For Quick Alerts
ALLOW NOTIFICATIONS  
For Daily Alerts

  ಅಣ್ಣಾವ್ರು ಬರಲಿಲ್ಲ . ಬರುವುದಿಲ್ಲ ಎಂದು ಅಂದುಕೊಂಡಿದ್ದ

  By *ರಘುನಾಥ ಚ.ಹ.
  |

  ಪ್ರಶಸ್ತಿ ವಿತರಿಸಿದ ರಾಜ್ಯಪಾಲೆ ವಿ.ಎಸ್‌.ರಮಾದೇವಿ ಅವರ ಮೊಗದಲ್ಲಿ ನಗು ಇಣುಕಲೇ ಇಲ್ಲ . ತಾರೆಗಳು ಪ್ರಶಸ್ತಿ ಪಡೆವಾಗಲೂ ಚಪ್ಪಾಳೆ ಚುರುಕಾಗಲಿಲ್ಲ . ವಿಜೇತರು ಪ್ರಶಸ್ತಿ ಸ್ವೀಕರಿಸುವಾಗ ಅವರ ಸಾಧನೆಯ ಅಭಿವ್ಯಕ್ತಿಯಾದ ಕ್ಲಿಪ್ಪಿಂಗ್ಸ್‌ ಕಾಣಿಸಲಿಲ್ಲ . ಅಂತೂ ಮೂರು ಗಂಟೆಗಳ ಕಾಲದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯವಾಯಿತು.

  ಹಾಗೆ ನೋಡಿದರೆ ಕಾರ್ಯಕ್ರಮ ಕಳೆಗುಂದಲಿಕ್ಕೆ ಕಾರಣವೇ ಇರಲಿಲ್ಲ . ಅಣ್ಣಾವ್ರು ಇರದಿದ್ದರೂ ಪಾರ್ವತಮ್ಮ ಬಂದಿದ್ದರು. ಬೋನಸ್‌ ಎಂಬಂತೆ ಪತ್ನಿ ಪ್ರೇಮಾ ಅವರೊಂದಿಗೆ ಮುಖ್ಯಮಂತ್ರಿ ಕೃಷ್ಣ ಹಾಜರಿದ್ದರು. ಒಬ್ಬರು ಸಚಿವ ಮತ್ತೊಬ್ಬರು ನಟ; ಇಬ್ಬರೂ ಶಿವಣ್ಣ ಹಾಜರಿದ್ದರು. ತಾರಾ, ಅನು ಪ್ರಭಾಕರ್‌, ಭಾವನಾ ತ್ರಿವಳಿ ತಾರಾ ರಂಗೂ ಕಾರ್ಯಕ್ರಮದಲ್ಲಿತ್ತು . ಲೀಲಾವತಿ, ಜಯಮಾಲಾ, ಜಯಂತಿ, ಮಾಲಾಶ್ರೀ, ರಮೇಶ್‌, ಎಚ್‌.ಜಿ.ದತ್ತಾತ್ರೇಯ, ವಿಜಯಭಾಸ್ಕರ್‌, ಕೆ.ವಿ.ಜಯರಾಂ ಮುಂತಾದ ಹಳಬರೂ ಅಂಬೇಡ್ಕರ್‌ ಭವನದಲ್ಲಿದ್ದರು. ವೇದಿಕೆ ಆಕರ್ಷಕವಾಗಿತ್ತು . ಬಣ್ಣ ಬಣ್ಣದ ದೀಪಗಳು ಜಗ ಜಗಿಸುತ್ತಿದ್ದವು. 1999-2000 ಹಾಗೂ 2000-2001, ಎರಡೂ ವರ್ಷಗಳ ಪ್ರಶಸ್ತಿ ವಿಜೇತ ತಾರೆಗಳ ಜಾತ್ರೆಯಿತ್ತು . ಆದರೆ ತಾರೆಗಳ ತೋಟದಲ್ಲಿ ಬೆಳಕೇ ಇರಲಿಲ್ಲ . ಶನಿವಾರ ಕಳೆದ ಅಮಾವಾಸ್ಯೆ ಕಾರ್ಯಕ್ರಮದ ಮಟ್ಟಿಗೆ ಮುಂದುವರಿದಂತಿತ್ತು .

  ಇದು- ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಗಳ ಪೈಕಿ ಅತ್ಯಂತ ಕಳಾಹೀನ ಸಮಾರಂಭ! ಬಹುತೇಕ ಪ್ರತಿಯಾಂದು ಸಮಾರಂಭಕ್ಕೂ ಸಾಕ್ಷಿಯಾಗಿರುವ ಹಿರಿಯ ಪತ್ರಕರ್ತರೊಬ್ಬರ ಈ ಉದ್ಘಾರಕ್ಕೆ ಇಲ್ಲ ಎನ್ನಲು ಯಾರಿಗೂ ಮನಸ್ಸಿರಲಿಲ್ಲ .

  ಕಾರ್ಯಕ್ರಮದ ವೇಗವಿದ್ದುದು ಬಿ.ವಿ.ಕಾರಂತರ ಗಜವದನ ಹೇ ರಂಭ.. ಅಬ್ಬರದ ಸಂಗೀತದ ಪ್ರಾರ್ಥನಾ ಗೀತೆ ಹಾಗೂ ಜಯಶ್ರೀ ಅವರ ಕಾರ್‌ ಕಾರ್‌ ಹಾಡಿನಲ್ಲಿ ಮಾತ್ರ. ಉಳಿದಂತೆ ಅದೊಂದು ಅಪ್ಪಟ ಸರ್ಕಾರಿ ಕಾರ್ಯಕ್ರಮ.

  ಕಥೆಗಳಿವೆ, ಗಮನ ಹರಿಸಿ
  ಪ್ರಶಸ್ತಿ ಪ್ರದಾನ ಮಾಡಿ ಪ್ರಶಸ್ತಿ ಪುರಸ್ಕೃತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲೆ ರಮಾದೇವಿ- ಕನ್ನಡ ನಿರ್ಮಾಪಕರು, ನಿರ್ದೇಶಕರು ಉತ್ತಮ ಕಥೆಗಳತ್ತ ಗಮನ ಹರಿಸಲು ಕರೆ ನೀಡಿದರು. ಕನ್ನಡದಲ್ಲಿ ಏಳು ಮಂದಿ ಜ್ಞಾನಪೀಠ ಗಳಿಸಿದ್ದಾರೆ. ಕನ್ನಡದ ಕಥಾ ಕಣಜ ಸಮೃದ್ಧವಾದುದು ಎಂದು ರಮಾದೇವಿ ಬಣ್ಣಿಸಿದರು. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕಲಾವಿದರು ಹೆಸರು ಮಾಡಿರುವ ಬಗ್ಗೆ , ಲಕ್ಷಾಂತರ ಮಂದಿಗೆ ಸ್ಯಾಂಡಲ್‌ವುಡ್‌ ಅನ್ನಪಾತ್ರೆಯಾಗಿರುವ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು.

  ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಸರ್ಕಾರ ಹಾಗೂ ಕನ್ನಡ ಸಿನಿಮಾ ಪ್ರೀತಿಯ ಕುರಿತು ವಾರ್ತಾ ಸಚಿವ ಶಿವಣ್ಣ ಮಾತನಾಡಿದರು. ಚಿತ್ರೋದ್ಯಮವನ್ನು ಸರ್ಕಾರ ಉದ್ಯಮವಾಗಿ ಗುರ್ತಿಸಿದೆ. ಮಾರ್ಚ್‌ 31, 2002 ದ ನಂತರ ರೀಮೇಕ್‌ ಚಿತ್ರಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ರದ್ದು ತೀರ್ಮಾನದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಶಿವಣ್ಣ ಹಳೆಯ ಮಾತುಗಳನ್ನೆ ಪುನರುಚ್ಛರಿಸಿದರು. ಪ್ರತೀ ವರ್ಷ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಿಗದಿತ ದಿನಾಂಕದಂದು ನಡೆಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನಂಜುಂಡಶೆಟ್ಟಿ ಮಾಡಿಕೊಂಡ ಮನವಿ ಬಗ್ಗೆ ವಿಚಾರ ವಿನಿಮಯ ನಡೆಸುವುದಾಗಿ ಶಿವಣ್ಣ ಭರವಸೆ ನೀಡಿದರು.

  ಇದೊಂದು ಆಟ, ಇಲ್ಲಿ ಬಯ್ಯುವವರೂ ಇರುತ್ತಾರೆ!
  ಬೋರು ಭಾಷಣಗಳ ನಡುವೆ ತುಸು ರಂಜನೆ ಒದಗಿಸಿದ್ದು ಕುರಿಗಳನ್ನು ಕಾದ ಖ್ಯಾತಿಯ ಎಂ.ಎಸ್‌.ಸತ್ಯು. ತಮಗೆ ಹಲವಾರು ಸಿನಿ ಉತ್ಸವಗಳ ಜ್ಯೂರಿಯಾದ ಅನುಭವವಿದೆ ಎಂದು ಹೇಳಿಕೊಂಡ ಅವರು, ತೀರ್ಪು ನೀಡಿ ಬೈಗುಳ ತಿಂದುದನ್ನು ನೆನಪಿಸಿಕೊಂಡರು. ಪ್ರಶಸ್ತಿ ನಿರೀಕ್ಷಿಸಿದ್ದ ಹಲವರಿಗೆ ನಿರಾಶೆಯಾಗಿದೆ. ನಾಗತಿಹಳ್ಳಿ, ಟಿ.ಎನ್‌.ಸೀತಾರಾಂ ಅಂಥವರು ನನ್ನ ವಿರುದ್ಧ ಮಾತಾಡಿದ್ದಾರೆ. ಪ್ರಶಸ್ತಿ ಸಿಗದವರು ಬಯ್ಯುವುದು ಸಹಜ. ಇದೊಂದು ಬಗೆಯ ಕ್ರೀಡೆಯಿದ್ದಂತೆ ಎಂದು ಸತ್ಯು ಸಮಾಧಾನ ಮಾಡಿಕೊಂಡರು.

  ಕಾರ್ಯಕ್ರಮದ ನಿರೂಪಣೆಯನ್ನು ಬಲು ಅಪರೂಪದ - ಭಾವನಾ ಖ್ಯಾತಿಯ ಜಯಂತ ಕಾಯ್ಕಿಣಿ ಹಾಗೂ ಚಂದ್ರಮುಖಿ ಖ್ಯಾತಿಯ ತಾರೆ ಭಾವನಾ ಜೋಡಿ ನಡೆಸಿಕೊಟ್ಟಿತು. ಭಾವನಾ ಮರಳಿ ಚಂದ್ರಮುಖಿಯಾಗಿದ್ದರೆ, ಜಯಂತ ಜೀವನ್ಮುಖಿಯಾಗಿದ್ದರು. ಆದರೆ ನಿರೂಪಣೆಯ ಮಾತುಗಳು ಕಾಯ್ಕಿಣಿ ಪೆನ್ನಿನಿಂದ ಮೂಡಿದಂತಿರಲಿಲ್ಲ . ಇತ್ತೀಚೆಗಷ್ಟೇ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡ ಕೆಸಿಎನ್‌ ಚಂದ್ರಶೇಖರ್‌ ಕೂಡ ಉತ್ಸಾಹದಿಂದ ಎದುರಾದವರ ಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದರು.

  ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ನಡೆದು 16 ವರ್ಷಗಳಾಗಿತ್ತು . ಇತ್ತೀಚಿನ ವರ್ಷಗಳಲ್ಲಿ ಮೈದಾನಗಳಲ್ಲಿ ನಡೆಯುತ್ತಿದ್ದ ಸಮಾರಂಭ ಈ ಬಾರಿ ಬೆಂಗಳೂರಿನ ಅಂಬೇಡ್ಕರ್‌ ಭವನದ ಒಳಾಂಗಣಕ್ಕೆ ಬಂದಿತ್ತು . ಈ ಕಾರಣದಿಂದಾಗಿಯೇ ಜನರಿಗೆ ಸಮಾರಂಭಕ್ಕೆ ಪ್ರವೇಶವಿರಲಿಲ್ಲ . ಸಮಾರಂಭದ ಬಗ್ಗೆ ಮಹಾನಗರದ ಮಹಾಜನತೆಗೂ ಅಷ್ಟಾಗಿ ಉತ್ಸಾಹವಿರಲಿಲ್ಲ . ಅವರ ಪಾಲಿಗೆ ಮೊನ್ನೆಯಷ್ಟೇ ಮೊದಲನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಈ ಟೀವಿ ಅಚ್ಚುಕಟ್ಟಾಗಿ ಮಾಡಿದ ನೇರ ಪ್ರಸಾರವಿತ್ತು .

  ಪ್ರಶಸ್ತಿ ಪಡೆದ ಪ್ರಮುಖರು
  ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ - ಕೆ.ವಿ.ಜಯರಾಂ(2000-2001) ಹಾಗೂ ವಿ.ಸೋಮಶೇಖರ್‌(1999-2001)
  ಡಾ।ರಾಜ್‌ಕುಮಾರ್‌ ಪ್ರಶಸ್ತಿ- ಲೀಲಾವತಿ (1999-2001) ಹಾಗೂ ವಿಜಯಭಾಸ್ಕರ್‌ (2000-2001)
  ನಟ, ನಟಿ ಪ್ರಶಸ್ತಿ- ಶಿವರಾಜ್‌ಕುಮಾರ್‌, ದತ್ತಾತ್ರೇಯ, ತಾರಾ, ಭಾವನಾ, ಉಮಾಶ್ರೀ
  ಅತ್ಯುತ್ತಮ ಚಿತ್ರಗಳು- ದೇವೀರಿ(ಕವಿತಾ ಲಂಕೇಶ್‌), ಮುಸ್ಸಂಜೆ (ಪಿ.ಆರ್‌.ರಾಮದಾಸ್‌ ನಾಯ್ಡು)

  ಪ್ರಶಸ್ತಿ ಪಡೆದ ಉಳಿದವರನ್ನು ಚಿತ್ರಗಳಲ್ಲಿ ನೋಡಿ.

  English summary
  Karnataka government gives away cine awards 199900, 200001, in a function sans entertainment

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more