ಹೊಸ ಅವತಾರದಲ್ಲಿ ಬಂದ್ರು ಶ್ರೀನಗರ ಕಿಟ್ಟಿ
ನಟ ಶ್ರೀನಗರ ಕಿಟ್ಟಿ ಅವತಾರವೇ ಬದಲಾಗಿಬಿಟ್ಟಿದೆ. ಅಪ್ಪಟ ಪ್ರೇಮಿಯ ಮುದ್ದು ಮುಖ ಹೊಂದಿದ್ದ ಶ್ರೀನಗರ ಕಿಟ್ಟು ತಮ್ಮ ಚಹರೆಯನ್ನು ಬದಲಾಯಿಸಿಕೊಂಡು ಸಖತ್ ರಗಡ್ ಆಗಿಬಿಟ್ಟಿದ್ದಾರೆ.
ಶ್ರೀನಗರ ಕಿಟ್ಟಿ ನಟಿಸುತ್ತಿರುವ 'ಗೌಳಿ' ಸಿನಿಮಾದ ಮುಹೂರ್ತಕ್ಕೆ ಬಂದಿದ್ದ ಶ್ರೀನಗರ ಕಿಟ್ಟಿ ಆ ನಂತರ ಸುದ್ದಿಗೋಷ್ಠಿಗೆ ಸಹ ಹಾಜರಾದರು. ಅಷ್ಟುದ್ದ ಗಡ್ಡ ಬಿಟ್ಟು, ತಲೆಗೂದಲು ಹಿಂದಕ್ಕೆ ಬಾಚಿಕೊಂಡು 'ಕೆಜಿಎಫ್'ನ ಗರುಡನಿಗೆ ಸೆಡ್ಡು ಹೊಡೆಯುವಂತೆ ಕಾಣುತ್ತಿದ್ದರು ಕಿಟ್ಟಿ.
ಸುದ್ದಿಗೋಷ್ಠಿಯಲ್ಲಿ ತಮ್ಮ 'ಗೌಳಿ' ಸಿನಿಮಾದ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ ಕಿಟ್ಟಿ, ತಮ್ಮ ಲುಕ್‌ನಂತೆಯೇ 'ಗೌಳಿ' ಸಿನಿಮಾ ಸಹ ಸಖತ್ ರಗಡ್ ಆಗಿರಲಿದೆ ಎಂದಿದ್ದಾರೆ. 'ಗೌಳಿ' ಸಿನಿಮಾದ ಚಿತ್ರೀಕರಣವು ಇದೇ ತಿಂಗಳ 21ನೇ ತಾರೀಖಿನಿಂದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ನಡೆಯಲಿದೆಯಂತೆ. ಸಿನಿಮಾಕ್ಕಾಗಿ ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿದ್ದು ಬಹಳ ವೇಗವಾಗಿ ಚಿತ್ರೀಕರಣ ಮುಗಿಸಲಿದ್ದೇವೆ ಎಂದರು.

''ಒಬ್ಬ ಮುಗ್ದ ಹಳ್ಳಿ ಯುವಕನ ಕುಟುಂಬದಲ್ಲಿ ಕೋಲಾಹಲ ಎದ್ದಾಗ ಅವನು ಹೇಗೆ ವರ್ತಿಸುತ್ತಾನೆ, ತನಗೆ ಆದ ಅನ್ಯಾಯದ ವಿರುದ್ಧ ಹೇಗೆ ಸೆಟೆದೇಳುತ್ತಾನೆ ಎಂಬುದನ್ನು ಗೌಳಿ ಸಿನಿಮಾ ಒಳಗೊಂಡಿದೆ. ಪೋಸ್ಟರ್ ನೋಡಿದರೆ ಇದೊಂದು ಕ್ರೌರ್ಯ ತುಂಬಿದ ಸಿನಿಮಾ ಎನಿಸಿದರೂ ಸಿನಿಮಾದಲ್ಲಿ ಎಲ್ಲ ಭಾವಗಳ ಹದವಾದ ಮಿಶ್ರಣ ಇದೆ'' ಎಂದರು ಕಿಟ್ಟಿ.
ತಮ್ಮ ಗೆಟಪ್ ಬಗ್ಗೆ ಮಾತನಾಡಿದ ಕಿಟ್ಟಿ, ''ನಾನು ಈಗಿರುವ ಅವತಾರದಲ್ಲಿಯೇ ಗೌಳಿ ಪಾತ್ರವೂ ಸಿನಿಮಾ ಪೂರ್ತಿ ಇರಲಿದೆ. ಆ ಪಾತ್ರಕ್ಕಾಗಿಯೇ ಹೀಗೆ ಗಡ್ಡ ಕೂದಲು ಬಿಟ್ಟಿದ್ದೀನಿ. ಒಂದು ವರ್ಷದಿಂದ ಯಾವ ಚಿತ್ರೀಕರಣದಲ್ಲಿಯೂ ಭಾಗವಹಿಸಿರಲಿಲ್ಲವಾದ್ದರಿಂದ ಈ ಗೆಟಪ್ ಮಾಡಿಕೊಳ್ಳಲು ಸುಲಭವೂ ಆಯ್ತು'' ಎಂದಿದ್ದಾರೆ ಕಿಟ್ಟಿ.
'ಗೌಳಿ' ಸಿನಿಮಾದ ಹಲವು ವಿಭಾಗಗಳಲ್ಲಿ ಭಿನ್ನವಾದ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಸಿನಿಮಾದ ನಾಯಕನ ಪಾತ್ರ, ಆತನ ಗೆಟಪ್‌ನಿಂದ ಹಿಡಿದು ಪಾತ್ರ ಪೋಷಣೆ, ಆತನ ಸಂಭಾಷಣೆ, ಒಟ್ಟಾರೆ ಚಿತ್ರಕತೆಯನ್ನು ಹೆಣೆದಿರುವ ರೀತಿ ಇನ್ನೂ ಕೆಲವು ವಿಭಾಗಗಳಲ್ಲಿ ಹೊಸತನದ ಪ್ರಯತ್ನ ಮಾಡಿದ್ದೀವಿ. ಸಿನಿಮಾದ ಚಿತ್ರೀಕರಣದ ಯೋಜನೆ ತಯಾರಾಗಿದೆ. ಮೊದಲು 20 ದಿನಗಳ ಶೆಡ್ಯೂಲ್ ಯಲ್ಲಾಪುರ ಸಮೀಪದ ಹಳ್ಳಿಯಲ್ಲಿ ಮುಗಿಸಲಿದ್ದೇವೆ. ಆ ನಂತರ ಉಳಿದ ಭಾಗದ ಚಿತ್ರೀಕರಣ ಮುಗಿಸಿ ಇನ್ನು ಮೂರು ತಿಂಗಳ ಒಳಗೆ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದೇವೆ'' ಎಂದು ಕಿಟ್ಟಿ ಮಾಹಿತಿ ನೀಡಿದ್ದಾರೆ.


Click it and Unblock the Notifications











