'ಎಕ್ಕ'ಗಿಂತ್ಲೂ 'ಸು ಫ್ರಂ ಸೋ' ಆರ್ಭಟ ಜೋರು; ವರ್ಷದ ಮೊದಲ ಸೂಪರ್ ಹಿಟ್ ಯಾವ್ದು?
ಕನ್ನಡ ಚಿತ್ರರಂಗ ಮತ್ತೆ ಗೆಲುವಿನ ಲಯಕ್ಕೆ ಮರಳುತ್ತಿದೆ. ಕಳೆದೊಂದು ವಾರದಿಂದ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳ ಅಬ್ಬರ ಜೋರಾಗಿದೆ. ಮುಂದಿನ ವಾರ ಮತ್ತೊಂದು ಸಿನಿಮಾ ಸದ್ದು ಮಾಡಲು ಸಜ್ಜಾಗುತ್ತಿದೆ.
ವರ್ಷದ ಆರೇಳು ತಿಂಗಳು ಕನ್ನಡದಲ್ಲಿ 120ಕ್ಕೂ ಅಧಿಕ ಸಿನಿಮಾಗಳು ತೆರೆಗಪ್ಪಳಿಸಿದ್ದವು. 'ಛೂ ಮಂತರ್', 'ಯುದ್ಧಕಾಂಡ'-2 ಹಾಗೂ 'ಮಾದೇವ' ಚಿತ್ರಗಳು ಮಾತ್ರ ಕೊಂಚಮಟ್ಟಿಗೆ ಸದ್ದು ಮಾಡಿದ್ದವು. ಆದರೆ ಯುವರಾಜ್‌ಕುಮಾರ್ ನಟನೆಯ 'ಎಕ್ಕ' ದೊಡ್ಡದಾಗಿ ಓಪನಿಂಗ್ ಪಡೆದುಕೊಂಡು ಗಮನ ಸೆಳೆದಿತ್ತು. ರಾಜ್ಯಾದ್ಯಂತ ಆಕ್ಷನ್ ಥ್ರಿಲ್ಲರ್ ಸಿನಿಮಾ ದೊಡ್ಡಮಟ್ಟದಲ್ಲಿ ತೆರೆಗೆ ಬಂದಿತ್ತು. ಕಿರೀಟಿ ಹಾಗೂ ಶ್ರೀಲೀಲಾ ನಟನೆಯ 'ಜ್ಯೂನಿಯರ್' ಸಿನಿಮಾ ಕೂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ವಾರ ಹೊಸಬರ 'ಸು ಫ್ರಂ ಸೋ' ದರ್ಬಾರ್ ಜೋರಾಗಿದೆ. ರಾಜ್ ಬಿ ಶೆಟ್ಟಿ ನಿರ್ಮಾಣದ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಸುಳಿವು ಸಿಕ್ತಿದೆ. ಕಡಿಮೆ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಆದರೆ ರೆಸ್ಪಾನ್ಸ್ ಮಾತ್ರ ಅದ್ಭುತವಾಗಿದೆ. 'ಎಕ್ಕ' ಚಿತ್ರಕ್ಕೆ ಹೋಲಿಸಿದರೆ ಇದು ಸಣ್ಣ ಸಿನಿಮಾ ಇರಬಹುದು. ಆದರೆ ಇದ್ದಿದ್ದರಲ್ಲಿ ಜೆಪಿ ತುಮ್ಮಿನಾಡ್ ನಿರ್ದೇಶನದ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಸಿಂಪಲ್ ಕಥೆಯನ್ನು ಹಾಸ್ಯಭರಿತವಾಗಿ ಹೇಳಿ ಜೆಪಿ ತುಮ್ಮಿನಾಡು ಗೆದ್ದಿದ್ದಾರೆ. ಕರಾವಳಿ ಭಾಗದಲ್ಲಿ ನಡೆಯುವ ಕಥೆ ಇದು. ಹಾಗಾಗಿ ಅಲ್ಲಿನ ಕಲಾವಿದರು, ತಂತ್ರಜ್ಞರು ಹೆಚ್ಚಾಗಿ ಕೆಲಸ ಮಾಡಿದ್ದಾರೆ. ಕರಾವಳಿಯ ಮರ್ಲೂರು. ಯಾವುದೇ ಸಮಸ್ಯೆ ಬಂದರೂ ನೆನಪಾಗುವ ರವಿಯಣ್ಣ. ನಡುವೆ ಅಶೋಕನ ಪ್ರೀತಿ. ರವಿಯಣ್ಣನಿಗೆ ಸವಾಲು ಹಾಕಲು ದೆವ್ವವಾಗಿ ಬರುವ ಸುಲೋಚನ. ಒಟ್ಟಾರೆ ಇಡೀ ಸಿನಿಮಾ ನೋಡುಗರಿಗೆ ಸಖತ್ ಮಜಾ ಕೊಡುವಂತಿದೆ.

ಎರಡು ದಿನ ಮೊದ್ಲೆ ಮಂಗಳೂರಿನಲ್ಲಿ ಚಿತ್ರದ ಪ್ರೀಮಿಯರ್ ಶೋಗಳು ನಡೆದಿತ್ತು. ನಿನ್ನೆ(ಜುಲೈ 24) ಕೂಡ ಒಂದಷ್ಟು ಕಡೆಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳು ಏರ್ಪಾಡಾಗಿತ್ತು. ಸಿನಿಮಾ ನೋಡಿದವರೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಸಿನಿಮಾ ನೋಡಿ ಎಂದು ಮತ್ತೊಬ್ಬರಿಗೆ ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 'ಸು ಫ್ರಂ ಸೋ' ಚಿತ್ರಕ್ಕೆ ಪ್ರೇಕ್ಷಕರೇ ಭರ್ಜರಿ ಪ್ರಚಾರ ನೀಡುತ್ತಿದ್ದಾರೆ. ಸಣ್ಣ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಣ್ಣ ಸಣ್ಣ ಸ್ಕ್ರೀನ್‌ಗಳು ಸಿಕ್ಕಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ನಿಧಾನವಾಗಿ ಸಿನಿಮಾ ಬಿಡುಗಡೆ ಆಗುತ್ತಿದೆ.
ಕಳೆದ ವಾರದ ತೆರೆಕಂಡ ಕನ್ನಡ 'ಎಕ್ಕ', 'ಜ್ಯೂನಿಯರ್' ಹಾಗೂ ಹಿಂದಿಯ 'ಸಯ್ಯಾರ' ಚಿತ್ರಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ ಎರಡನೇ ವಾರವೂ ಸಿನಿಮಾಗಳು ಸ್ಕ್ರೀನ್‌ಗಳನ್ನು ಉಳಿಸಿಕೊಂಡಿದೆ. ಆದರೆ ಈ ವಾರ 'ಹರಿಹರ ವೀರಮಲ್ಲು' ಸಿನಿಮಾ ಕರ್ನಾಟಕದಲ್ಲಿ ಹೆಚ್ಚು ಶೋಗಳನ್ನು ಪಡೆದುಕೊಂಡಿದೆ. ಪವನ್ ಕಲ್ಯಾಣ್ ನಟನೆಯ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಹಿಂದೆ ಬಿದ್ದಿದೆ. ಹಾಗಾಗಿ ನಿಧಾನವಾಗಿ ಆ ಚಿತ್ರದ ಸ್ಕ್ರೀನ್‌ಗಳು 'ಸು ಫ್ರಂ ಸೋ' ಪಾಲಾಗುವ ಅಂದಾಜಿದೆ.
ಇನ್ನು 'ಸು ಫ್ರಂ ಸೋ' ಕ್ರೇಜ್ ಹೇಗಿದೆ ಎನ್ನುವುದನ್ನು ನೋಡುವುದಾಗಿ ಭಾನುವಾರದ ಶೋಗಳಿಗೆ ಪ್ರೇಕ್ಷಕರು ಇಂದೇ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಶುಕ್ರವಾರದ ಬಹುತೇಕ ಎಲ್ಲಾ ಶೋಗಳು ಹೌಸ್‌ಫುಲ್ ಆಗಿದೆ. ಶನಿವಾರದ ಶೋಗಳು ಫಾಸ್ಟ್ ಫಿಲ್ಲಿಂಗ್ ಆಗುತ್ತಿದೆ. ಸಣ್ಣ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಿರುವುದರಿಂದ ಮೇಲ್ನೋಟಕ್ಕೆ ಹೀಗೆ ಅನ್ನಿಸಬಹುದು. ಆದರೆ ಯಾವುದೇ ಸ್ಟಾರ್ ನಟರಿಲ್ಲದ, ನಿನ್ನೆ ಮೊನ್ನೆವರೆಗೂ ಸದ್ದು ಮಾಡದ ಸಿನಿಮಾ ದಿಢೀರನೆ ಬಾಕ್ಸಾಫೀಸ್ ಶೇಕ್ ಮಾಡ್ತಿದೆ.
'ಸು ಫ್ರಂ ಸೋ' ದರ್ಬಾರ್ ಹೇಗಿದೆ ಅಂದರೆ ಗಂಟೆಗೆ 3 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಬುಕ್‌ಮೈ ಶೋನಲ್ಲಿ ಬುಕ್ ಆಗ್ತಿದೆ. ಈ ಮಟ್ಟಿಗೆ 'ಎಕ್ಕ' ಚಿತ್ರಕ್ಕೆ ಕೂಡ ಟಿಕೆಟ್ ಬುಕ್ ಆಗಿರಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ 'ಸು ಫ್ರಂ ಸೋ' ಸಿನಿಮಾ ಆರ್ಭಟ ಹೆಚ್ಚಾಗುವ ಸಾಧ್ಯತೆ ಇದೆ. ಬಳಿಕ ಶೋಗಳ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ.
ಮುಂದಿನ ವಾರ ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ 'ಕೊತ್ತಲವಾಡಿ' ಸಿನಿಮಾ ಬಿಡುಗಡೆ ಆಗ್ತಿದೆ. ಚಿತ್ರದ ಟ್ರೈಲರ್ ಈಗಾಗಲೇ ಹಿಟ್ ಆಗಿ ಸಿನಿಮಾ ನೋಡಬೇಕು ಎನ್ನುವ ಕುತೂಹಲ ಮೂಡಿಸಿದೆ. ಹೀಗೆ ಕನ್ನಡ ಸಿನಿಮಾಗಳು ಒಂದರ ಹಿಂದೆ ಒಂದು ಸದ್ದು ಮಾಡುತ್ತಿರುವುದು ಸಿನಿರಸಿಕರ ಸಂತಸಕ್ಕೆ ಕಾರಣವಾಗಿದೆ.


Click it and Unblock the Notifications











