಮುಗಿಸಿದೆ. ಚಿತ್ರಕ್ಕೆ ಸಣ್ಣ ಪುಟ್ಟ ಬದಲಾವಣೆ ಸೂಚಿಸಿ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ. ಇನ್ನು ಚಿತ್ರದ ಕಾಲಾವಧಿ 2 ಗಂಟೆ 38 ನಿಮಿಷ ಎನ್ನುವುದು ಕೂಡ ಸೆನ್ಸಾರ್ ಸರ್ಟಿಫಿಕೇಟ್‌ನಲ್ಲಿ ರಿವೀಲ್ ಆಗಿದೆ.

ಸೆನ್ಸಾರ್ ಮಂಡಳಿ ಸೂಚಿಸಿರುವ ಬದಲಾವಣೆಗಳು ಏನೇನು ಅಂದ್ರೆ, ಒಂದು ಸನ್ನಿವೇಶದಲ್ಲಿ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವ ಡಿಸ್ಕ್ಲಮೇರ್ ಹಾಕಲು ಸೂಚಿಸಲಾಗಿದೆ. ಬಾಲಕಾರ್ಮಿಕರನ್ನು ಉತ್ತೇಜಿಸುವುದಿಲ್ಲ ಎನ್ನುವ ವಿಶೇಷ ಸೂಚನೆ ಆರಂಭದಲ್ಲೇ ಹಾಕುವಂತೆ ಹೇಳಲಾಗಿದೆ. ಇಂಗ್ಲೀಷ್ ಸಬ್‌ಟೈಟಲ್‌ನಲ್ಲಿ ಇಂದು ಅಸಭ್ಯ ಪದ ಬಳಸದಂತೆ ಸೂಚಿಸಲಾಗಿದೆ. ಬಾಲಕಾರ್ಮಿಕರಾಗಿ ತೋರಿಸಿರುವ ಬಾಲ ಕಲಾವಿದರ ಪೋಷಕರಿಂದ ಅನುಮತಿ ಪತ್ರ ತೆಗೆದುಕೊಳ್ಳುವಂತೆ ತಿಳಿಸಲಾಗಿದೆ. ಇದೆಲ್ಲವನ್ನು ಚಿತ್ರತಂಡ ಒಪ್ಪಿಕೊಂಡಿದೆ.
ಪ್ರಶಾಂತ್ ನೀಲ್ ಸಿನಿಮಾ ಅಂದ್ರೆ ಸೆನ್ಸಾರ್ ಮಂಡಳಿಯಿಂದ 'ಎ' ಸರ್ಟಿಫಿಕೇಟ್ ಸಿಗುವ ಆತಂಕ ಇರುತ್ತದೆ. ಆದರೆ 'ಬಘೀರ' ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ನೀಲ್ ಕೊಟ್ಟ ಕಥೆ ಆಧರಿಸಿ ಡಾ. ಸೂರಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ಪೊಲೀಸ್ ಆಫೀಸರ್ ವೇದಾಂತ್ ಆಗಿ ರೋರಿಂಗ್ ಸ್ಟಾರ್ ಮಿಂಚಿದ್ದಾರೆ. ಗರುಡ ರಾಮ್ ವಿಲನ್ ಆಗಿ ಅಬ್ಬರಿಸಿದ್ದಾರೆ.
'ಬಘೀರ' ಟ್ರೈಲರ್, ಸಾಂಗ್ಸ್ ನೋಡಿದ್ರೆ 'ಉಗ್ರಂ', 'ಮಫ್ತಿ', 'KGF', 'ಸಲಾರ್' ರೀತಿ ಡಾರ್ಕ್ ಶೇಡ್ ಇರುವುದು ಗೊತ್ತಾಗುತ್ತದೆ. ಚಿತ್ರದಲ್ಲಿ ಕಾನೂನು ರಕ್ಷಿಸುವ ಪೊಲೀಸ್ ಅಧಿಕಾರಿ ಆಗಿದ್ದುಕೊಂಡೇ ದುಷ್ಠರ ಸಂಹಾರಕ್ಕಾಗಿ 'ಬಘೀರ'ನ ಅವತಾರವನ್ನೂ ಶ್ರೀಮುರಳಿ ತಾಳಿದ್ದಾರೆ. ಮಾಸ್ಕ್ ಧರಿಸಿ ಸೂಪರ್ ಹೀರೊ ರೀತಿ ತೆರೆಮೇಲೆ ರಾರಾಜಿಸಿದ್ದಾರೆ. ಮದರ್ ಸೆಂಟಿಮೆಂಟ್ ಎಳೆ ಕೂಡ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿದೆ.


Click it and Unblock the Notifications











