Don't Miss!
- Finance
ಜಿಎಸ್ಟಿ ಪರಿಷ್ಕರಣೆ: ಯಾವುದು ದುಬಾರಿ, ಯಾವುದು ಅಗ್ಗ? ಇಲ್ಲಿದೆ ಪಟ್ಟಿ
- News
World Asteroid Day 2022- ಜೂನ್ 30ರಂದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ
- Sports
ಜರ್ಮನಿಯಲ್ಲಿ ಕೆಎಲ್ ರಾಹುಲ್ ಶಸ್ತ್ರಚಿಕಿತ್ಸೆ; ಟ್ವೀಟ್ ಮಾಡಿ ಮಾಹಿತಿ ತಿಳಿಸಿದ ಉಪನಾಯಕ
- Lifestyle
Vasthu tips: ಮನೆಯಲ್ಲಿ ಫ್ಯಾಮಿಲಿ ಫೋಟೋ ಹಾಕೋದಾದ್ರೆ ಈ ದಿಕ್ಕಿನಲ್ಲಿ ಮಾತ್ರ ಇಡಿ!
- Technology
ಇಯರ್ಬಡ್ಸ್ಗಳಲ್ಲಿ ಈ ಸಮಸ್ಯೆ ಸರ್ವೇ ಸಾಮಾನ್ಯ!..ಸರಿಪಡಿಸಲು ಹೀಗೆ ಮಾಡಿ!
- Automobiles
ಇವಿ ಸ್ಕೂಟರ್ಗಳಲ್ಲಿ ಅಗ್ನಿ ಅವಘಡಗಳಿಗೆ ನಿಖರ ಕಾರಣ ಪತ್ತೆಹಚ್ಚಿದ ಕೇಂದ್ರದ ತನಿಖಾ ಸಮಿತಿ
- Education
CBSE CISCE Result 2022 : ಬೋರ್ಡ್ ಪರೀಕ್ಷೆಗಳ ಫಲಿತಾಂಶ ಜು.15ರೊಳಗೆ ಪ್ರಕಟ ನಿರೀಕ್ಷೆ
- Travel
ಮಾನ್ಸೂನ್ ಸಮಯದಲ್ಲಿ ಭಾರತದಲ್ಲಿರುವ ಭೇಟಿಕೊಡಲೇಬೇಕಾದಂತಹ ಸ್ವರ್ಗ ಸದೃಶದಂತಿರುವ ಜಲಪಾತಗಳು!
ರಾಜ್ಯದ ಮೊಟ್ಟ ಮೊದಲನೆಯ ಹೈಡ್ರಾಲಿಕ್ ಜಿಮ್ 'ಪುನೀತ್' ಹೆಸರಿನಲ್ಲಿ ಲೋಕಾರ್ಪಣೆ
ವರನಟ ರಾಜ್ ಕುಮಾರ್ ನಂತರ ಕನ್ನಡದ ಜನತೆ ಅಷ್ಟಾಗಿ ಪ್ರೀತಿಸಿದ ಮತ್ತೊಬ್ಬ ನಟ ಅಂದರೆ ಅದು ಪುನೀತ್ ರಾಜ್ ಕುಮಾರ್. ಇಂದಿಗೂ ಕೂಡ ಅವರ ಸಮಾಧಿಗೆ ಸಾವಿರಾರು ಜನ ಭೇಟಿ ನೀಡುತ್ತಲೇ ಇದ್ದಾರೆ. ಅವರ ಅಭಿಮಾನಿಗಳಿಗೆ ಇನ್ನೂ 'ಅಪ್ಪು' ಅಗಲಿಕೆಯನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಪುನೀತ್ ಅವರ ಸೇವಾ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ಇಚ್ಛೆಯನ್ನು ಅಭಿಮಾನಿಗಳು ಸಹ ಹೊಂದಿದ್ದಾರೆ.
ಪುನೀತ್ ಅವರ ಆದರ್ಶಗಳನ್ನು ಮುಂದುವರಿಸುತ್ತಾ ಅವರ ಅಭಿಮಾನಿಗಳು ಕೂಡ ಅನೇಕ ಸೇವಾಕಾರ್ಯಗಳಿಗೆ ಮುಂದಾಗಿದ್ದಾರೆ. ಅಲ್ಲದೆ ದೊಡ್ಡಮಟ್ಟದಲ್ಲಿ ಪುನೀತ್ ಅವರ ಹೆಸರಿನಲ್ಲಿ ಸೇವಾಕಾರ್ಯಗಳನ್ನು ಕೂಡ ಇವರೆಲ್ಲ ಆರಂಭಿಸಿದ್ದಾರೆ. ಪುನೀತ್ ಹಾಕಿಕೊಟ್ಟಿರುವ ಮೇಲ್ಪಂಕ್ತಿಯನ್ನು ಅವರ ಅಭಿಮಾನಿಗಳು ಮಾತ್ರವಲ್ಲದೆ ಇತರ ಕಲಾವಿದರು ಕೂಡ ಅನುಸರಿಸಿ ಸೇವಾಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ.
ಪುನೀತ್, ಕಲಾ ಜೀವನ ಮತ್ತು ಸೇವಾಕಾರ್ಯಗಳನ್ನು ಅವರ ಮರಣಾನಂತರವೂ ಗೌರವಾರ್ಥವಾಗಿ ಗುರುತಿಸಿ ಅನೇಕ ತರದ ಪ್ರಶಸ್ತಿಗಳು ಮತ್ತು ಗೌರವಗಳು ಅವರನ್ನು ಹುಡುಕಿಕೊಂಡು ಬರುತ್ತಿದೆ. ಇತ್ತೀಚೆಗಷ್ಟೇ ಬಸವ ಪ್ರಶಸ್ತಿ ಕೂಡ ಗೌರವಪೂರ್ಣವಾಗಿ ಅವರಿಗೆ ನೀಡಲಾಗಿದೆ. ಅಲ್ಲದೆ, ಶೀಘ್ರದಲ್ಲೇ ಕರ್ನಾಟಕ ಸರ್ಕಾರ ಕೂಡ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ನೀಡುತ್ತಿದೆ.

ಡಾ.ಪುನೀತ್ ರಾಜ್ ಕುಮಾರ್ ಹೊರಾಂಗಣ ವ್ಯಾಯಾಮ ಶಾಲೆ
ಬಸವನಗುಡಿಯ ಕಹಳೆ ಬಂಡೆ (ಬ್ಯೂಗಲ್ ರಾಕ್) ಉದ್ಯಾನವನದಲ್ಲಿ ಹೊರಾಂಗಣ ವ್ಯಾಯಾಮಶಾಲೆ ತಲೆಯೆತ್ತಿದೆ. ಬಸವನಗುಡಿಯ ಕಹಳೆ ಬಂಡೆ ಉದ್ಯಾನವನದಲ್ಲಿ, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀ ಬಿ ಎಸ್ ಸತ್ಯನಾರಾಯಣ (ಕಟ್ಟೆ ಸತ್ಯ)ರವರ ಸ್ಥಳೀಯ ಮಹಾನಗರ ಪಾಲಿಕೆಯ ವಿಶೇಷ ಅನುದಾನದಲ್ಲಿ, ಡಾ.ಪುನೀತ್ ರಾಜ್ ಕುಮಾರ್ ರವರ ಸವಿ ನೆನಪಿನಲ್ಲಿ ಈ ಬಯಲು ವ್ಯಾಯಾಮ ಶಾಲೆಯನ್ನು ಆರಂಭಿಸಲಾಗಿದೆ. ಈ ಬಯಲು ವ್ಯಾಯಾಮ ಶಾಲೆಯನ್ನು ಇತ್ತೀಚೆಗೆ ಸಂಸದರಾದ ತೇಜಸ್ವಿ ಸೂರ್ಯ ಅವರು ಲೋಕಾರ್ಪಣೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಸವನಗುಡಿ ಶಾಸಕರಾದ ಶ್ರೀ ರವಿ ಸುಬ್ರಹ್ಮಣ್ಯ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, 'ಅಪ್ಪು ಬಳಗ'ದ ಸತೀಶ್ ಉರಾಳ್ ಸೇರಿದಂತೆ ಪುನೀತ್ ಅಭಿಮಾನಿಗಳು ಮತ್ತು ಸಾರ್ವಜನಿಕರು ನೆರೆದಿದ್ದರು.

ರಾಜ್ಯದ ಮೊಟ್ಟ ಮೊದಲ ಹೈಡ್ರೋಲಿಕ್ ಜಿಮ್
ಇದು ಕೇವಲ ಹೊರಾಂಗಣ ಅಥವಾ ಬಯಲು ವ್ಯಾಯಾಮಶಾಲೆ ಮಾತ್ರವಲ್ಲ, ಇದು ರಾಜ್ಯದ ಮೊಟ್ಟ ಮೊದಲ ಹೈಡ್ರೋಲಿಕ್ ಜಿಮ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ದಕ್ಷಿಣ ಭಾರತದ ಮೊದಲನೆಯ ಹೈಡ್ರೋಲಿಕ್ ಜಿಮ್ ಚೆನ್ನೈನಲ್ಲಿ ಆರಂಭವಾಗಿದೆ. ಕರ್ನಾಟಕದಲ್ಲಿ ಇದೆ ಮೊದಲನೆಯ ಇಂತಹ ಜಿಮ್ ಆಗಿದೆ. ಇದನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸಲಾಗಿದೆ. ಅತ್ಯಂತ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ನಡೆದ ಕಾರ್ಯಕ್ರಮದಲ್ಲಿ ಬಯಲು ವ್ಯಾಯಾಮ ಶಾಲೆಯನ್ನು ಉದ್ಘಾಟನೆ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಮತ್ತು ಅಪ್ಪು ನಡುವಿನ ಒಡನಾಟವನ್ನು ಮೆಲಕು ಹಾಕಿಕೊಂಡಿದ್ದಾರೆ. 'ಪುನೀತ್ ಅವರ ಸೇವಾಕಾರ್ಯಗಳು ಪ್ರತಿಯೊಬ್ಬರಿಗೂ ಆದರ್ಶ. ಎಲ್ಲರೂ ಕೂಡ ಅವರ ಹಾದಿಯಲ್ಲೇ ಮುನ್ನಡೆಯಬೇಕಾಗಿದೆ.' ಅಂತ ಇದೇ ಸಂದರ್ಭದಲ್ಲಿ ಸೂರ್ಯ ಹೇಳಿದ್ದಾರೆ. ಫಿಲ್ಮಿಬೀಟ್ ಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯರಿಗೆ ಹೆಚ್ಚಿನ ಉಪಯೋಗವಾಗುತ್ತಿದೆ: ಸತೀಶ್ ಉರಾಳ್
'ಫಿಟ್ನೆಸ್ ಗೆ ರೋಲ್ ಮಾಡೆಲ್ ಆಗಿದ್ದವರು ಪುನೀತ್. ಇಂತಹ ವ್ಯಕ್ತಿಯ ಹೆಸರಿನಲ್ಲಿ ಈ ಹೊಸ ಹೈಡ್ರೋಲಿಕ್ ಜಿಮ್ ಇಲ್ಲಿ ಆರಂಭವಾಗಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಈ ಹೈಡ್ರೋಲಿಕ್ ಜಿಮ್ ನಿಂದ ಸ್ಥಳೀಯ ನಿವಾಸಿಗಳು ಸಾಕಷ್ಟು ಉಪಯೋಗವನ್ನು ಪಡೆಯುತ್ತಿದ್ದಾರೆ' ಅಂತ ಸ್ಥಳೀಯರು ಆಗಿರುವ 'ಅಪ್ಪು ಬಳಗ'ದ ರೂವಾರಿ ಸತೀಶ್ ಉರಾಳ್ ಕನ್ನಡ ಫಿಲ್ಮಿಬೀಟ್ ಗೆ ಮಾಹಿತಿ ನೀಡಿದ್ದಾರೆ. 'ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತಿನಲ್ಲಿ ಕೂಡ ದೊಡ್ಡಮಟ್ಟದಲ್ಲಿ ಸಾರ್ವಜನಿಕರು ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇಲ್ಲಿ ವ್ಯಾಯಾಮ ಮಾಡುತ್ತಿದ್ದಾರೆ' ಅಂತ ಅವರು ಫಿಲ್ಮಿಬೀಟ್ ಗೆ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ ಹೈಡ್ರೋಲಿಕ್ ಜಿಮ್ ಗಳು
ಹೈಡ್ರೋಲಿಕ್ ಜಿಮ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ ಇತರ ಜಿಮ್ ಉಪಕರಣಗಳಿಗಿಂತ ಇದರ ಮೇಲೆ ವರ್ಕೌಟ್ ಮಾಡುವುದು ತುಂಬಾ ಸುಲಭ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಹೀಗಾಗಿ ಇದರಿಂದ ವ್ಯಾಯಾಮ ಮಾಡುವುದು ತುಂಬಾ ಸುಲಭ. ಇದು ವಿಶೇಷವಾಗಿ ದೇಹದಲ್ಲಿನ ಕೊಬ್ಬು ಮತ್ತು ಸ್ನಾಯುಸೆಳೆತಗಳನ್ನು ನಿವಾರಣೆಗೊಳಿಸುತ್ತದೆ. ಹೈಡ್ರಾಲಿಕ್ ಜಿಮ್ ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಅತ್ಯಂತ ಜನಪ್ರಿಯ. ಚಿಕಾಗೊ ಬೇರ್ಸ್, ಅಮೇರಿಕಾದ ಹಾಕಿ ತಂಡ, NBA ಆಟಗಾರರು ಮತ್ತು ವೃತ್ತಿಪರ ಬಾಕ್ಸರ್ ಗಳು ಇತ್ತೀಚಿನ ದಿನಗಳಲ್ಲಿ ಹೈಡ್ರೋಲಿಕ್ ಜಿಮ್ ಗೆ ಹೆಚ್ಚಾಗಿ ಮೊರೆಹೋಗುತ್ತಿದ್ದಾರೆ. ಸರಳ ಮತ್ತು ಸುಲಭವಾಗಿ ಮಾಡಬಹುದಾದ ಜಿಮ್, ಹೈಡ್ರೋಲಿಕ್ ಜಿಮ್. ಜನಸಾಮಾನ್ಯರು ಕೂಡ ಆರೋಗ್ಯ ಮತ್ತು ಲವಲವಿಕೆಯ ಜೀವನದ ದೃಷ್ಟಿಯಿಂದ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಹೈಡ್ರೋಲಿಕ್ ಜಿಮ್ ಗೆ ಮೊರೆಹೋಗುತ್ತಿದ್ದಾರೆ.