ಶ್ರುತಿ ಹರಿಹರನ್ ವಿವಾದ: ಇಂದು ಪ್ರಶಾಂತ್ ಸಂಬರ್ಗಿ ಇಂದ ಸಿಡಿಯಲಿದೆ ಹೊಸ ಬಾಂಬ್.!
ಸ್ಯಾಂಡಲ್ ವುಡ್ ನಲ್ಲಿ #ಮೀಟೂ ಅಭಿಯಾನ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ಮೇಲೆ, ಗಾಂಧಿನಗರದಲ್ಲಿ ಸುನಾಮಿಯೇ ಎದ್ದಿದೆ.
ಈ ವಿವಾದದ ಕುರಿತು ರೆಬೆಲ್ ಸ್ಟಾರ್ ಅಂಬರೀಶ್ ನೇತೃತ್ವದಲ್ಲಿ ಇಂದು ಸಂಜೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಲಿದೆ. ಈ ಸಭೆಗೆ 'ರಾಜಿ ಮಾಡಿಕೊಳ್ಳುವ ಮನಃಸ್ಥಿತಿಯಿಂದ ಬನ್ನಿ' ಎಂದು ಅರ್ಜುನ್ ಸರ್ಜಾ ಅತ್ಯಾಪ್ತ ಉದ್ಯಮಿ ಪ್ರಶಾಂತ್ ಸಂಬರ್ಗಿಗೆ ನಿನ್ನೆ ಸಂಜೆ ದೂರವಾಣಿ ಕರೆ ಬಂದಿದೆ.
''ನಾನು ಶ್ರುತಿ ಹರಿಹರನ್ ಗೆ ತುಂಬಾ ಬೇಕಾಗಿರುವ ವ್ಯಕ್ತಿ'' ಎಂದು ಹೇಳಿಕೊಂಡು ರಾಮ್ ಎಂಬಾತ ನಿನ್ನೆ ಸಾಯಂಕಾಲ ಪ್ರಶಾಂತ್ ಸಂಬರ್ಗಿ ಅವರಿಗೆ ಕರೆ ಮಾಡಿದ್ದಾನಂತೆ.
ಈ ಬಗ್ಗೆ ಹಾಗೂ ಅರ್ಜುನ್ ಸರ್ಜಾ ತೇಜೋವಧೆ ಮಾಡಲು ನಡೆದಿರುವ ಪ್ರೀ-ಪ್ಲಾನ್ ಬಗ್ಗೆ ಇಂದು ಸುದ್ದಿ ಗೋಷ್ಠಿಯಲ್ಲಿ ಸಂಪೂರ್ಣ ಮಾಹಿತಿ ನೀಡುವೆ ಎಂದು ಪ್ರಶಾಂತ್ ಸಂಬರ್ಗಿ ತಿಳಿಸಿದ್ದಾರೆ. ಮುಂದೆ ಓದಿರಿ...

ಪ್ರಶಾಂತ್ ಸಂಬರ್ಗಿ ಏನಂತಾರೆ.?
''ನಿನ್ನೆ ಸಂಜೆ ಲ್ಯಾಂಡ್ ಲೈನ್ ಇಂದ ನನಗೊಂದು ಕರೆ ಬಂತು. ರಾಮ್ ಅಂತ ಪರಿಚಯಿಸಿಕೊಂಡ ಆತ ''ನಾನು ಶ್ರುತಿ ಹರಿಹರನ್ ಗೆ ತುಂಬಾ ಬೇಕಾಗಿರುವ ವ್ಯಕ್ತಿ'' ಎಂದು ಹೇಳಿದ. ''ದಯವಿಟ್ಟು ಈ ಕೇಸ್ ನ ರಾಜಿ ಮಾಡಿಕೊಳ್ಳಿ. ಫಿಲ್ಮ್ ಚೇಂಬರ್ ನಲ್ಲಿ ನಡೆಯುವ ಸಭೆಗೆ ರಾಜಿ ಮನಃಸ್ಥಿತಿಯಿಂದ ಬನ್ನಿ. ಇದನ್ನು ಹೀಗೇ ಮುಂದುವರೆಸಿದರೆ, ಯಾರಿಗೂ ಅನುಕೂಲ ಇಲ್ಲ'' ಅಂತ ಹೇಳಿದ'' - ಪ್ರಶಾಂತ್ ಸಂಬರ್ಗಿ, ಉದ್ಯಮಿ, ಅರ್ಜುನ್ ಸರ್ಜಾ ಸ್ನೇಹಿತ

ರಾಜಿ ಆಗಬೇಕಂತೆ.!
''ಅರ್ಜುನ್ ಸರ್ಜಾ ಹೆಸರಿಗೆ ಮಸಿ ಬಳಿದು, ಅವರ ಮನೆಯಲ್ಲಿ ಅಶಾಂತಿ ಉಂಟು ಮಾಡಿದ ಈ ಪ್ರಕರಣ ರಾಜಿ ಮಾಡಿದರೆ ನಮ್ಮ ಮನಃಸ್ಥಿತಿ ನೆಮ್ಮದಿ ಆಗಿರುವುದಿಲ್ಲ ಅಂತ ಈ ಪ್ರಸ್ತಾಪ ಬೇಡ ಎಂದು ಹೇಳಿದೆ. ''ಮಾಧ್ಯಮಗಳ ಮುಂದೆ ಕ್ಷಮೆ ಕೇಳಿ'' ಎಂದು ನಾನು ಅವರಿಗೆ ಹೇಳಿದಾಗ ''ಹಾಗೆಲ್ಲ ಮಾಡಬೇಡಿ. ರಾತ್ರಿ ಶ್ರುತಿ ಹರಿಹರನ್ ಅವರು ಚಿನ್ನೇಗೌಡರನ್ನು ಭೇಟಿ ಆಗುತ್ತಾರೆ. ನೀವೂ ಅಂಬರೀಶ್ ರನ್ನ ಭೇಟಿ ಮಾಡಿ'' ಎಂದು ಆತ ಹೇಳಿದ'' - ಪ್ರಶಾಂತ್ ಸಂಬರ್ಗಿ, ಉದ್ಯಮಿ, ಅರ್ಜುನ್ ಸರ್ಜಾ ಸ್ನೇಹಿತ

ಹಿಟ್ ಅಂಡ್ ರನ್ ಕೇಸ್ ಆಗಬಾರದು
''ಇಂದು ನಡೆಯುವ ಸಭೆಗೆ ಪೀಠಿಕೆ ಹಾಕಿದ ದೂರವಾಣಿ ಕರೆ ಅದು. ಕಾನೂನು ಭಾರತೀಯರಿಗೆಲ್ಲಾ ಒಂದೇ. ಕಾನೂನು ಹೋರಾಟಕ್ಕೆ ಅವರು ಹೋದರೆ, ನಾವೂ ಕೂಡ ಸಿದ್ಧ. ಅರ್ಜುನ್ ಸರ್ಜಾ ಹೆಸರನ್ನ ತೇಜೋವಥೆ ಮಾಡುವ ಹಕ್ಕು ಯಾರಿಗೂ ಇಲ್ಲ. ಇದು ಹಿಟ್ ಅಂಡ್ ರನ್ ಕೇಸ್ ಆಗಬಾರದು'' ಅಂತಾರೆ ಪ್ರಶಾಂತ್ ಸಂಬರ್ಗಿ

ಶ್ರುತಿ ಹರಿಹರನ್ ಸ್ಪಷ್ಟನೆ ಕೊಡಬೇಕು
''ಶ್ರುತಿ ಹರಿಹರನ್ ಅವರು... ರಾಮ್ ಯಾರು.? ರಾಮ್ ಗೂ ಅವರಿಗೂ ಏನು ಸಂಬಂಧ.? ರಾಮ್ ಗೂ ಅವರಿಗೂ ಇರುವ ಸ್ನೇಹ ಏನು.? ಅವರು ಫೋನ್ ಮಾಡಿದ್ದು ಯಾಕೆ ಎನ್ನುವಂಥದ್ದನ್ನ ಹೇಳಬೇಕು'' - ಪ್ರಶಾಂತ್ ಸಂಬರ್ಗಿ, ಉದ್ಯಮಿ, ಅರ್ಜುನ್ ಸರ್ಜಾ ಸ್ನೇಹಿತ

ಮತ್ತೊಂದು #ಮೀಟೂ ಬಾಂಬ್
''ಕನ್ನಡ ನಟ ಅರ್ಜುನ್ ಸರ್ಜಾ ಬಗ್ಗೆ ಮಲಯಾಳಿ ಹುಡುಗಿ ಶ್ರುತಿ ಹರಿಹರನ್ ಹೇಗೆ ಆರೋಪ ಮಾಡ್ತಾರೋ, ಹಾಗೇ ಕನ್ನಡ ನಟಿ ಮಲಯಾಳಿ ನಟನ ಬಗ್ಗೆ ಮಾಡಿರುವ ಆರೋಪವನ್ನ ನಾವು ಇವತ್ತು ಬಿಡುಗಡೆ ಮಾಡುತ್ತಿದ್ದೇವೆ'' - ಪ್ರಶಾಂತ್ ಸಂಬರ್ಗಿ, ಉದ್ಯಮಿ, ಅರ್ಜುನ್ ಸರ್ಜಾ ಸ್ನೇಹಿತ

ಪ್ರೀ-ಪ್ಲಾನ್ ಬಗ್ಗೆ ಮಾಹಿತಿ ಕೊಡುವೆ
''ಅರ್ಜುನ್ ಸರ್ಜಾ ಹೆಸರಿಗೆ ಮಸಿ ಬಳಿಯಲು ಮಾಡಿದ್ದ ಪ್ರೀ-ಪ್ಲಾನ್ ಬಗ್ಗೆ ನಾನು ಇಂದು ನಡೆಯುವ ಸುದ್ದಿಗೋಷ್ಠಿಯಲ್ಲಿ ತಿಳಿಸುತ್ತೇನೆ. ನಮ್ಮ ಬಳಿ ಇರುವ ದಾಖಲೆಯನ್ನೂ ಆದಷ್ಟು ಬೇಗ ತಂದಿಡುತ್ತೇನೆ. ಹಿಂದು ಧರ್ಮದ ಪಾಲನೆ ಮಾಡಿರುವ ಅರ್ಜುನ ಸರ್ಜಾ ವಿರುದ್ಧ ಪಿತೂರಿ ನಡೆದಿದೆ'' ಅಂತಾರೆ ಪ್ರಶಾಂತ್ ಸಂಬರ್ಗಿ


Click it and Unblock the Notifications











