'ವೀರಮಲ್ಲು'ಗೆ ಸೆಡ್ಡು ಹೊಡೆದ 'ಸು ಫ್ರಂ ಸೋ'; ರಾಜ್ ಬಿ ಶೆಟ್ಟಿ ಮೇಲೆ ಪ್ರೇಕ್ಷಕರ ಬೇಸರ ಯಾಕೆ?
ಕನ್ನಡ ಚಿತ್ರರಂಗದಲ್ಲೀಗ 'ಸು ಫ್ರಂ ಸೋ' ಕಾರುಬಾರು ನಡೀತಿದೆ. ಹೊಸಬರ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 'ಎಕ್ಕ', 'ಜ್ಯೂನಿಯರ್' ಸಿನಿಮಾಗಳ ಜೊತೆ ಈಗ 'ಸು ಫ್ರಂ ಸೋ' ಕನ್ನಡ ಸಿನಿರಸಿಕರನ್ನು ರಂಜಿಸುತ್ತಿದೆ. ತೆಲುಗಿನ 'ಹರಿಹರ ವೀರಮಲ್ಲು' ಚಿತ್ರಕ್ಕೆ ಸವಾಲು ಹಾಕಿದೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣ ಚಿತ್ರಣವೇ ಬದಲಾಗಲಿದೆ.
ನೋಡ ನೋಡುತ್ತಲೇ 'ಸು ಫ್ರಂ ಸೋ' ಸಿನಿಮಾ ಕ್ರೇಜ್ ಡಬಲ್ ಆಗಿದೆ. ಕರಾವಳಿ ಪ್ರತಿಭೆಗಳು ಸೇರಿ ಮಾಡಿರುವ ಚಿತ್ರಕ್ಕೆ ನಿರ್ಮಾಪಕರಾಗಿ ರಾಜ್ ಬಿ ಶೆಟ್ಟಿ ಬೆಂಬವಾಗಿ ನಿಂತಿದ್ದಾರೆ. ಸಿಂಪಲ್ ಕಥೆಯನ್ನು ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿದೆ. ಚಿಕ್ಕಮಟ್ಟದಲ್ಲಿ ಬಿಡುಗಡೆ ಆಗಿರುವ ಸಿನಿಮಾ ನಿಧಾನವಾಗಿ ಚಿತ್ರಮಂದಿರಗಳನ್ನು ಆವರಿಸಿಕೊಳ್ಳುತ್ತಿದೆ. ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡುವ ಸುಳಿವು ಕೊಟ್ಟಿದೆ.

ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಸಿನಿಮಾ ಕರ್ನಾಟಕದಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಆದರೆ ಚಿತ್ರಕ್ಕೆ ಎಲ್ಲೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಗಾಗಿ ಇನ್ನೆರಡು ದಿನಗಳ ವೀರಮಲ್ಲು ಸಿನಿಮಾ ಆವರಿಸಿಕೊಂಡಿರುವ ಸ್ಕ್ರೀನ್‌ಗಳೆಲ್ಲಾ ಕನ್ನಡದ 'ಸು ಫ್ರಂ ಸೋ' ಪಾಲಾಗಲಿದೆ. ಅಷ್ಟರಮಟ್ಟಿಗೆ ಜೆಬಿ ತುಮ್ಮಿನಾಡು ನಿರ್ದೇಶನದ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಬಹುತೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ 'ಸು ಫ್ರಂ ಸೋ' ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಆಗುತ್ತಿರುವುದು ಸಹಜವಾಗಿಯೇ ಶೋಗಳ ಸಂಖ್ಯೆ, ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚುವಂತೆ ಮಾಡಿದೆ. ನಿಧಾನವಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಕೂಡ ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಎಂಟ್ರಿ ಕೊಡುತ್ತಿದೆ. ಇನ್ನೆರಡು ದಿನಗಳಲ್ಲಿ ಶೋಗಳ ಸಂಸ್ಯೆ ಹೆಚ್ಚಿಸಿಕೊಂಡು ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯಲಿದೆ.
ತೆಲುಗಿನ 'ಹರಿಹರ ವೀರಮಲ್ಲು' ಚಿತ್ರ ಮುಗ್ಗರಿಸಿದೆ. ಮೊದಲ ದಿನ ಒಳ್ಳೆ ಓಪನಿಂಗ್ ಸಿಕ್ಕರೂ 2ನೇ ದಿನಕ್ಕೆ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿದೆ. ಪವನ್ ಕಲ್ಯಾಣ್ ನಟನೆಯ ಐತಿಹಾಸಿಕ ಕಥಾಹಂದರದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಪವರ್ ಸ್ಟಾರ್ ಅಭಿಮಾನಿಗಳು ಒಪ್ಪಿಕೊಂಡರೂ ಸಾಮಾನ್ಯ ಪ್ರೇಕ್ಷಕರು ಟೀಕೆಗಳ ಸುರಿಮಳೆ ಸುರಿಸುತ್ತಿದ್ದಾರೆ. ಬಿ. ಗಂಗಾಧರ್ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಕೊಂಡುಕೊಂಡಿದ್ದಾರೆ. ಸರಿಯಾಗಿ ಬುಕ್ಕಿಂಗ್ ಇಲ್ಲದೇ ಇದ್ದರೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರಕ್ಕೆ ಹೆಚ್ಚು ಶೋ ಕೊಟ್ಟಿದ್ದಾರೆ.

ಕನ್ನಡದ ಸಿನಿಮಾಗಳಿಗೆ ರೆಸ್ಪಾನ್ಸ್ ಚೆನ್ನಾಗಿದೆ. ಅದರಲ್ಲೂ 'ಸು ಫ್ರಂ ಸೋ' ಚಿತ್ರ ಕೊಂಚ ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸದ್ಯ ಗಂಟೆಗೆ ಬುಕ್‌ಮೈ ಶೋನಲ್ಲಿ 5 ಸಾವಿರ ಟಿಕೆಟ್ ಬುಕ್ ಆಗುತ್ತದೆ. ಆದರೆ ಶೋಗಳ ಸಂಖ್ಯೆ ಮಾತ್ರ ಕಮ್ಮಿಯಿದೆ. ಶನಿವಾರಕ್ಕೆ ಟಿಕೆಟ್ ಸಿಗದವರು ಭಾನುವಾರಕ್ಕೆ ಬುಕ್ ಮಾಡುವಂತಾಗಿದೆ. ಇನ್ನು ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಇರುವ ಪ್ರೇಕ್ಷಕರು ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಆದರೆ ಚಿತ್ರದುರ್ಗ, ಹಾಸನ ಸೇರಿದಂತೆ ಸಾಕಷ್ಟು ಜಿಲ್ಲೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಿರ್ಮಾಪಕ ರಾಜ್ ಬಿ ಶೆಟ್ಟಿ ಚಿತ್ರವನ್ನು ರಾಜ್ಯದ ಮೂಲೆ ಮೂಲೆಗೆ ತೆಗೆದುಕೊಂಡು ಹೋಗುವತ್ತ ಗಮನ ಹರಿಸಬೇಕಿದೆ. ಪ್ರೇಕ್ಷಕರು ಸಿನಿಮಾ ನೋಡಲು ಸಿದ್ಧರಿದ್ದು ಶೋ ಸಿಗದೇ ಇದ್ದರೆ ಅದಕ್ಕಿಂತ ವಿಪರ್ಯಾಸದ ಸಂಗತಿ ಮತ್ತೊಂದಿಲ್ಲ. ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿರುವ 'ಹರಿಹರ ವೀರಮಲ್ಲು' ಚಿತ್ರಕ್ಕೆ ರಾಜ್ಯದಲ್ಲಿ ಅಷ್ಟು ಶೋಗಳು ಯಾಕೆ? ಚೆನ್ನಾಗಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿರುವ 'ಸು ಫ್ರಂ ಸೋ' ಚಿತ್ರಕ್ಕೆ ಯಾಕೆ ಚಿತ್ರಮಂದಿರಗಳು ಸಿಗುತ್ತಿಲ್ಲ. ಬೇಡಿಕೆಗೆ ತಕ್ಕಂತ ಪೂರೈಕೆ ಎಲ್ಲಿದೆ? ಫಿಲ್ಮ್ ಚೇಂಬರ್ ಏನು ಮಾಡ್ತಿದೆ? ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











