"ಭಗವಂತ ಬರೆಯುವ ಸ್ಕ್ರಿಪ್ಟ್ ಮುಂದೆ ನಾವೇನು ಇಲ್ಲ"; ದರ್ಶನ್ ಬಗ್ಗೆ ಸೃಜನ್ ಮಾತು
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ದರ್ಶನ್ ತಪ್ಪು ಮಾಡಿದ್ದಾರಾ? ಎನ್ನುವುದು ನ್ಯಾಯಾಲಯ ತೀರ್ಮಾನಿಸಲಿದೆ. ಸದ್ಯ ಆರೋಪಿಯಾಗಿ ದರ್ಶನ್ ಜೈಲಿನಲ್ಲಿದ್ದಾರೆ. ಪ್ರಕರಣದ ಸಂಬಂಧ ಚಿತ್ರರಂಗದ ಹಲವರು ಪ್ರತಿಕ್ರಿಯಿಸಿದ್ದಾರೆ. ಕೆಲವರು ದರ್ಶನ್ ಬೆಂಬಲಿಸಿ ಮಾತನಾಡಿದ್ದಾರೆ. ಮತ್ತೆ ಕೆಲವರು ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದಿದ್ದಾರೆ.
ನಟ ದರ್ಶನ್ ಹಾಗೂ ನಟ ಸೃಜನ್ ಲೋಕೇಶ್ ಒಟ್ಟಿಗೆ ಬೆಳೆದವರು. ಇಬ್ಬರ ನಡುವೆ ಆತ್ಮೀಯ ಸ್ನೇಹವಿತ್ತು. ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದ್ಕಾಲದಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದವರು ಬಳಿಕ ಕೋಂಚ ದೂರಾಗಿದ್ದರು. ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ ಅಷ್ಟೆ. ಆದರೆ ಇಬ್ಬರ ಸ್ನೇಹ ಚೆನ್ನಾಗಿಯೇ ಇದೆ. ದರ್ಶನ್ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಸೃಜನ್ ಪ್ರತಿಕ್ರಿಯಿಸಿದ್ದಾರೆ.

ಸೃಜನ್ ನಿರ್ದೇಶಿಸಿ ನಟಿಸಿರುವ 'GST' ಎಂಬ ಸಿನಿಮಾ ಬಿಡುಗಡೆಯಾಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಚಿತ್ರದ ಪ್ರಚಾರ ಭಾಗವಾಗಿ ಸೃಜನ್ ಒಂದಷ್ಟು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. Beyond Limits ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕುಟುಂಬ, ಬಣ್ಣದಲೋಕದ ಜರ್ನಿ ಎಲ್ಲದರ ಬಗ್ಗೆಯೂ ಅಂತರಾಳ ತೆರೆದಿಟ್ಟಿದ್ದಾರೆ. ದರ್ಶನ್ ಬಗ್ಗೆ ಕೇಳಿದ ಪ್ರಶ್ನೆಗೆ ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ. ಈಗ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ದರ್ಶನ್ ಬಗ್ಗೆ ಏನಾದರೂ ಹೇಳಬಹುದಾ ಎನ್ನುವ ಪ್ರಶ್ನೆಗೆ "ಜೊತೆಯಲ್ಲೇ ಇಬ್ರು ಬೆಳೆದ್ವಿ. ಎಲ್ಲಾ ಚೆನ್ನಾಗಿತ್ತು. ಈಗ ದುರಾದೃಷ್ಟವಶಾತ್ ಈ ರೀತಿ ಆಗಿದೆ. ಈಗ ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಅದರ ಬಗ್ಗೆ ಪ್ರತಿಕ್ರಿಯೆ ಕೊಡಬೇಕು, ಕೊಡಬಾರದು ಎನ್ನುವಷ್ಟು ದೊಡ್ಡ ವ್ಯಕ್ತಿಗಳು ನಾವಲ್ಲ. ಪ್ರಕರಣ ಈಗ ಕೋರ್ಟ್‌ನಲ್ಲಿದೆ. ಹಾಗಾಗಿ ಮಾತನಾಡುವುದು ಸರಿಯಲ್ಲ. ಇದನ್ನೆಲ್ಲಾ ನೋಡಿದಾಗ ಬಹಳ ನೋವಾಗುತ್ತದೆ" ಎಂದು ಸೃಜನ್ ಹೇಳಿದ್ದಾರೆ.

ನಿಮ್ಮ ಅವರ ಒಡನಾಟ ಹೇಗಿತ್ತು ಎನ್ನುವ ಪ್ರಶ್ನೆಗೆ "ಬಹಳ ತರ್ಲೆಗಳು. ತರ್ಲೆ ಮಾಡ್ಕೊಂಡೆ ಇದ್ದವರು. ಅಷ್ಟು ಮಾತ್ರ ಹೇಳಲು ಸಾಧ್ಯ. ಭಗವಂತ ಬರೆಯುವ ಸ್ಕ್ರಿಪ್ಟ್ ಮುಂದೆ ನಾವೇನು ಇಲ್ಲ. ಆತ ಬೆಸ್ಟ್ ಸ್ಕ್ರಿಪ್ಟ್ ರೈಟರ್. ಜೀವನದಲ್ಲಿ ಯಾವ ಟ್ವಿಸ್ಟ್, ಟರ್ನ್ ಕೊಡ್ತಾನೆ ಎನ್ನುವುದು ಹೇಳಲು ಸಾಧ್ಯವಿಲ್ಲ. ನಿಜಕ್ಕೂ ಇದು ದುರಾದೃಷ್ಟಕರ" ಎಂದು ಸೃಜನ್ ತಿಳಿಸಿದ್ದಾರೆ.
2004ರಲ್ಲಿ ಬಂದಿದ್ದ 'ದರ್ಶನ್' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆ ಚಿತ್ರಕ್ಕೆ ದಿನಕರ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದೇ ಸಮಯದಲ್ಲಿ ಖಳನಟರ ಮಕ್ಕಳೆಲ್ಲಾ ಸೇರಿ 'ನವಗ್ರಹ' ಸಿನಿಮಾ ಮಾಡುವ ಚರ್ಚೆ ನಡೆದಿತ್ತು. ನಾನು ಕೂಡ ದಿನಕರ್ ಬಳಿ ಮಾಡಿ ಒಳ್ಳೆ ಸಿನಿಮಾ ಮಾಡೋಣ ಎಂದು ಹೇಳಿದ್ದಾಗಿ ಸೃಜನ್ ನೆನಪಿಸಿಕೊಂಡಿದ್ದಾರೆ. ನನ್ನ ಆರೇಳು ಒಳ್ಳೆ ಸಿನಿಮಾಗಳಲ್ಲಿ 'ನವಗ್ರಹ' ಸಹ ಒಂದು ಎಂದು ಹೇಳಿಕೊಳ್ಳಬಹುದು. ಒಳ್ಳೆ ಪ್ರಯೋಗಾತ್ಮಕ ಸಿನಿಮಾ ಅದು ಎಂದಿದ್ದಾರೆ.
'ನವಗ್ರಹ' ಬಳಿಕ 'ಪೊರ್ಕಿ', 'ಚಿಂಗಾರಿ' ಹಾಗೂ 'ಜಗ್ಗುದಾದ' ಸಿನಿಮಾಗಳಲ್ಲಿ ದರ್ಶನ್ ಜೊತೆ ಸೃಜನ್ ಲೋಕೇಶ್ ನಟಿಸಿದ್ದರು. ಸಿನಿಮಾಗಳಲ್ಲಿ ದೊಡ್ಡ ಬ್ರೇಕ್ ಸಿಗದೇ ಇದ್ದಾಗ ಕಿರುತೆರೆಯಲ್ಲಿ ಸೃಜನ್ ಅದೃಷ್ಟ ಪರೀಕ್ಷಿಸಿಕೊಂಡಿದ್ದರು. ಬಿಗ್‌ಬಾಸ್ ಶೋನಲ್ಲಿ ಭಾಗವಹಿಸಿದ್ದರು. 'ಮಜಾ ಟಾಕೀಸ್' ಶೋ ನಿರ್ಮಿಸಿ ನಿರೂಪಿಸಿ ಗೆದ್ದರು.
'ಮೇಕಿಂಗ್ ಆಫ್ ಸತಿ ಸುಲೋಚನಾ' ಸಿನಿಮಾ ಮಾಡುವ ಕನಸ್ಸನ್ನು ಸೃಜನ್ ಲೋಕೇಶ್ ಬಿಚ್ಚಿಟ್ಟಿದ್ದಾರೆ. ತಾವೇ ಚಿತ್ರದಲ್ಲಿ ಸುಬ್ಬಯ್ಯ ನಾಯ್ಡು ಪಾತ್ರ ಮಾಡುವುದಾಗಿ ಹೇಳಿದ್ದಾರೆ. ಈಗಾಗಲೇ ಟೈಟಲ್ ರಿಜಿಸ್ಟರ್ ಮಾಡಿಸಿದ್ದು ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಶುರುವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.


Click it and Unblock the Notifications











