ಗಣೇಶ ಮೆರವಣಿಗೆ ವೇಳೆ ರಸ್ತೆಯಲ್ಲಿ ಕಂಡ ಭಾವ, ಗುರೂಜಿ ಹಾಗೂ ಸುಲೋಚನಾ
ರಾಜ್ ಬಿ. ಶೆಟ್ಟಿ ನಿರ್ಮಿಸಿ ನಟಿಸಿದ 'ಸು ಫ್ರಂ ಸೋ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಕನ್ನಡ ಮಾತ್ರವಲ್ಲದೇ ಮಲಯಾಳಂ ಹಾಗೂ ತೆಲುಗು ಭಾಷೆಗಳಿಗೂ ಡಬ್ ಆಗಿ ಸಕ್ಸಸ್ ಕಂಡಿದೆ. ಈಗಾಗಲೇ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ಚಿತ್ರದ ಪಾತ್ರಗಳು ಜನರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ.
ಜೆಪಿ ತುಮ್ಮಿನಾಡ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಲೀಡ್ ರೋಲ್‌ನಲ್ಲಿ ಮಿಂಚಿದ್ದಾರೆ. ಕರಾವಳಿ ಭಾಗದ ಮರ್ಲೂರಿನಲ್ಲಿ ನಡೆಯುವ ಕಥೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸಿನಿಮಾ ನೋಡಿ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಶೀಘ್ರದಲ್ಲೇ ಸಿನಿಮಾ ಓಟಿಟಿಗೆ ಬರ್ತಿದೆ. ಪರಭಾಷಿಕರು ಕೂಡ ಈ ಹೊಸಬರ ಪ್ರಯತ್ನಕ್ಕೆ ಬಹುಪರಾಕ್ ಹೇಳುತ್ತಿದ್ದಾರೆ.

ಆರಂಭದಿಂದ ಕೊನೆಯವರೆಗೂ ನಗಿಸುವ ಸಿನಿಮಾ ಅಂತ್ಯದಲ್ಲಿ ಒಂದೊಳ್ಳೆ ಸಂದೇಶವನ್ನು ಸಾರುವ ಮೂಲಕ ನೋಡುಗರಿಗೆ ಮತ್ತಷ್ಟು ಹತ್ತಿರವಾಗುತ್ತದೆ. ಚಿತ್ರದ ರವಿಯಣ್ಣ, ಗುರೂಜಿ, ಸುಲೋಚನಾ ಹಾಗೂ ಭಾವ ಪಾತ್ರಗಳು ಪ್ರೇಕ್ಷಕರನ್ನು ಕಾಡುತ್ತಲೇ ಇವೆ. ಇನ್ನು ಹೆಚ್ಚು ಡೈಲಾಗ್ ಇಲ್ಲದೇ ಒಂದೆರಡು ಸನ್ನಿವೇಶಗಳಲ್ಲಿ ಬಂದು ಹೋಗ ಭಾವ(ಪುಷ್ಪರಾಜ್ ಬೋಲಾರ್) ಪಾತ್ರ ಪ್ರೇಕ್ಷಕರಿಗೆ ಅಚ್ಚುಮೆಚ್ಚು ಎನಿಸಿಕೊಂಡಿದೆ.
ಎಲ್ಲೆಲ್ಲೂ ಗಣೇಶ ಹಬ್ಬದ ಸಂಭ್ರಮ ಕಂಡು ಬರ್ತಿದೆ. ಬುಧವಾರ ಗಣೇಶನನ್ನು ಕೂರಿಸಿ ಕೆಲವರು 3ನೇ ದಿನ ಅಂದರೆ ಶುಕ್ರವಾರ ಮೆರವಣಿಗೆ ಮಾಡಿ ವಿಸರ್ಜನೆ ಮಾಡಿದ್ದಾರೆ. ಕರಾವಳಿ ಭಾಗದಲ್ಲಿ ಗಣೇಶ ಮೆರವಣಿಗೆಯಲ್ಲಿ ಕೂಡ 'ಸು ಫ್ರಮ್ ಸೋ' ಸಿನಿಮಾ ಕ್ರೇಜ್ ಕಂಡು ಬಂದಿದೆ. ಉಡುಪಿ ಕಟಪಾಡಿಯಲ್ಲಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಚಿತ್ರದ ಜನಪ್ರಿಯ ಪಾತ್ರಗಳ ವೇಷಭೂಷಣಗಳನ್ನು ಧರಿಸಿ ನೆರೆದವರನ್ನು ರಂಜಿಸಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ, ಆ ಪಾತ್ರಗಳು ಸದ್ದು ಮಾಡುತ್ತಿವೆ.
ಕಟಪಾಡಿಯಲದಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಯೋಜಿಸಿದ್ದ ಮೆರವಣಿಗೆಯ ರಂಗೇರಿತ್ತು. ಸಂಗೀತ, ನೃತ್ಯ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಮೆರವಣಿಗೆ ಜೋರಾಗಿ ನಡೆದಿದೆ. ಜಯಕರ್ ಕುಂದರ್ ನೇತೃತ್ವದ ಸಂಗಮ ಫ್ರೆಂಡ್ಸ್ ತಂಡದ ಸದಸ್ಯರು ಹೀಗೆ ಭಾವ, ಗುರೂಜಿ, ಸುಲೋಚನಾ ಗೆಟಪ್‌ಗಳಲ್ಲಿ ದರ್ಶನ ಕೊಟ್ಟಿದ್ದಾರೆ.
ಗಣೇಶ ಉತ್ಸವದಲ್ಲಿ ಹೀಗೆ ಸಿನಿಮಾಗಳ ಪಾತ್ರಗಳ ಕ್ರೇಜ್ ಹೊಸದೇನು ಅಲ್ಲ. ಈ ಹಿಂದೆ 'KGF' ರಾಕಿಭಾಯ್, ವಿಕ್ರಾಂತ್ ರೋಣ ಗೆಟಪ್ ಗಣೇಶ ಮೂರ್ತಿಗಳನ್ನು ಯುವಕರು ಪ್ರತಿಷ್ಠಾಪಿಸಿ ಖುಷಿ ಪಟ್ಟಿದ್ದರು. ತಮಿಳುನಾಡಿದ ಡೆಂಕನಿಕೋಟೆಯಲ್ಲಿ ಥೇಟ್ 'ಪುಷ್ಪ'-2 ಸಿನಿಮಾ ಸೆಟ್ ರೀತಿ ಪೆಂಡಾಲ್ ನಿರ್ಮಿಸಿ ಯುವಕರು ಗಣೇಶೋತ್ಸವ ಆಚರಿಸಿದ್ದಾರೆ. 30 ಲಕ್ಷ ರೂ. ವೆಚ್ಚದಲ್ಲಿ ಈ ಸೆಟ್ ನಿರ್ಮಾಣ ಮಾಡಿದ್ದಾರೆ. 2 ವರ್ಷಗಳ ಹಿಂದೆ ಅದೇ ಜಾಗದಲ್ಲಿ 'KGF' ಸಿನಿಮಾ ಸೆಟ್ ನಿರ್ಮಿಸಿ ಯುವಕರು ಸಂಭ್ರಮಿಸಿದ್ದರು.
ಜುಲೈ 25ರಂದು ತೆರೆಗೆ ಬಂದಿದ್ದ 'ಸು ಫ್ರಮ್ ಸೋ' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆದಿದೆ. ವೀಕೆಂಡ್‌ಗಳಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. 'ಕೂಲಿ' ಹಾಗೂ 'ವಾರ್- 2' ರೀತಿಯ ದೊಡ್ಡ ಸಿನಿಮಾಗಳ ಆರ್ಭಟದ ನಡುವೆಯೂ ಸುಲೋಚನಾ ದರ್ಬಾರ್‌ಗೆ ಬ್ರೇಕ್ ಬೀಳಲಿಲ್ಲ. ಈಗಾಗಲೇ 25 ದಿನ ಪೂರೈಸಿ ಸಿನಿಮಾ 50ನೇ ದಿನದತ್ತ ದಾಪುಗಾಲು ಇಟ್ಟಿದೆ.
ಅಜಯ್ ದೇವಗನ್, ಕಿಚ್ಚ ಸುದೀಪ್ ಸೇರಿ ಹಲವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ಹಿಂದಿಗೆ ಡಬ್ ಆಗುವ ನಿರೀಕ್ಷೆಯಿದೆ. ಈಗಾಗಲೇ ಸಿನಿಮಾ ಒಟ್ಟಾರೆ 118 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗ್ತಿದೆ. 'KGF'-2, 'ಕಾಂತಾರ' ಹಾಗೂ 'KGF'-1 ಬಳಿಕ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಎನಿಸಿಕೊಂಡಿದೆ.


Click it and Unblock the Notifications











