ಸಲ್ಮಾನ್ ಖಾನ್ ಜೊತೆ ಸುದೀಪ್, ಪ್ರೇಮ್: ರಕ್ಷಿತಾ ಹೇಳಿದ್ದೇನು?
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ 'ದಬಂಗ್-3 'ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಈಗಾಗಲೆ ಸುದೀಪ್ ಮುಂಬೈಗೆ ತೆರಳಿದ್ದು 'ದಬಂಗ್-3' ಸೆಟ್ ಸೇರಿಕೊಂಡಿದ್ದಾರೆ. ವಿಶೇಷ ಅಂದ್ರೆ ಕಿಚ್ಚ ಒಬ್ಬರೆ ಮುಂಬೈಗೆ ತೆರಳಿಲ್ಲ. ಸ್ನೇಹಿತರನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾರೆ.
ಮೇ 4 ರಿಂದ ಸುದೀಪ್ ಭಾಗದ ಚಿತ್ರೀಕರಣ ಪ್ರಾರಂಭವಾಗಿದೆ. ಈಗಾಗಲೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್ ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಬಾಲಿವುಡ್ ಸುಲ್ತಾನ್ ಮತ್ತು ಸ್ಯಾಂಡಲ್ ವುಡ್ ಪೈಲ್ವಾನ್ ಇಬ್ಬರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಫೋಟೋ ನೋಡಿಯೆ ಸಖತ್ ಖುಷಿ ಪಡುತ್ತಿರುವ ಅಭಿಮಾನಿಗಳು, ಸಿನಿಮಾದಲ್ಲಿ ಸಲ್ಮಾನ್ ವಿರುದ್ಧ ಕಿಚ್ಚನ ಖಾದಾಟ ನೋಡಲು ಕಾತುರರಾಗಿದ್ದಾರೆ.
ಇನ್ನು ವಿಶೇಷ ಅಂದ್ರೆ ಅಭಿನಯ ಚಕ್ರವರ್ತಿ 'ದಬಂಗ್' ಸೆಟ್ ಗೆ ಜೋಗಿ ಪ್ರೇಮ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಸಲ್ಮಾನ್ ಖಾನ್ ಜೊತೆ ಪ್ರೇಮ್ ಸಹ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. "ಸಲ್ಮಾನ್ ಖಾನ್ ಭೇಟಿಯಾಗಿರುವುದು ಉತ್ತಮ ಅನುಭವ. ಸಲ್ಮಾನ್ ಖಾನ್ ಕೆಲಸದ ಶೈಲಿ ಇಷ್ಟವಾಗಿದೆ. ಕೆಸಲದ ಬಗ್ಗೆ ಅವರಿಗೆ ಇರುವ ಆಸಕ್ತಿ ತುಂಬಾ ಇಷ್ಟವಾಗಿದೆ" ಎಂದು ಸಲ್ಮಾನ್ ಖಾನ್ ಭೇಟಿಯಾದ ಸಂತಸವನ್ನು ಹಂಚಿಕೊಂಡಿದ್ದಾರೆ.

ಇನ್ನು ಸುದೀಪ್ ಮತ್ತು ಪ್ರೇಮ್ ಜೊತೆಗೆ ವಿತರಕ ಜಾಕ್ ಮಂಜು ಕೂಡ ತೆರಳಿದ್ದಾರೆ. ಎಲ್ಲರು ಒಟ್ಟಿಗೆ ಸಲ್ಮಾನ್ ಖಾನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ನೋಡಿ ನಟಿ ರಕ್ಷಿತಾ ಅವರ ಕಾಲೆಳೆದಿದ್ದಾರೆ. "ನಾನು ಸಲ್ಮಾನ್ ಖಾನ್ ಅವರ ದೊಡ್ಡ ಅಭಿಮಾನಿ. ನಾನು ಇಲ್ಲದೆ ಆ ಫೋಟೋ ಅಪೂರ್ಣ" ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ ಅಭಿಮಾನಿಯಾಗಿರುವ ರಕ್ಷಿತಾ ಅವರನ್ನು ಸುದೀಪ್ ಕರೆದಿಲ್ಲ ಎಂದು ಬೇಜಾರು ಮಾಡಿಕೊಂಡಿದ್ದರು. ಪ್ರೇಮ್ ನ ಮಾತ್ರ ಕೆರೆದುಕೊಂಡು ಹೋಗಿರುವುದರಿಂದ ಮುನಿಸಿಕೊಂಡಿದ್ದರು ಕ್ರೇಜಿ ಕ್ವೀನ್. ಈಗ ಫೋಟೋ ನೋಡಿ ಮತ್ತಷ್ಟು ಕಾಲೆಳೆಯುತ್ತಿದ್ದಾರೆ ರಕ್ಷಿತಾ.
ಮೊದಲ ಬಾರಿಗೆ ಸುದೀಪ್ ಸಲ್ಮಾನ್ ಖಾನ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಸಿಕಂದರ್ ಭಾರದ್ವಾಜ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. 'ದಬಂಗ್-3' ಚಿತ್ರಕ್ಕಾಗಿ ಸುಮಾರು 80 ದಿನಗಳ ಕಾಲ್ ಶೀಟ್ ನೀಡಿದ್ದಾರಂತೆ ಸುದೀಪ್. 'ದಬಂಗ್-3'ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದೆ. ಸುದೀಪ್ ಭಾಗದ ಶೂಟಿಂಗ್ ಸದ್ಯ ಪ್ರಾರಂಭವಾಗಿದೆ.


Click it and Unblock the Notifications











