ಸರ್ಜಾ ವಿರುದ್ಧ ಆರು ಜನರನ್ನ ಸಾಕ್ಷಿಯನ್ನಾಗಿಸಿದ ಶ್ರುತಿ ಹರಿಹರನ್.!
Recommended Video

ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ನಡುವಿನ ಮೀಟೂ ಆರೋಪಕ್ಕೆ ಸಂಬಂಧಪಟ್ಟಂತೆ ಈಗ ಇಬ್ಬರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಒಂದು ಕಡೆ ಶ್ರುತಿ ಹೇಳಿಕೆಗೆ ನಿರ್ಬಂಧ ಹೇರಲು ಸರ್ಜಾ ಕೋರ್ಟ್ ಮೆಟ್ಟಿಲೇರಿದ್ರೆ, ಮತ್ತೊಂದೆಡೆ ಸರ್ಜಾ ವಿರುದ್ಧ ಶ್ರುತಿ ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ.
ಸರ್ಜಾ ವಿರುದ್ಧವಾಗಿ ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಶ್ರುತಿ ಹರಿಹರನ್ ನಾಲ್ಕೈದು ಆರೋಪಗಳನ್ನ ಮಾಡಿದ್ದಾರೆ. ದೇವನಹಳ್ಳಿ ಶೂಟಿಂಗ್, ಹೆಬ್ಬಾಳ ಶೂಟಿಂಗ್, ಯುಬಿ ಸಿಟಿ ಶೂಟಿಂಗ್ ಹೀಗೆ ವಿವಿಧ ಸ್ಥಳಗಳಲ್ಲಿ ಸರ್ಜಾ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾರೆ.
ಇಷ್ಟೆಲ್ಲಾ ಆರೋಪಕ್ಕೆ ಸಾಕ್ಷಿ ಎಲ್ಲಿದೆ ಎಂದು ಕೇಳುತ್ತಿರುವವರು ಹಲವರು. ಆದ್ರೆ, ಸರ್ಜಾ ವಿರುದ್ಧವಾಗಿ ಶ್ರುತಿ ಆರು ಜನರನ್ನ ಪರೋಕ್ಷವಾಗಿ ಸಾಕ್ಷಿಗಳನ್ನಾಗಿಸಿದ್ದಾರೆ. ಇವರ ಹೇಳಿಕೆಯ ಮೇಲೆ ಸರ್ಜಾ ಭವಿಷ್ಯವೂ ನಿರ್ಧಾರವಾಗಬಹುದು. ಅಷ್ಟಕ್ಕೂ, ಆ ಆರು ಜನ ಸಾಕ್ಷಿಗಳು ಯಾರು.?

ಮೊದಲ ಸಾಕ್ಷಿ ಡೈರೆಕ್ಟರ್
'ವಿಸ್ಮಯ' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ನಡೆದ ಘಟನೆಯನ್ನ ನಿರ್ದೇಶಕ ಅರುಣ್ ವೈದ್ಯನಾಥನ್ ಬಳಿ ಹೇಳಿದ್ದೀನಿ. ನಾನು ಇನ್ಮುಂದೆ ರಿಹರ್ಸಲ್ ಮಾಡಲ್ಲ, ನನಗೆ ಕಷ್ಟವಾಗ್ತಿದೆ ಎಂದು ಅವರ ಗಮನಕ್ಕೆ ತಂದಿದ್ದೀನಿ ಎಂದು ಶ್ರುತಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ, ಪೊಲೀಸರು ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಅವರನ್ನ ವಿಚಾರಿಸಬಹುದು. ಅವರ ಹೇಳಿಕೆಯೂ ಇಲ್ಲಿ ಪ್ರಮುಖವಾಗಲಿದೆ.

ಶ್ರುತಿ ಸಿಬ್ಬಂಧಿ ಬೋರೇಗೌಡ ಮತ್ತು ಕಿರಣ್
ಅರ್ಜುನ್ ಸರ್ಜಾ ಅವರ ಕಿರುಕುಳದಿಂದ ಕಣ್ಣೀರಿಟ್ಟಿದ್ದ ಶ್ರುತಿ ಹರಿಹರನ್ ಅವರನ್ನ ಅವರ ಸಿಬ್ಬಂಧಿಯವರಾದ ಬೋರೇಗೌಡ ಮತ್ತು ಕಿರಣ್ ಸಮಾಧಾನ ಪಡಿಸಿದ್ದಾರಂತೆ. ಇದನ್ನ ಕೂಡ ಶ್ರುತಿ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಮತ್ತು ದೇವನಹಳ್ಳಿ ಬಳಿ ಕಾರಿನಲ್ಲಿ ಹೋಗುವಾಗ ಸಿಗ್ನಲ್ ಹತ್ತಿರ 'ಸರ್ಜಾ ರೆಸಾರ್ಟ್ ಗೆ ಹೋಗೋಣ ಬಾ' ಎಂದಿದ್ದರು. ಈ ವೇಳೆ ಕೂಡ ಬೋರೇಗೌಡ ಮತ್ತು ಕಿರಣ್ ಇದ್ದರು ಎಂದು ಹೇಳಿದ್ದಾರೆ. ಹೀಗಾಗಿ, ಇವರಿಗೂ ಈ ವಿಷ್ಯ ಗೊತ್ತಿರಬಹುದು ಎಂಬ ಕಾರಣದಿಂದ ಇವರಿಬ್ಬರನ್ನ ಸಾಕ್ಷಿಗಳಾಗಿ ಪರಿಗಣಿಸಬಹುದು.

ಶ್ರುತಿ ಸ್ನೇಹಿತೆ ಯಶಸ್ವಿನಿ
ಇನ್ನು ಅರ್ಜುನ್ ಸರ್ಜಾ ಅವರ ಮಾನಸಿಕ ಮತ್ತು ದೈಹಿಕ ಕಿರುಕುಳವನ್ನ ಶ್ರುತಿ ತಮ್ಮ ಸ್ನೇಹಿತೆ ಯಶಸ್ವಿನಿ ಬಳಿ ತೋಡಿಕೊಂಡಿದ್ದರಂತೆ. ಅದಕ್ಕೆ ಸಮಾಧಾನ ಪಡಿಸಿದ್ದ ಯಶಸ್ವಿನಿ, ಸರ್ಜಾ ದೊಡ್ಡ ನಟ, ಅವರ ವಿರುದ್ಧ ಹೋಗಬೇಡ ಎಂದು ಮನವರಿಕೆ ಮಾಡಿಕೊಟ್ಟಿದ್ದರು ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲಿಗೆ ಈ ಪ್ರಕರಣದಲ್ಲಿ ಯಶಸ್ವಿನಿ ಕೂಡ ಸಾಕ್ಷಿ ಆಗಬಹುದು.

ಭರತ್ ಮತ್ತು ಮೋನಿಕಾ
ರೋಮ್ಯಾಂಟಿಕ್ ದೃಶ್ಯದ ಚಿತ್ರೀಕರಣ ವೇಳೆ ಬೆಡ್ ಸೀನ್ ಮಾಡಬೇಕಿತ್ತು. ಈ ದೃಶ್ಯದಲ್ಲಿ ಸರ್ಜಾ ನನ್ನನ್ನು ಬಲವಂತವಾಗಿ ತಬ್ಬಿಕೊಂಡು ಹಿಂಸೆ ನೀಡಿದ್ದರು. ಇದನ್ನ ವಿರೋಧಿಸಿದ್ದ ನಾನು ಸಹಾಯಕ ನಿರ್ದೇಶಕ ಭರತ್ ನೀಲಕಂಠ ಮತ್ತು ಮೋನಿಕಾ ಅವರ ಬಳಿ ಹೇಳಿಕೊಂಡಿದ್ದೆ ಎಂದು ಉಲ್ಲೇಖಿಸಿದ್ದಾರೆ. ಹೀಗಾಗಿ, ಇವರಿಬ್ಬರ ಹೇಳಿಕೆ ಕೂಡ ಇಲ್ಲಿ ಪ್ರಮುಖವಾಗಲಿದೆ.

ಇವರ ಮೇಲೆ ನಿಂತಿದೆ ಸರ್ಜಾ ಹಣೆಬರಹ
ಒಂದು ವೇಳೆ ಶ್ರುತಿ ದೂರಿನಲ್ಲಿ ಉಲ್ಲೇಖಿಸಿರುವಂತೆ ಈ ಆರು ಜನರನ್ನ ವಿಚಾರಣೆಗೆ ಒಳಪಡಿಸಿ, ಹೇಳಿಕೆ ಪಡೆಯಲು ಪೊಲೀಸರು ಮುಂದಾದರೇ, ಅವರ ಹೇಳಿಕೆ ಏನಿರಬಹುದು ಎಂಬ ಕುತೂಹಲ ಕಾಡುತ್ತಿದೆ. ಮತ್ತು ಅವರು ಸರ್ಜಾ ವಿರುದ್ಧವಾಗಿ ಹೇಳಿಕೆ ಕೊಟ್ಟರೇ, ಸರ್ಜಾಗೆ ಮತ್ತಷ್ಟು ಸಂಕಷ್ಟ ಎದುರಾಗಬಹುದು ಎಂಬ ಪ್ರಶ್ನೆ ಕಾಡುತ್ತಿದೆ.


Click it and Unblock the Notifications











