'ಮದಕರಿ' ಚಿತ್ರಕ್ಕಾಗಿ ಸುದೀಪ್ ಮತ್ತು ರಾಕ್ ಲೈನ್ ನಡುವೆ ಆಯ್ತು ಒಪ್ಪಂದ.!
Recommended Video

ಸ್ಯಾಂಡಲ್ ವುಡ್ ನಲ್ಲಿ ಸದ್ಯ 'ಮದಕರಿ ನಾಯಕ'ನ ಬಯೋಪಿಕ್ ಚಿತ್ರದ್ದೇ ಸದ್ದು ಗದ್ದಲ. ಸುದೀಪ್ ಮತ್ತು ದರ್ಶನ್ ಇಬ್ಬರು ಒಂದೇ ಕಥೆಯನ್ನ ಮಾಡಲು ಹೊರಟಿದ್ದಾರೆ. ಇದರಿಂದ ಕನ್ನಡದಲ್ಲಿ ಸ್ಟಾರ್ ವಾರ್ ಆರಂಭವಾಗುತ್ತೆ. ಇಬ್ಬರು ಸ್ಟಾರ್ ಅಭಿಮಾನಿಗಳು ಕಿತ್ತಾಡ್ತಾರೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.
ಆದ್ರೆ, ಈ ರೀತಿ ಯಾವುದು ಆಗಬಾರದು ಎಂದು ಸುದೀಪ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಚಿಂತಿಸಿದ್ದಾರೆ. ಸುದೀಪ್ ಮಾಡಲಿರುವ ಚಿತ್ರಕ್ಕೆ ಪ್ರಿಯಾ ಸುದೀಪ್ ಬಂಡವಾಳ ಹಾಕಲಿದ್ದಾರೆ. ದರ್ಶನ್ ನಾಯಕನಾಗಿ ಅಭಿನಯಿಸುವ ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ನಿರ್ಮಾಪಕರಾಗಿದ್ದಾರೆ.
ಯಾವುದೇ ಕಾರಣಕ್ಕೂ ಒಂದೇ ಕಥೆ ಮಾಡಬಾರದು ಮತ್ತು ಎರಡು ಸಿನಿಮಾಗಳು ಬರಲಿ ಎಂಬ ಉದ್ದೇಶದಿಂದ ರಾಕ್ ಲೈನ್ ಮತ್ತು ಸುದೀಪ್ ಒಂದು ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಒಪ್ಪಂದ ಎನ್ನುವುದಕ್ಕಿಂತ ರಾಕ್ ಲೈನ್ ಮತ್ತು ಸುದೀಪ್ ನಡುವೆ ಒಳ್ಳೆ ಬಾಂಧವ್ಯವಿರುವುದು ಈ ಹೊಂದಾಣಿಕೆ ಮಾಡಿಕೊಳ್ಳಲು ಕಾರಣವಾಗಿದೆ. ಅಷ್ಟಕ್ಕೂ, ಏನದು ಹೊಂದಾಣಿಕೆ.? ಮುಂದೆ ಓದಿ.....

ನಮ್ಮ ಮಧ್ಯ ಹೊಂದಾಣಿಕೆ ಇದೆ
ಸಾಮಾನ್ಯವಾಗಿ ಒಬ್ಬರ ಕಥೆಯನ್ನ ಇನ್ನೊಬ್ಬರು ಬಿಟ್ಟುಕೊಡುವುದಿಲ್ಲ. ಆದ್ರೆ, ಮದಕರಿ ನಾಯಕನ ಕುರಿತು ಮಾಡಲಾಗುತ್ತಿರುವ ಚಿತ್ರದಲ್ಲಿ ಪರಸ್ಪರ ಎರಡು ಕಥೆಗಳ ಬಗ್ಗೆ ಸುದೀಪ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಚರ್ಚೆ ಮಾಡಲಿದ್ದಾರೆ. ಸುದೀಪ್ ಕಥೆಯನ್ನ ರಾಕ್ ಲೈನ್, ರಾಕ್ ಲೈನ್ ಕಥೆಯನ್ನ ಸುದೀಪ್ ಅವರು ಪ್ರಸ್ತಾಪಿಸಲಿದ್ದಾರೆ. ಯಾಕಂದ್ರೆ, ಯಾವುದೇ ಕಾರಣಕ್ಕೂ ಕಥೆ ಒಂದೇ ಆಗಬಾರದು ಎಂಬ ಕಾರಣ.

ದರ್ಶನ್ ಮಾಡೋದು ಕೊನೆಯ ನಾಯಕನ ಕಥೆ
ಚಿತ್ರದುರ್ಗದ ಪಾಳೇಗಾರರಲ್ಲಿ ಸುಮಾರು 13 ನಾಯಕರು ಬರ್ತಾರೆ. ಇದರಲ್ಲಿ ಕೊನೆಯ ನಾಯಕನ ಬಗ್ಗೆ ದರ್ಶನ್ ಮತ್ತು ರಾಕ್ ಲೈನ್ ಜೋಡಿ ಮಾಡುತ್ತಿದ್ದಾರೆ ಎಂದು ಸ್ವತಃ ನಿರ್ಮಾಪಕರೇ ಬಹಿರಂಗಪಡಿಸಿದ್ದಾರೆ. ಹದಿಮೂರು ನಾಯಕರ ಪೈಕಿ ಐದು ಜನ ಮದಕರಿ ನಾಯಕ ಎಂಬ ಹೆಸರಿನಲ್ಲೇ ಬರ್ತಾರೆ. ಇವರಲ್ಲಿ ಸುದೀಪ್ ಅವರು ಯಾರ ಬಗ್ಗೆ ಸಿನಿಮಾ ಮಾಡ್ತಾರೋ ಕುತೂಹಲ ಮೂಡಿಸಿದೆ.

ಸುದೀಪ್ ಸಿನಿಮಾವನ್ನ ಸ್ವಾಗತಿಸುತ್ತೇವೆ
ಇನ್ನು ಸುದೀಪ್ ಅವರು ಮದಕರಿ ನಾಯಕನ ಕುರಿತು ಸಿನಿಮಾ ಮಾಡುವುದನ್ನ ನಿರ್ಮಾಪಕ ರಾಕ್ ಲೈನ್ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ ಸುದೀಪ್ ಅವರ ಚಿತ್ರಕ್ಕೆ ಸಂಪೂರ್ಣ ಬೆಂಬಲ ಕೊಡುವುದಾಗಿ ತಿಳಿಸಿದ್ದಾರೆ. ಸುದೀಪ್ ಅಭಿಮಾನಿಗಳು ಇಷ್ಟ ಪಡ್ತಿದ್ದಾರೆ ಅಂದ್ಮೇಲೆ ಖಂಡಿತಾ ಆ ಸಿನಿಮಾ ಆಗ್ಬೇಕು. ಅದು ಒಪ್ಪುವ ಮಾತು. ನಮ್ಮ ಚಿತ್ರ ಅವರಿಗೆ ಅಡ್ಡಿಯಾಗಲ್ಲ ಎಂದಿದ್ದಾರೆ.

ಮೂರ್ನಾಲ್ಕು ವರ್ಷದಿಂದ ತಯಾರಿ
ಮೂರ್ನಾಲ್ಕು ವರ್ಷದಿಂದ ನಾನು ಮದಕರಿ ನಾಯಕನ ಸಿನಿಮಾ ಮಾಡ್ಬೇಕು ಎಂದು ಸಂಶೋಧನೆ ಮಾಡಿದ್ದೀನಿ. ಈ ಸಿನಿಮಾ ಕುರಿತು ಅಧ್ಯಯನ ಮಾಡಿದ್ದೇನೆ. ಚಿತ್ರದುರ್ಗದ ಇತಿಹಾಸದಲ್ಲಿ ಸುಮಾರು 13 ಜನ ಪಾಳೇಗಾರರು ಬರ್ತಾರೆ. ಯಾರು ಯಾವ ರೀತಿಯಲ್ಲಿ ಹೋರಾಟ ಮಾಡಿದ್ದಾರೆ ಎಂಬುದನ್ನ ತಿಳಿದುಕೊಂಡಿದ್ದೇವೆ. ಚಿತ್ರದುರ್ಗದ ಇತಿಹಾಸವನ್ನ ಸುಮ್ಮನೆ ತೋರಿಸೋಕೆ ಆಗಲ್ಲ. ಸಾಹಿತಿ ಬಿ ಎಲ್ ವೇಣು ಅವರ ಜೊತೆ ಸಮಾಲೋಚನೆ ಮಾಡಿದ್ದೀವಿ. ಎಸ್ ವಿ ರಾಜೇಂದ್ರ ಸಿಂಗ್ ಬಾಬು, ನಾನು, ವೇಣು ಈ ಚಿತ್ರಕ್ಕಾಗಿ ಸಾಕಷ್ಟು ಚರ್ಚೆ ಮಾಡಿದ್ದೇವೆ ಎಂದು ರಾಕ್ ಲೈನ್ ಹೇಳುತ್ತಾರೆ.

ಸುದೀಪ್ ಕೂಡ ಸ್ಪಷ್ಟಪಡಿಸಿದ್ದಾರೆ
ಇನ್ನು ರಾಕ್ ಲೈನ್ ವೆಂಕಟೇಶ್ ಹಾಗೂ ದರ್ಶನ್ ಜೋಡಿಯಲ್ಲಿ ಬರಲಿರುವ ಚಿತ್ರಕ್ಕೆ ನಮ್ಮ ಸಿನಿಮಾ ಅಡ್ಡಿಯಿಲ್ಲ. ಅವರು ಸಿನಿಮಾನೂ ಮಾಡಲಿ, ನಾವು ಮಾಡುತ್ತೇವೆ. ಎರಡು ಚಿತ್ರಗಳು ಬರಲಿ ಎಂದು ಸ್ವತಃ ಸುದೀಪ್ ಅವರೇ ಸ್ಪಷ್ಟಪಡಿಸಿದ್ದಾರೆ. ಸುಮಾರು ನೂರು ಕೋಟಿ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದ್ದು, ಪ್ರಿಯಾ ಸುದೀಪ್ ಅವರು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ.


Click it and Unblock the Notifications











