'ಸು ಫ್ರಂ ಸೋ' ಸಕ್ಸಸ್ ಫ್ಲೂಕ್, ಮಾರ್ಕೆಟಿಂಗ್ ಸ್ಟಂಟ್, ಕಾರ್ಪೋರೇಟ್ ಬುಕ್ಕಿಂಗ್ ಗಿಮಿಕ್ ಅಂತಾರೆ- ರಾಜ್ ಬಿ ಶೆಟ್ಟಿ
ಕನ್ನಡದ 'ಸು ಫ್ರಂ ಸೋ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಹೊಸಬರ ತಂಡ ಸೇರಿಕೊಂಡು ಸಿಂಪಲ್ ಕಥೆ ಸಿನಿಮಾ ಮಾಡಿ ಗೆದ್ದಿತ್ತು. ಜೆಪಿ ತುಮ್ಮಿನಾಡ್ ನಿರ್ದೇಶನದ ಚಿತ್ರದಲ್ಲಿ ರಾಜ್. ಬಿ ಶೆಟ್ಟಿ ಪ್ರಮುಖ ಪಾತ್ರ ನಿಭಾಯಿಸಿದ್ದರು. ನಿರ್ಮಾಪಕರಲ್ಲಿ ಒಬ್ಬರಾಗಿ ಹಣ ಹೂಡಿದ್ದರು.
ಅಂದಾಜು 4 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಸು ಫ್ರಂ ಸೋ' ಸಿನಿಮಾ 120 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಅಲ್ಲರ ನಿರೀಕ್ಷೆ ಮೀರಿ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಇಂತಹ ಪ್ರಯತ್ನಗಳು ಪದೇ ಪದೆ ನಡೆಯಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಾರೆ. ಹೊಸಬರ ಸಿನಿಮಾ ಇಂತಹ ಮ್ಯಾಜಿಕ್ ಮಾಡಿದ್ದು ಹೇಗೆ? ಎಂದು ಕೆಲವರು ಚರ್ಚಿಸಿದ್ದರು.

ಫ್ಲೂಕ್‌ನಲ್ಲಿ ಸಿನಿಮಾ ಹಿಟ್ ಆಗಿಬಿಡ್ತು, ಕಾರ್ಪೊರೇಟ್ ಬುಕ್ಕಿಂಗ್, ಪ್ರಮೋಷನ್ ಗಿಮಿಕ್ ಮಾಡಿ ಸಿನಿಮಾ ಗೆಲ್ಲಿಸಿಬಿಟ್ರು ಎನ್ನುವ ಕಾಮೆಂಟ್ ಕೆಲವರು ಮಾಡಿದ್ರು ಎಂದು ರಾಜ್. ಬಿ ಶೆಟ್ಟಿ ಹೇಳಿದ್ದಾರೆ. ಆದರೆ ಅವರಿಗೆ ಸತ್ಯ ಗೊತ್ತಿಲ್ಲ. ತೆರೆಮರೆಯಲ್ಲಿ ನಮ್ಮ ಇಡೀ ತಂಡ ಎಷ್ಟು ಕೆಲಸ ಮಾಡಿದ್ದೇವೆ ಎನ್ನುವುದು ಗೊತ್ತಿಲ್ಲದೇ ಕೆಲವರು ಮಾತನಾಡುತ್ತಾರೆ ಅಂತಹವರಿಗೆ ಏನು ಹೇಳಲು ಸಾಧ್ಯ ಎಂದಿದ್ದಾರೆ. ಆಲ್‌ರೌಂಡರ್ಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ.
ಕಡಿಮೆ ಬಜೆಟ್‌ನಲ್ಲಿ 'ಸು ಫ್ರಂ ಸೋ' ರೀತಿಯ ಸಿನಿಮಾ ಮಾಡಿ ಎಲ್ಲರೂ ಭಾರೀ ಲಾಭ ಮಾಡಬಹುದು. ಆದರೆ ಎಲ್ಲಾ ಸಿನಿಮಾಗಳನ್ನು ಆ ರೀತಿ ಮಾಡಲು ಸಾಧ್ಯವಿಲ್ಲ. ಅದಕ್ಕೆ ಬಹಳ ನೈಪುಣ್ಯತೆ ಬೇಕು. ಒಂದು ಚಿತ್ರಕ್ಕೆ ಎಲ್ಲರೂ ಶ್ರದ್ಧೆಯಿಂದ ಕೆಲಸ ಮಾಡಿದರೆ ಮಾತ್ರ ಗೆಲುವು ಸಿಗುತ್ತದೆ. ನಾನು ನಟನಾಗಿ ನಟಿಸಿದ್ದು ಬಿಟ್ಟು ಎರಡೂವರೆ ತಿಂಗಳು ಆ ಚಿತ್ರಕ್ಕಾಗಿ ಕೆಲಸ ಮಾಡಿದ್ದೀನಿ. ಅದು ಯಾರಿಗೂ ಗೊತ್ತಾಗಲ್ಲ ಎಂದು ರಾಜ್ ಬಿ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಬೇರೆ ಸಿನಿಮಾಗಳ ಛಾಯಾಗ್ರಹಕ ಪ್ರವೀಣ್ ಶ್ರೀಯಾನ್ 'ಸು ಫ್ರಂ ಸೋ' ಚಿತ್ರಕ್ಕಾಗಿ ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ. ಜೆಪಿ ತುಮ್ಮಿನಾಡು ಆ ಚಿತ್ರಕ್ಕಾಗಿ 6 ವರ್ಷಗಳ ಕಾಲ ಬರವಣಿಗೆ ಕೆಲಸ ಮಾಡಿದ್ದಾರೆ. ಎಲ್ಲರಿಗೂ 'ಸು ಫ್ರಂ ಸೋ' ರೀತಿಯ ಸಿನಿಮಾ ಮಾಡುವ ಆಸೆ ಇರುತ್ತದೆ. ಆದರೆ ಎಲ್ಲರಿಗೂ ಹೀಗೆ ತೆರೆಮರೆಯಲ್ಲಿ ಕೆಲಸ ಮಾಡುವ ತಂತ್ರಜ್ಞರು ಸಿಗಲ್ಲ. ಯಾವುದೇ ಹೆಸರು ಇಲ್ಲದೇ ಕೆಲವರು ಕೆಲಸ ಮಾಡಿದ್ರು. ಅದೇ ರೀತಿ ಎಲ್ಲರೂ ಮಾಡಲ್ಲ. ಅಂತಹ ತಂಡ ಎಲ್ಲಿಂದ ಕರ್ಕೊಂಡ್ ಬರ್ತೀರಾ ಎಂದು ರಾಜ್ ಪ್ರಶ್ನಿಸಿದ್ದಾರೆ.
15 ವರ್ಷಗಳ ಕಾಲ ಜೆಪಿ ತುಮ್ಮಿನಾಡ್ ರಂಗಭೂಮಿಯಲ್ಲಿ ಕೆಲಸ ಮಾಡಿದ್ದರು. ಅದೆಲ್ಲವೂ ಈ ಚಿತ್ರಕ್ಕೆ ಪ್ಲಸ್ ಆಯಿತು. ಆ ನೈಪುಣ್ಯತೆ ಎಲ್ಲ ಹೊಸಬರ ಚಿತ್ರಕ್ಕೆ ಸಾಧ್ಯವಿಲ್ಲ. ಕೆಲವರು 'ಸು ಫ್ರಂ ಸೋ' ಸಕ್ಸಸ್ ಫ್ಲೂಕ್, ಮಾರ್ಕೆಟಿಂಗ್ ಸ್ಟಂಟ್ ಎನ್ನುತ್ತಾರೆ. ಕಾರ್ಪೊರೇಟ್ ಬುಕ್ಕಿಂಗ್ ಮಾಡಿಸಿದ್ವಿ ಎಂದು ಯಾರೋ ಒಬ್ಬರು ಹೇಳಿದ್ರು. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಕಂಟೆಂಟ್ ಚಾರ್ಜ್ 40 ಲಕ್ಷ ಬೇಕಿತ್ತು. ಸಾಲ ಮಾಡಿ ಹಣ ಕಟ್ಟಿದ್ದೀನಿ. ಕಾರ್ಪೊರೇಟ್ ಬುಕ್ಕಿಂಗ್ ಹೇಗೆ ಮಾಡಿಸೋಕೆ ಸಾಧ್ಯ. ಇದೆಲ್ಲ ಗೊತ್ತಿಲ್ಲದೇ ಮಾತನಾಡಿಬಿಡ್ತಾರೆ. ಅಂತಹವರಿಗೆ ಏನು ಹೇಳೊಕೆ ಸಾಧ್ಯವಿಲ್ಲ ಎಂದು ರಾಜ್ ಬಿ ಶೆಟ್ಟಿ ವಿವರಿಸಿದ್ದಾರೆ.
ಸದ್ಯ ರಾಜ್ ಬಿ ಶೆಟ್ಟಿ ನಟನೆಯ 'ರಕ್ಕಸಪುರದೊಳ್' ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಚಿತ್ರದಲ್ಲಿ ವಿಲನ್ ಆಗಿ ರಾಜ್ ಅಬ್ಬರಿಸಿದ್ದಾರೆ.


Click it and Unblock the Notifications











