»   » ಮಾತು ಮುಗಿಸಿದ ಲಂಕೇಶ, ಮಾತಿಗಿಳಿದ ಮದುವೆ...

ಮಾತು ಮುಗಿಸಿದ ಲಂಕೇಶ, ಮಾತಿಗಿಳಿದ ಮದುವೆ...

Posted By: Staff
Subscribe to Filmibeat Kannada

ಲಂಕೇಶ ಮಾತು ಮುಗಿಸಿದ್ದರೆ, ಮದುವೆ ಆಗೋಣ ಬಾ ಎಂದು ಶಿವರಾಜ್‌ಕುಮಾರ್‌ ಮಾತಿಗಿಳಿದಿದ್ದಾರೆ. ಗೊತ್ತಾಯಿತಲ್ಲ. ಸೌಮ್ಯ ಫಿಲಂಸ್‌ ಲಾಂಛನದ ಬಿ.ಸಿ. ಪಾಟೀಲ್‌ ನಿರ್ದೇಶನದ ಚಿತ್ರ ಲಂಕೇಶ ಚಿತ್ರದ ಡಬ್ಬಿಂಗ್‌ ಕಾರ್ಯ ಆಕಾಶ್‌ ಥಿಯೇಟರ್‌ನಲ್ಲಿ ಮುಕ್ತಾಯಗೊಂಡಿದೆ. ಈ ಚಿತ್ರದಲ್ಲಿ ಬಿ.ಸಿ. ಪಾಟೀಲ್‌ರೇ ನಾಯಕರು. ಮಧು ಅವರ ಕತೆ - ಸಂಭಾಷಣೆ, ಆನಂದ್‌ ನಿರ್ದೇಶನದ ಸಹಾಯ ಇರುವ ಚಿತ್ರದಲ್ಲಿ ಭಾವನಾ, ಶೀತಲ್‌ ಬೇಡಿ ನಾಯಕಿಯರು.

ಮದುವೆ: ಈ ಮಧ್ಯೆ ರಾಜ್‌ ಬಿಡುಗಡೆಯ ನಂತರ ಲವಲವಿಕೆಯಿಂದ ಚಿತ್ರೋದ್ಯಮದ ಕಾಯಕದಲ್ಲಿ ತೊಡಗಿರುವ ಶಿವರಾಜ್‌ಕುಮಾರ್‌ ಅವರು, ಡಿ. ರಾಮಾನಾಯ್ದು ನಿರ್ಮಾಣದ ಚಿತ್ರ ಮದುವೆ ಆಗೋಣ ಬಾ ಚಿತ್ರದ ಡಬ್ಬಿಂಗ್‌ನಲ್ಲಿ ತೊಡಗಿದ್ದಾರೆ. ಭಾನುವಾರದಿಂದ ಈ ಚಿತ್ರದ ಬಾಕಿ ಉಳಿದಿರುವ ದೃಶ್ಯಗಳ ಚಿತ್ರೀಕರಣ ಮುಂದುವರಿದಿದೆ. ಚಿತ್ರದ ತಾರಾಬಳಗದಲ್ಲಿ ಲಯ, ಶಿಲ್ಪ, ಸುಮಿತ್ರ, ಶರಣ್‌, ಬ್ರಹ್ಮಾನಂದ್‌, ಕಾಶಿ, ಶಿವರಾಂ, ಮಂಡ್ಯ ರಮೇಶ್‌, ಸಾಧು ಕೋಕಿಲಾ, ರೇಖಾದಾಸ್‌, ಸುಂದರ್‌ ರಾಜ್‌ ಮೊದಲಾದವರಿದ್ದಾರೆ.

ಮಾಫಿಯಾ ಕ್ಲೈಮ್ಯಾಕ್ಸ್‌ : ಮುಸುರಿ ಎಂಟರ್‌ಪ್ರೆೃಸಸ್‌ ಲಾಂಛನದಲ್ಲಿ ದಿವಂಗತ ಮುಸುರಿ ಕೃಷ್ಣಮೂರ್ತಿ ಅವರ ಪುತ್ರರಾದ ಗುರುದತ್‌ ಹಾಗೂ ಜಯಸಿಂಹ ಮುಸುರಿ ಅವರು ಆನಂದ್‌ ಪಿ. ರಾಜು ನಿರ್ದೇಶನದಲ್ಲಿ ನಿರ್ಮಿಸುತ್ತಿರುವ ಮಾಫಿಯಾಗೆ ಮೂರು ಕ್ಯಾಮರಾಗಳನ್ನು ಬಳಸಿ 500 ಸಹಕಲಾವಿದರೊಂದಿಗೆ 50ಕ್ಕೂ ಹೆಚ್ಚು ಸಾಹಸ ಕಲಾವಿದರನ್ನುಳ್ಳ ಸಾಹಸಪ್ರಧಾನ ಕ್ಲೈಮ್ಯಾಕ್ಸ್‌ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗಿದೆ.

ಚಿತ್ರದ ಶೇಕಡಾ 80ರಷ್ಟು ಚಿತ್ರೀಕರಣ ಮುಗಿದಿದೆ. ತಾರಾಗಣದಲ್ಲಿ ಚರಣ್‌ರಾಜ್‌, ವಿನೋದ್‌ ಆಳ್ವಾ, ಶೋಭರಾಜ್‌, ಅಭಿಜಿತ್‌, ಅನುಷಾ, ಶ್ರೀಲಲಿತಾ, ಕಿಶೋರಿ ಬಲ್ಲಾಳ್‌, ನಾಗೇಶ್‌ ಕಶ್ಯಪ್‌, ಟೆನ್ನಿಸ್‌ ಕೃಷ್ಣ ಮೊದಲಾದವರಿದ್ದಾರೆ.

ಗಂಧದ ಗೊಂಬೆ ಮುಕ್ತಾಯ : ಗಂಧದ ಗೊಂಬೆ ಚಿತ್ರಕ್ಕೆ ಕಳೆದ ವಾರದಿಂದಲೂ ಭರದಿಂದ ಚಿತ್ರೀಕರಣ ನಡೆದು ಮುಕ್ತಾಯದ ಹಂತ ಕಂಡಿದೆ. ಆರ್‌.ಎಸ್‌.ಎಸ್‌. ಸಿನಿ ಕ್ರಿಯೇಷನ್ಸ್‌ ಲಾಂಛನದಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಬಿ. ಶಂಕರ್‌, ಎಂ.ಡಿ. ಹಾಷಂ ನಿರ್ದೇಶನ ಇದೆ. ಅಭಿಜಿತ್‌, ರಾಗಸುಧಾ, ಅರವಿಂದ್‌, ಬ್ಯಾಂಕ್‌ ಜನಾರ್ದನ್‌, ಶಿವರಾಂ, ಕರಿಬಸಯ್ಯ, ಉಮೇಶ್‌, ಡಿಂಗ್ರಿ ನಾಗರಾಜ್‌ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಚಂದನದ ಚಿಗುರು : ಸ್ಕೂಲ್‌ ಟೀಚರ್‌ ಆಗಿ ಸುಧಾರಾಣಿ ನಟಿಸಿರುವ, ಅಬ್ದುಲ್‌ ರೆಹಮಾನ್‌ ಪಾಷಾ ಅವರ ನಿರ್ದೇಶನದ ಚಂದನದ ಚಿಗುರು ಚಿತ್ರ ಡಬ್ಬಿಂಗ್‌ ಕಾರ್ಯ ಪೂರ್ಣಗೊಳಿಸಿದೆ. ಪಾಲಕರ, ವಿದ್ಯಾರ್ಥಿಗಳ ಸುತ್ತ ಹೆಣೆದಿರುವ ಕಥಾ ವಸ್ತುವುಳ್ಳ ಈ ಚಿತ್ರದಲ್ಲಿ ಕುಮಾರ್‌ ಗೋವಿಂದು, ಸುಧಾರಾಣಿ, ಬಿ.ವಿ. ರಾಧಾ ಅಭಿನಯಿಸಿದ್ದಾರೆ. ಪುರುಷೋತ್ತಮ್‌ ಸಹ ನಿರ್ದೇಶನ, ದಾಸ್‌ ಛಾಯಾಗ್ರಹಣ ಚಿತ್ರಕ್ಕಿದೆ.

English summary
Kannada film world returns to normal speed

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada