»   »  ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಹೆದರಬೇಡಿ, ಉನ್ನಿಕೃಷ್ಣನ್

ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಹೆದರಬೇಡಿ, ಉನ್ನಿಕೃಷ್ಣನ್

Subscribe to Filmibeat Kannada
Wipe out terrorism- Students awareness campaign
ಬೆಂಗಳೂರು, ಫೆ. 28 : ಭಯೋತ್ಪಾದನೆ ಹಾಗೂ ಉಗ್ರರಿಗೆ ಹೆದರಬೇಡಿ. ದೇಶಕ್ಕಾಗಿ ಪ್ರಾಣ ತ್ಯಾಗಕ್ಕೆ ಸಿದ್ಧರಾಗಿ, ಸಂದೀಪ್ ಸತ್ತಿರಬಹುದು. ಆತನ ಕುಟುಂಬ ನಾವುಗಳು ಕೂಡಾ ದೇಶಕ್ಕಾಗಿ ಪ್ರಾಣ ನೀಡಲು ಸಿದ್ಧ. ಇಂದೇ ನೀವೂ ಕೂಡಾ ಪ್ರತಿಜ್ಞೆ ಮಾಡಿ. ದೇಶಕ್ಕಾಗಿ ಎಂತಹ ತ್ಯಾಗಕ್ಕೂ ನಾವು ರೆಡಿ ಎಂದು ಮುಂಬೈ ಭಯೋತ್ಪಾದನೆಯಲ್ಲಿ ವೀರಮರಣ ಅಪ್ಪಿದ ರಾಷ್ಟ್ರೀಯ ಭದ್ರತಾ ಪಡೆ ಮೇಜರ್ ಸಂದೀಪ್ ತಂದೆ ಉನ್ನಿಕೃಷ್ಣನ್ ಅವರ ಮನದಾಳದ ಮಾತಿದು. ಭಯೋತ್ಪಾದನೆಯನ್ನು ಮೆಟ್ಟಿ ನಿಲ್ಲಬೇಕೆಂದರೆ ಮೊದಲು ಭಯವನ್ನು ಪಕ್ಕಕ್ಕಿರಿಸಿ ಎಂದು ಅವರು ಸಲಹೆ ನೀಡಿದರು.

ನಗರದ ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರ ಪ್ರಾಯೋಜಕತ್ವದ ಭಯೋತ್ಪಾದನಾ ವಿರೋಧಿ ಅಭಿಯಾನ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶಕ್ಕಾಗಿ ನಿಮ್ಮ ಕಾಣಿಕೆ ಅಗತ್ಯ ಎಂದರು. ವಿದ್ಯಾರ್ಥಿಗಳೆ ನಿಮಗೊಂದು ಸಲಹೆ ನೀಡುವೆ, ಜೀವನದಲ್ಲಿ ಏನಾದರೂ ಸಾಧಿಸುವೆ ಎಂದು ನಿರ್ಧರಿಸಿ, ದೇಶಕ್ಕಾಗಿ ಏನಾದರೂ ನೀಡುವೆ ಎಂದು ತೀರ್ಮಾನ ಕೈಗೊಳ್ಳಿ ಎಂದ ಕಿವಿ ಮಾತು ಹೇಳಿದರು.

ಸಂದೀಪ್ ನಲ್ಲಿ ಮಹತಕಾಂಕ್ಷೆ ಇತ್ತು. ಸಾಯುತ್ತೇನೆ ಎಂದು ತಿಳಿದಿದ್ದರೂ ದೇಶ ಕಾಯುವ ಕೆಲಸ ಆಯ್ದುಕೊಂಡು ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾನೆ. ಭಯೋತ್ಪಾದನೆ ಎದುರಿಸಬೇಕೆಂದರೆ ನಾವು ಮೊದಲು ಧೈರ್ಯದಿಂದ ಇರಬೇಕು. ಅದಾಗ ಮಾತ್ರ ದುಷ್ಟ ಶಕ್ತಿಗಳ ಕೃತ್ಯಗಳಿಂದ ಪಾರಾಗಲು ಸಾಧ್ಯ ಎಂದು ಹೇಳಿದರು.

ಸಂದೀಪ್ ಸತ್ತಿರುವುದು ನಮಗೆ ದುಃಖ ಇಲ್ಲ. ಆತನ ಬಗ್ಗೆ ನಮಗೆ ಹೆಮ್ಮೆ ಇದೆ. ಇಡೀ ದೇಶವೇ ಆತನ ಸಾಧನೆಯನ್ನು ಕೊಂಡಾಡಿತು. ಹೆತ್ತವರಿಗೆ ಇದಕ್ಕಿಂತ ಹೆಚ್ಚಿನದೇನು ಬೇಕು. ಆತನಿಗೆ ತನ್ನ ಸಾವಿನ ಬಗ್ಗೆ ತಿಳಿದಿತ್ತು. ಆದರೂ ಭದ್ರತಾ ಪಡೆಗೆ ಸೇರಿಕೊಂಡು ವೀರಮರಣವನ್ನಪ್ಪಿದ. ದೇಶಕ್ಕೆ ಮಾದರಿ ವ್ಯಕ್ತಿಯಾಗಿ ಅಸುನೀಗಿದ ಎಂದು ಭಾವೋದ್ವೇಗದಿಂದ ಹೇಳಿದರು.

ಮುಂಬೈ ಘಟನೆ ನಂತರ ಪಾಕಿಸ್ತಾನ ನಡೆದುಕೊಳ್ಳುವ ರೀತಿ, ನೀಡುತ್ತಿರುವ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಭಾರತ ಬೇಡಿಕೊಳ್ಳತ್ತಿರುವುದು ವಿಷಾದಕರ ಸಂಗತಿ ಎಂದರು. ಭಾರತ ಸರ್ಕಾರ ಈ ವಿಷಯದಲ್ಲಿ ಕಾಲಹರಣದಲ್ಲಿ ತೊಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಕೈಗೊಂಡರು.

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅಭಿಯಾನವನ್ನು ಉದ್ಘಾಟಿಸಿದರು. ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠಧಿಪತಿಬಾಲಗಂಗಾಧರನಾಥ ಸ್ವಾಮೀಜಿ, ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಅನಂತಕುಮಾರ್, ಸಚಿವರಾಜ ಕಟ್ಟಾ ಸುಬ್ರಮಣ್ಯನಾಯ್ಡು, ಅಶೋಕ್, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ ಮತ್ತಿತತರು ಪಾಲ್ಗೊಂಡಿದ್ದರು. ಹುತಾತ್ಮ ಸಂದೀಪ್ ಅವರ ತಂದೆತಾಯಿಗಳನ್ನು ಅಡ್ವಾಣಿ ಸನ್ಮಾನಿಸಿದರು.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada