"ಸುದೀಪ್ ಸಿನ್ಮಾದಲ್ಲಿ ಫೈಟ್ಸ್ ಮಧ್ಯೆ ಸ್ಟೋರಿ ಹುಡುಕಬೇಕು"; ವಿಡಿಯೋ ವೈರಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಸ್ಟಾರ್ ನಟರು. ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ ಚಿತ್ರರಂಗಕ್ಕೆ ಬಂದ ಇಬ್ಬರೂ ಸ್ಟಾರ್ ನಟರಾಗಿ ಬೆಳೆದು ಬಂದರು. ಇಬ್ಬರಿಗೂ ದೊಡ್ಡ ಅಭಿಮಾನಿ ಬಳಗವಿದೆ.
50ಕ್ಕೂ ಅಧಿಕ ಸಿನಿಮಾಗಳಲ್ಲಿ ದರ್ಶನ್ ನಟಿಸಿದ್ದಾರೆ. ಸುದೀಪ್ ನಟಿಸಿರುವ ಸಿನಿಮಾಗಳ ಸಂಖ್ಯೆ 45 ದಾಟಿದೆ. ಸದ್ಯ ಸುದೀಪ್ 'ಮ್ಯಾಕ್ಸ್' ಆಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಹೀರೊ ಆಗಿ ಮಾತ್ರವಲ್ಲದೇ ನಿರ್ದೇಶಕರಾಗಿ ನಿರ್ಮಾಪಕರಾಗಿಯೂ ಕಿಚ್ಚ ಗೆದ್ದಿದ್ದಾರೆ. ಅದ್ಭುತ ಪಾತ್ರಗಳ ಮೂಲಕ ರಂಜಿಸುತ್ತಾ ಬರುತ್ತಿದ್ದಾರೆ.

ಸದ್ಯ ದರ್ಶನ್ ಹಾಗೂ ಸುದೀಪ್ ಸಿನಿಮಾಗಳ ಬಗ್ಗೆ ಚರ್ಚಿಸುವಂತಹ ತೆಲುಗು ಚಿತ್ರದ ಸಣ್ಣ ತುಣುಕು ವೈರಲ್ ಆಗಿದೆ. ಇಬ್ಬರು ಯುವತಿಯರು ಆಗಷ್ಟೆ ಸಿನಿಮಾ ನೋಡಿ ಆಟೋ ಏರಿ ನಡೆಸುವ ಸಂಭಾಷಣೆಯ ವೀಡಿಯೋ ಅದು. ತೆಲುಗಿನ 'ಬುಟ್ಟಬೊಮ್ಮ' ಚಿತ್ರದಲ್ಲಿರುವ ಸನ್ನಿವೇಶ ಇದು. ಸದ್ಯ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಲಾಗಿದೆ.
'ಬುಟ್ಟಬೊಮ್ಮ' ಸಿನಿಮಾ ಹಾಗೂ ಅದರಲ್ಲಿರುವ ಸಂದೇಶದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಆ ಆಟೋ ಸನ್ನಿವೇಶದ ವೀಡಿಯೋವನ್ನು ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ. ಸುದೀಪ್ ಹಾಗೂ ದರ್ಶನ್ ಅಭಿಮಾನಿ ಯುವತಿರಿಬ್ಬರ ನಡುವಿನ ಸಂಭಾಷಣೆಯ ವಿಡಿಯೋ ಅದು.
ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎನ್ನುವುದನ್ನು ನೋಡುವುದಾದರೆ "ಅಬ್ಬಾ ಎಷ್ಟೊಂದು ಫೈಟ್ಸ್ ಇದ್ದಾವೆ. ಅದಕ್ಕೆ ನಾನು ಸುದೀಪ್ ಸಿನಿಮಾಗೆ ಬರಲ್ಲ, ಅಯ್ಯೋ ನಿಮ್ ದರ್ಶನ್ ಸಿನ್ಮಾದಲ್ಲಿ ಫೈಟಿಂಗೆ ಇರಲ್ವೇನೊ. ಇರತ್ತೆ, ಆದರೆ ಅವರ ಸಿನಿಮಾದಲ್ಲಿ ಸ್ಟೋರಿ ಮಧ್ಯೆ ಫೈಟ್ಸ್ ಇರುತ್ತೆ. ನಿಮ್ ಹೀರೊ ಸಿನಿಮಾದಲ್ಲೇ ಫೈಟ್ಸ್ ಮಧ್ಯೆ ಸ್ಟೋರಿ ಹುಡುಕಬೇಕು" ಎನ್ನುವ ಡೈಲಾಗ್ ಇದೆ.
ಇದೇ ವಿಡಿಯೋ ತೋರಿಸಿ ಕೆಲವು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಇದು ಸಿನಿಮಾವೊಂದರಲ್ಲಿ ಅಭಿಮಾನಿಗಳಿಬ್ಬರ ನಡುವಿನ ಸಂಭಾಷಣೆ ಅಷ್ಟೆ. ಇದನ್ನು ನೋಡಿ ಟ್ರೋಲ್ ಮಾಡುವಂತಹದ್ದು ಏನಿದೆ? ಎಂದು ಕೆಲವರು ಕಾಮೆಂಟ್ಸ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಆ ವೀಡಿಯೋದಲ್ಲಿ ಡೈಲಾಗ್ ಅಲ್ಲಿಗೆ ಮುಗಿಯಲ್ಲ. "ಏಯ್ ಹೋಗೆ ನನ್ನ ಹೀರೊ ಡ್ಯಾನ್ಸ್ ನೋಡಿ ಹೊಟ್ಟೆಹುರಿ ನಿನಗೆ" ಎಂದು ಸುದೀಪ್ ಅಭಿಮಾನಿ ಹೇಳುವ ಡೈಲಾಗ್ ಕೂಡ ಇದೆ.
ತೆಲುಗು ಚಿತ್ರವೊಂದರ ಕನ್ನಡ ಡಬ್ ವರ್ಷನ್‌ಗೆ ಬರೆದ ಡೈಲಾಗ್ ಇದು ಅಷ್ಟೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಸುದೀಪ್ ಅಭಿಮಾನಿಗಳು ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಇಬ್ಬರು ನಟರ ಅಭಿಮಾನಿಗಳು ಚರ್ಚೆ ನಡೆಸುವಾಗ ತಮ್ಮ ನಟ ಗ್ರೇಟ್ ಎಂದು ಹೇಳುವ ಭರದಲ್ಲಿ ಮತ್ತೊಬ್ಬ ನಟರ ಸಿನಿಮಾಗಳ ಬಗ್ಗೆ ಹೀಗೆ ಮಾತನಾಡುವುದು ಸಹಜ. ಅದನ್ನೇ ಈ ಚಿತ್ರದಲ್ಲೂ ತೋರಿಸಿದ್ದಾರೆ ಬಿಡಿ ಎನ್ನುತ್ತಾರೆ. ಒಟ್ಟಾರೆ ಈ ವೀಡಿಯೋ ಮಾತ್ರ ಸಖತ್ ವೈರಲ್ ಆಗುತ್ತಿದೆ. ಸುದೀಪ್ ಇತ್ತೀಚೆಗೆ 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಚಿತ್ರಕ್ಕೆ ಸುದೀಪ್ ಕೂಡ ಬಂಡವಾಳ ಹೂಡಿದ್ದಾರೆ. ವಂಶಿ ಕೃಷ್ಣ, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ, ಕಾಮರಾಜ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ಬಾರಿ ಲೋಕಸಭೆ ಚುನಾವಣೆ ಪ್ರಚಾರದಿಂದ ಸುದೀಪ್ ದೂರವೇ ಉಳಿದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.
'ವಿಕ್ರಾಂತ್ ರೋಣ' ಬಳಿಕ ಸುದೀಪ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಒಂದು ವರ್ಷಗಳ ಬಿಡುವಿನ ಬಳಿಕ 'ಮ್ಯಾಕ್ಸ್' ಸಿನಿಮಾ ಶುರು ಮಾಡಿದ್ದರು. ಇದೀಗ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಮಹಾಬಲಿಪುರಂನಲ್ಲಿ ಸೆಟ್ ಹಾಕಿ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.


Click it and Unblock the Notifications











