Sudeep- Darshan: "ಬರ್ತ್‌ಡೇ ಪಾರ್ಟಿಗೆ ದರ್ಶನ್ ಬರೋದು ಗೊತ್ತಿತ್ತು.. ಅವ್ರು ದೊಡ್ಡ ಸ್ಟಾರ್": ದಾಸನ ಬಗ್ಗೆ ಕಿಚ್ಚನ ಮಾತು
ನಟ ಕಿಚ್ಚ ಸುದೀಪ್ ಹಾಗೂ ನಟ ದರ್ಶನ್ ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದು ನಂತರ ದೂರಾಗಿದ್ದು ಗೊತ್ತೇಯಿದೆ. 6 ವರ್ಷಗಳ ಹಿಂದೆ ಕೆಲ ಭಿನ್ನಾಭಿಪ್ರಾಯಗಳಿಂದ ನಾನು, ಸುದೀಪ್ ಇನ್ಮುಂದೆ ಸ್ನೇಹಿತರಲ್ಲ ಎಂದು ದರ್ಶನ್ ಟ್ವೀಟ್ ಮಾಡಿದ್ದರು. ಬಳಿಕ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಸಂಸದೆ ಸುಮಲತಾ ಅಂಬರೀಶ್ ಬರ್ತ್‌ಡೇ ಪಾರ್ಟಿಯಲ್ಲಿ ಇಬ್ಬರು ಭಾಗಿ ಆಗಿದ್ದರು.
ಆಗಸ್ಟ್ 26ರಂದು ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿ ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ದರ್ಶನ್- ಸುದೀಪ್ ಇಬ್ಬರೂ ಕಾಣಿಸಿಕೊಂಡಿದ್ದರು. ಆದರೆ ಇಬ್ಬರ ನಡುವೆ ಯಾವುದೇ ಮಾತುಕತೆ ನಡೆಯಲಿಲ್ಲ ಎನ್ನಲಾಗಿತ್ತು. ಇಬ್ಬರೂ ಪಾರ್ಟಿ ಮುಗಿಸಿ ಹೊರಟುಬಿಟ್ಟಿದ್ದರು. ಇದನ್ನು ನೋಡಿ ಅಭಿಮಾನಿಗಳು ಇಬ್ಬರೂ ಒಂದಾಗಬೇಕು ಎಂದು ಬಯಸುತ್ತಿದ್ದಾರೆ. ಸದ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸುದೀಪ್ ಅಭಿಮಾನಿಗಳ ಜೊತೆ ಸಂಭ್ರಮಾಚರಣೆಯಲ್ಲಿ ಭಾಗಿ ಆಗಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ದರ್ಶನ್ ಕುರಿತು ಎದುರಾದ ಪ್ರಶ್ನೆಗೂ ಉತ್ತರಿಸಿದ್ದಾರೆ.

"ಮಾಧ್ಯಮದವರು ಹಾಗೂ ದರ್ಶನ್ ನಡುವಿನ ಸಂಬಂಧ ಸರಿ ಹೋಗಿದ್ದು ನನಗೂ ಖುಷಿ ತಂದಿದೆ. ಏನೇ ಆಗಿದ್ದರೂ, ಏನೇ ನಡೆದಿದ್ದರೂ ದರ್ಶನ್ ದೊಡ್ಡ ನಟ, ದೊಡ್ಡ ಹೆಸರು. ದೊಡ್ಡ ಸ್ಟಾರ್. ಎಲ್ಲವೂ ಸರಿ ಇರಬೇಕು. ಸಿನಿಮಾ ಸೋಲು ಗೆಲುವಿನ ಮೇಲೆ ಮಾತ್ರ ನಿಂತಿರಬೇಕು. ಈ ತರ ನಡೆಯಬಾರದು. ನೀವೆಲ್ಲಾ ಅಂದುಕೊಂಡ ರೀತಿ ನಾವು ಕಿತ್ತಾಡಿಕೊಂಡಿಲ್ಲ. ಕಿತ್ತಾಡಿಕೊಂಡಿದ್ದರೆ ಕೆಲ ಘಟನೆ ನಡೆದಾಗ ನಾನು ಉದ್ದುದ್ದ ಪತ್ರ ಬರೆಯುತ್ತಿರಲಿಲ್ಲ"
"ನನಗೆ ದರ್ಶನ್ ಬಗ್ಗೆ ದ್ವೇಷವೂ ಇಲ್ಲ, ಕೋಪ ಕೂಡ ಇಲ್ಲ. ಯಾವುದೋ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕೂಡಲೇ ಸರಿ ಹೋಗುತ್ತದೆ ಅಂದುಕೊಂಡಿದ್ದೀರಲ್ಲ. ಅದು ಹಾಗಲ್ಲ. ಅವರಲ್ಲೂ ಕೆಲ ಪ್ರಶ್ನೆಗಳಿರುತ್ತವೆ. ನನ್ನಲ್ಲೂ ಕೆಲ ಪ್ರಶ್ನೆಗಳಿರುತ್ತವೆ. ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದಾಗಲೇ ಎಲ್ಲವೂ ಸರಿ ಹೋಗುವುದು. ಅದಕ್ಕೆ ನೀವೆಲ್ಲಾ ಕಾಲಾವಕಾಶ ಕೊಡಬೇಕು."
"ನನಗೆ ಸುಮಲತಾ ಅವರ ಮೇಲೂ ಬಹಳ ಗೌರವ ಇದೆ. ಅವತ್ತು ಪಾರ್ಟಿಯಲ್ಲಿ ಬಹಳ ಕಂಫರ್ಟ್ ಜೋನ್ ಇತ್ತು. ಯಾರು ಮುಖ ತಿರುಗಿಸಿಕೊಂಡು ಹೋಗಲಿಲ್ಲ. ಎಲ್ಲವೂ ಚೆನ್ನಾಗಿಯೇ ಇತ್ತು. ನಾನು ಬಹಳ ದಿನಗಳ ನಂತರ ಪಾರ್ಟಿಗೆ ಹೋಗಿದ್ದು. ಸುಮಲತಾ ಅವರ 60ನೇ ಹುಟ್ಟುಹಬ್ಬ. ನನಗೆ ಬಹಳ ಆಪ್ತರು. ಚಿಕ್ಕಂದಿನಿಂದ ಅವರನ್ನು ನೋಡಿಕೊಂಡು ಬಂದಿದ್ದೇನೆ. ನನಗೆ ಮುಂಚೆಯೇ ಗೊತ್ತಿತ್ತು. ಅಲ್ಲಿ ದರ್ಶನ್ ಇರ್ತಾರೆ ಅಂತ. ನಾವಿಬ್ಬರು ಇಬ್ಬರು ಬೇರೆ ಬೇರೆ ವ್ಯಕ್ತಿಗಳು. ಪರಸ್ಪರ ಗೌರವಿಸುತ್ತೇವೆ. ವೀ ಆಲ್ ಫೈನ್. ಇಟ್ಸ್ ಓಕೆ"
"6 ವರ್ಷಗಳ ನಂತರ ಇಬ್ಬರು ಒಬ್ಬರನ್ನೊಬ್ಬರು ನೋಡಿದ್ದು. ನನಗೂ ಬಹಳ ಖುಷಿ ಆಯಿತು. ಶೇಕ್‌ಹ್ಯಾಂಡ್ ಮಾಡೋದು ದೊಡ್ಡ ವಿಷಯವೇ ಅಲ್ಲ. ಕೆಲ ವಿಚಾರಗಳು ಚಿಟಿಕೆ ಹೊಡೆಯುವಷ್ಟರಲ್ಲಿ ಸರಿ ಹೋಗುತ್ತದೆ. ಕೆಲವೊಂದಕ್ಕೆ ಕಾಲಾವಕಾಶ ಕೊಡಿ. ಮನಸ್ಸುಗಳಲ್ಲಿ ಕೆಲ ಪ್ರಶ್ನೆಗಳಿರುತ್ತವೆ. ಅದು ಯಾವುದೇ ಸಂಬಂಧ ಇರಲಿ. ನಾವಿಬ್ಬರು ಪ್ರಬುದ್ಧರು. ಎಲ್ಲವೂ ಆಗುತ್ತದೆ." ಎಂದು ಸುದೀಪ್ ವಿವರಿಸಿದ್ದಾರೆ.

ಇನ್ನು ರಾತ್ರಿಯಿಂದಲೂ ಸುದೀಪ್ ಹುಟ್ಟುಹಬ್ಬ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ನಿನ್ನೆ(ಸೆಪ್ಟೆಂಬರ್ 1) ರಾತ್ರಿ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸುದೀಪ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಅದ್ಧೂರಿ ವೇದಿಕೆಯಲ್ಲಿ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಸಂಭ್ರಮಾಚರಣೆಗೆ ಸಾಥ್ ನೀಡಿದರು. ಪತ್ನಿ ಪ್ರತಿ ಸ್ಪೆಷಲ್ ಡ್ರೋನ್ ಶೋ ಏರ್ಪಡಿಸಿ ಸರ್‌ಪ್ರೈಸ್ ನೀಡಿದ್ದರು.
ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ46 ಸಿನಿಮಾ ಟೈಟಲ್ ಘೋಷಣೆಯಾಗಿದೆ. 'ಮ್ಯಾಕ್ಸ್' ಹೆಸರಿನಲ್ಲಿ ಸಿನಿಮಾ ಮೂಡಿ ಬರಲಿದೆ. ಇನ್ನು ಆರ್. ಚಂದ್ರು ನಿರ್ದೇಶನದ ಚಿತ್ರಕ್ಕೂ ಕಿಚ್ಚ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಚಿತ್ರವೊಂದನ್ನು ನಿರ್ದೇಶಿಸಿ ನಟಿಸಲಿದ್ದಾರೆ.


Click it and Unblock the Notifications










