ನಿರ್ಮಾಪಕರ ಆರೋಪದ ಹಿಂದೆ ಸೂರಪ್ಪ ಬಾಬು ಷಡ್ಯಂತ್ರ? ಸುದೀಪ್ ಹೇಳಿದ್ದೇನು?
ಕನ್ನಡ ಚಿತ್ರರಂಗದ ಮೂವರು ನಿರ್ಮಾಪಕರು ಇತ್ತೀಚೆಗೆ ನಟ ಸುದೀಪ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. ಈ ಸಂಬಂಧ ನಟ ಸುದೀಪ್ ಇಂದು (ಜುಲೈ 15) ಆ ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸ್ವತ: ಸುದೀಪ್ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆಗಮಿಸಿ ನಿರ್ಮಾಪಕರಾದ ಎನ್ಎಂ ಕುಮಾರ್, ಎಂಎನ್ ಸುರೇಶ್ ಹಾಗೂ ರಹಮಾನ್ ವಿರುದ್ಧ ದೂರು ನೀಡಿದ್ದಾರೆ.
ಮೊದಲಿಗೆ ನಿರ್ಮಾಪಕ ಎಂ. ಎನ್ ಸುರೇಶ್ "ನಟ ಸುದೀಪ್ ನನ್ನಿಂದ ಅಡ್ವಾನ್ಸ್ ಪಡೆದು ಸಿನಿಮಾ ಮಾಡುವುದಾಗಿ ಹೇಳಿದ್ದರು. ವರ್ಷಗಳೇ ಕಳೆದರೂ ಕಾಲ್‌ಶೀಟ್ ಕೊಡುತ್ತಿಲ್ಲ. ಹಣ ಕೂಡ ವಾಪಸ್ ಕೊಡುತ್ತಿಲ್ಲ. ಈಗ ನೋಡಿದರೆ ತಮಿಳು ನಿರ್ಮಾಪಕನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಕೇಳಿದ್ದರು. ಈ ಸಂಬಂಧ ನಿರ್ಮಾಪಕರ ಸಂಘದವರ ಉಪಸ್ಥಿತಿಯಲ್ಲಿ ಫಿಲ್ಮ್ ಚೇಂಬರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು.

ಎಂ. ಎನ್ ಕುಮಾರ್ ಆರೋಪದ ಬೆನ್ನಲ್ಲೇ ಸುದೀಪ್ ನಟನೆಯ 'ಹುಚ್ಚ' ಸಿನಿಮಾ ನಿರ್ಮಿಸಿದ ನಿರ್ಮಾಪಕ ರೆಹಮಾನ್ ಕೂಡ ಸುದೀಪ್ ವಿರುದ್ಧ ಆರೋಪ ಮಾಡಿದ್ದರು. ನಿಮ್ಮನ್ನು ನಂಬಿ ನನಾನು 35 ಲಕ್ಷ ಖರ್ಚು ಮಾಡಿದ್ದೇನೆ. ಅದನ್ನು ವಾಪಸ್ ಕೊಡಿ ಎಂದು ಸುದ್ದಿಗೋಷ್ಠಿ ನಡೆಸಿ ಮನವಿ ಮಾಡಿದ್ದರು. ಇನ್ನು ನಿರ್ಮಾಪಕರ ಈ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರವನ್ನು ಸುದೀಪ್ ಕೇಳಿದ್ದರು. ಇಲ್ಲದೇ ಬಹಿರಂಗ ಕ್ಷಮೆ ಕೇಳಿ ಎಂದು ನೋಟಿಸ್ ಕಳುಹಿಸಿದ್ದರು. ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.
ಸುದೀಪ್ ಪಿಟಿಷನ್ ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿದೆ. ಪಿಟಿಷನ್ ದಾಖಲಿಸಿದ ಬಳಿಕ ನಟ ಸುದೀಪ್ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. "ಫಿಲ್ಮ್ ಚೇಂಬರ್, ನಿರ್ಮಾಪಕರ ಸಂಘ ಮಾತೃಸಂಸ್ಥೆ. ನಿರ್ಮಾಪಕರು ನಮಗೆ ಬೇಕಾದವರೇ. ನಾನು ಪಿಟಿಷನ್‌ನಲ್ಲಿ ಹೇಳಿದ್ದೇನೆ. ನನ್ನ ತಪ್ಪು ಇದ್ದರೆ ನಾನು ಸರಿಪಡಿಸಿಕೊಳ್ಳುತ್ತೇನೆ ಎಂದು. ಇಲ್ಲದಿದ್ದರೆ ಒಪ್ಪಿಕೊಳ್ಳೋಕೆ ನಾನು ಸಿದ್ಧ ಇಲ್ಲ. ಲೀಗಲ್ ಆಗಲಿ ಹೋಗೋಣ ಅಂತ ಕೋರ್ಟ್‌ಗೆ ಬಂದೆ. ಇದು ಬಿಟ್ಟು ನಾನು ಜಾಸ್ತಿ ಹೇಳೋಕೆ ಸಾಧ್ಯವಿಲ್ಲ."
ಇನ್ನು ಈ ಷಡ್ಯಂತ್ರದ ಹಿಂದೆ ಸೂರಪ್ಪ ಬಾಬು ಇದ್ದಾರೆ ಎನ್ನು ಮಾತಿದೆ ನೀವೇನಂತೀರಾ ಎನ್ನುವ ಪ್ರಶ್ನೆಗೆ "ಯಾರೇ ಏನೇ ಆರೋಪ ಮಾಡಿದ್ರು ಕೋರ್ಟ್‌ನಿಂದಲೇ ಸರಿಯಾದ ಉತ್ತರ ಸಿಗುತ್ತದೆ. ಒಂದು ವಿಚಾರ ಹೇಳೋಕೆ ಇಷ್ಟಪಡ್ತೀನಿ.. ದೇವ್ರು ಒಳ್ಳೆದ್ ಮಾಡಲಿ. ಒಂದಂತು ಸತ್ಯ. ಸುಳ್ಳಾಗಲಿ ಸತ್ಯ ಆಗಲಿ ಬಹಿರಂಗವಾಗಿ ಹೊರಗೆ ಬರಲೇ ಬೇಕು. ನಾನು ಸರಿಯಾದ ಮಾರ್ಗದಲ್ಲೇ ಹೋಗ್ತಿದ್ದೀನಿ ಅಂತಾ ನಾನು ಅಂದ್ಕೊಂಡಿದೀನಿ. ಕೋರ್ಟ್‌ಗೆ ಹೋದ್ರೆ ಎಲ್ಲಾ ಸರಿ ಹೋಗುತ್ತೆ."
ನಿರ್ಮಾಪಕರು ಕಷ್ಟದಲ್ಲಿ ಇದ್ದಾರೆ, ಅನ್ನಿಸುತ್ತದೆ. ಹಾಗಾಗಿ ನೀವು ಏನಾದರೂ ಸಹಾಯ ಮಾಡುತ್ತೀರಾ ಎನ್ನುವ ಪ್ರಶ್ನೆಗೆ "ನಾನು ಕಲಾವಿದ ಆದ್ಮೇಲೆ ಎಲ್ಲರಿಗೂ ಸಹಾಯ ಮಾಡ್ತೀನಿ ಅಂತ ಚಾರಿಟಬಲ್ ಟ್ರಸ್ಟ್ ಓಪನ್ ಮಾಡಿಲ್ಲ. ಮಾಧ್ಯಮವನ್ನ ಸರಿಯಾಗಿ ಬಳಸಿಕೊಳ್ಳಬೇಕು. ಅದು ಬಿಟ್ಟು ಬಾಯಿ ಇದೆ ಅಂತ ಮನಸ್ಸಿಗೆ ಬಂದಂತೆ ಮಾತನಾಡಬಾರದು. ನಾನು ಸರಿಯಾಗಿಯೇ ನಡ್ಕೊಂಡ್ ಬಂದಿದ್ದೀನಿ"
"ಎಲ್ಲಾ ಆರೋಪಗಳಿಗೂ ನನ್ನ ಬಳಿ ಉತ್ತರ ಇಲ್ಲ. ಎಲ್ಲಿ ಇತ್ಯರ್ಥ ಆಗ್ಬೇಕು ಅಲ್ಲಿ ಇತ್ಯರ್ಥ ಆಗುತ್ತೆ. ಅದ್ಕೆ ನಾನು ಈಗ ಕೋರ್ಟ್‌ಗೆ ಬಂದಿದ್ದೇನೆ. ಇದಕ್ಕಿಂತ ಒಳ್ಳೆ ಜಾಗ ಇಲ್ಲ, ಅದಕ್ಕೆ ಬಂದೆ" ಎಂದಿದ್ದಾರೆ. ಜಾಕ್ ಮಂಜು ಯಾಕೆ ಬಂದು ಮಾತನಾಡಿದರೂ ನಿಮ್ಮ ಪರ ಎನ್ನುವ ಪ್ರಶ್ನೆಗೆ " ಜಾಕ್ ಮಂಜು ಏನ್ ಉತ್ತರ ಕೊಡಬೇಕಿತ್ತು ಕೊಟ್ಟಿದಾರೆ. ನಾನೇ ಬಂದು ಪತ್ರಿಕಾಗೋಷ್ಠಿ ಮಾಡಿದ್ದರೆ ಅವರಿಗೂ ನನಗೂ ಏನು ವ್ಯತ್ಯಾಸ ಇರುತ್ತೆ.
"ಯಾರಿಗೂ ಇಂತಹ ಸನ್ನಿವೇಶ ಕೆಟ್ಟ ಉದಾಹರಣೆ ಆಗಬಾರದು. ನಾನು ಬೆಂಡಾಗಿ ಕೂಡ ಇನ್ನೊಬ್ರಿಗೆ ಕೆಟ್ಟ ಉದಾಹರಣೆ ಆಗ್ಬಾರ್ದು.. ನಾನು ಸಂಪಾದನೆ ಮಾಡಿರೋ ಹೆಸರಾಗಲಿ, ಸ್ಟಾರ್ ಗಿರಿ ಆಗಲಿ ಯಾರಿಂದಲೂ ಅಳಿಸೋಕೆ ಆಗಲ್ಲ. ಹಂಗೇನಾದ್ರು ಆಗುತ್ತೆ ಅಂದ್ರೆ ನಾನು ಏನೂ ಮಾಡಿಲ್ಲ ಅಂತಾ ಅರ್ಥ" ಎಂದು ಸುದೀಪ್ ಹೇಳಿದ್ದಾರೆ.


Click it and Unblock the Notifications










