ಹಸೆಮಣೆ ಏರಿದ 'ಸು ಫ್ರಮ್ ಸೋ' ಖ್ಯಾತಿಯ ಜೆಪಿ ತುಮ್ಮಿನಾಡು; ಇಲ್ಲಿದೆ ಇಂಟ್ರೆಸ್ಟಿಂಗ್ ಲವ್ ಸ್ಟೋರಿ
ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ದೊಡ್ಡ ಮಟ್ಟದಲ್ಲಿ ಗೆದ್ದಿದ್ದ ಕನ್ನಡ ಸಿನಿಮಾ 'ಸು ಫ್ರಮ್ ಸೋ'. ರಾಜ್ ಬಿ ಶೆಟ್ಟಿ ನಿರ್ಮಾಣದ ಈ ಕಾಮಿಡಿ ಚಿತ್ರವನ್ನು ಜೆಪಿ ತುಮ್ಮಿನಾಡು ನಿರ್ದೇಶಿಸಿ ನಟಿಸಿದ್ದರು. ಈ ಸಿನಿಮಾ ಮೂಲಕ ಕನ್ನಡ ಸಿನಿರಸಿಕರಿಗೆ ಪರಿಚಿತರಾಗಿದ್ದ ಜೆಪಿ ತುಮ್ಮಿನಾಡು ಇದೀಗ ಹಸಮಣೆ ಏರಿದ್ದಾರೆ. ತಮ್ಮ ಪ್ರೇಯಸಿ ರಶ್ಮಿಕಾ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಮಂಗಳೂರಿನಲ್ಲಿ ಜೆಪಿ ತುಮ್ಮಿನಾಡು ಹಾಗೂ ರಶ್ಮಿಕಾ ಜೋಡಿ ಮದುವೆ ನೆರವೇರಿದೆ. ನಟ ಪ್ರಕಾಶ್ ತುಮ್ಮಿನಾಡು ಸೇರಿದಂತೆ ಆಪ್ತರು, ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಕಳೆದೆರಡು ದಿನಗಳಿಂದ ಮದುವೆ ಶಾಸ್ತ್ರಗಳು ನಡೀತಿತ್ತು. ಮೊನ್ನೆ(ಮೇ 4) ಮೆಹಂದಿ ಹಾಗೂ ಸಂಗೀತ್ ಕಾರ್ಯಕ್ರಮ ನಡೆದಿತ್ತು. ಇಂದು(ಮೇ 6) ಮಾಂಗಲ್ಯಧಾರಣೆ ನೆರವೇರಿದೆ. ಇಬ್ಬರ ಮದುವೆ ಫೋಟೊ ಹಾಗೂ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತುಳು ರಂಗಭೂಮಿಯಲ್ಲಿ ಜೆಪಿ ತುಮ್ಮಿನಾಡು ಗುರ್ತಿಸಿಕೊಂಡಿದ್ದರು. ಅದೇ ಸಮಯದಲ್ಲಿ ರಶ್ಮಿ ಎಂಬುವವರ ಪರಿಚಯ, ಸ್ನೇಹ ಶುರುವಾಗಿತ್ತು. ಬಳಿಕ ಅದು ಪ್ರೀತಿಯಾಗಿ ಬದಲಾಗಿತ್ತು. 14 ವರ್ಷಗಳಿಂದ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಆ ಪ್ರೀತಿಗೆ ಮದುವೆ ಮುದ್ರೆ ಬಿದ್ದಿದೆ. ಮಂಗಳೂರಿನ ಪಿಲಿಕುಳದಲ್ಲಿ ಸ್ಕೌಟ್ ಭವನದಲ್ಲಿ ಮದುವೆ ನೆರವೇರಿದೆ. ಶಾಲಾ ದಿನಗಳಲ್ಲೇ ಕೆಲವರ ಮೇಲೆ ಜೆಪಿ ತುಮ್ಮಿನಾಡು ಅವರಿಗೆ ಕ್ರಶ್, ಲವ್ ಆಗಿತ್ತಂತೆ. ಆದರೆ ತುಳು ನಾಟಕರಂಗ ಸೇರಿದ ಮೇಲೆ ರಶ್ಮಿಕಾ ಪರಿಚಯ ಆಗಿತ್ತು.
ನಾಟಕದಲ್ಲಿ ಇಬ್ಬರೂ ಪ್ರೇಮಿಗಳಾಗಿ ನಟಿಸೋಕೆ ಆರಂಭಿಸಿದ್ದರು. ಆದರೆ ತೆರೆ ಹಿಂದೆ ಇಬ್ಬರ ನಡುವೆ ಎಲ್ಲವೂ ಸರಿ ಇರಲಿಲ್ಲ. ಯಾವುದೋ ಕಾರಣಕ್ಕೆ ಜೆಪಿ ತುಮ್ಮಿನಾಡು ಅವರ ಮೇಲೆ ರಶ್ಮಿ ಮುನಿಸಿಕೊಂಡಿದ್ದರು. ತಪ್ಪಾಗಿ ಭಾವಿಸಿದ್ದರು. ಆದರೆ ಅಸಲಿ ವಿಚಾರ ತಿಳಿದ ಬಳಿಕ ಎಲ್ಲವೂ ಸರಿ ಹೋಗಿತ್ತು. ಅಷ್ಟರಲ್ಲಿ ಜೆಪಿ ತುಮ್ಮಿನಾಡು ಸಿಕ್ಕಾಪಟ್ಟೆ ಬೈಸಿಕೊಂಡಿಕೊಂಡಿದ್ದರು. ತಪ್ಪಿನ ಅರಿವಾದ ಬಳಿಕ ಮುನಿಸು ಕಾಳಜಿ ಆಗಿ ಬದಲಾಗಿ ಪ್ರೀತಿಗೆ ವೇದಿಕೆ ಆಗಿತ್ತು.
ತುಳು ನಾಟಕಗಳನ್ನು ಬರೆದು ನಟಿಸುವ ಮೂಲಕ ಜೆಪಿ ತುಮ್ಮಿನಾಡು ಜನಪ್ರಿಯತೆ ಗಳಿಸಿದ್ದರು. ಬಳಿಕ 'ಕಟಪಾಡಿ ಕಟ್ಟಪ್ಪ' ಎಂಬ ತುಳು ಸಿನಿಮಾ ನಿರ್ದೇಶಿಸಿದ್ದರು. ಅದೇ ಸಮಯದಲ್ಲಿ ರಾಜ್. ಬಿ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಒಂದು ಮೊಟ್ಟೆಯ ಕಥೆ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 'ಗರುಡ ಗಮನ ವೃಷಭ ವಾಹನ', 'ಸ್ವಾತಿ ಮುತ್ತಿನ ಮಳೆ ಹನಿಯೇ', 'ಸಪ್ತಸಾಗರದಾಚೆ ಎಲ್ಲೋ'-ಬಿ ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ 'ಕಟ್ಟೆಮಾರ್' ಎಂಬ ತುಳು ಚಿತ್ರದಲ್ಲಿ ಬಣ್ಣ ಹಚ್ಚಿದ್ದರು.
ಅಜಯ್ ದೇವಗನ್ ಸೇರಿದಂತೆ ಸಾಕಷ್ಟು ಫಿಲ್ಮ್ ಮೇಕರ್ಸ್ 'ಸು ಫ್ರಂ ಸೋ' ಸಿನಿಮಾ ಮೆಚ್ಚಿದ್ದರು. ಸಿಂಪಲ್ ಕಥೆಯನ್ನು ಎಲ್ಲಾ ವರ್ಗದ ಪ್ರೇಕ್ಷಕರಿಗೆ ಮೆಚ್ಚುಗೆ ಆಗುವಂತೆ ಕಟ್ಟಿಕೊಟ್ಟು ಜೆಪಿ ತುಮ್ಮಿನಾಡು ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಅಂದಾಜು 6 ಕೋಟಿ ರೂ. ಬಜೆಟ್ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿತ್ತು.
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳು ಮಾಡದ ಸಾಧನೆಯನ್ನು ಜೆಪಿ ತುಮ್ಮಿನಾಡು ಮಾಡಿ ತೋರಿಸಿದ್ದರು. ಚಿತ್ರದ ಪ್ರತಿ ಸನ್ನಿವೇಶ, ಪ್ರತಿ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ನಿರ್ದೇಶನದ ಜೊತೆಗೆ ನಾಯಕ ಅಶೋಕನ ಪಾತ್ರದಲ್ಲಿ ನಟಿಸಿ ಗಮನ ಸೆಳೆದರು. ಬಿಡುಗಡೆಯಾದ ಒಂದು ವಾರ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು.


Click it and Unblock the Notifications