ಬೀದಿ ನಾಯಿಗಳ ಕುರಿತ ಸುಪ್ರೀಂ ಕೋರ್ಟ್ ಆದೇಶ; ಸುದೀಪ್ ಪ್ರತಿಕ್ರಿಯೆ ಬಗ್ಗೆ ಪರ ವಿರೋಧ ಚರ್ಚೆ
ರಾಷ್ಟ್ರ ರಾಜಧಾನಿಯಲ್ಲಿ ನಾಯಿ ಕಡಿತ ಮತ್ತು ರೇಬೀಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ವಸತಿ ಪ್ರದೇಶಗಳಲ್ಲಿ ಇರುವ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ(ಆಗಸ್ಟ್ 11) ಆದೇಶ ನೀಡಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ.
ಕನ್ನಡ ಸಿನಿಮಾ ತಾರೆಯರು ಕೂಡ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ನಟ ಸುದೀಪ್, ನಟಿಯರಾದ ರಮ್ಯಾ, ಮೇಘಾ ಶೆಟ್ಟಿ ಸೇರಿದಂತೆ ಹಲವರು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಬಗ್ಗೆ ನಟ ಸುದೀಪ್ ಕೂಡ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ. ಬೀದಿ ನಾಯಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಿದ್ದಾರೆ.

"ದೆಹಲಿ NCRನಲ್ಲಿ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್ ನಿರ್ಧಾರವನ್ನು ನಾನು ಪ್ರಶ್ನಿಸಲು ಬಯಸುವುದಿಲ್ಲ. ಏಕೆಂದರೆ ಈ ನಿರ್ಧಾರಕ್ಕೆ ಅದರದ್ದೇ ಆದ ಕಾರಣಗಳಿರಬಹುದು. ಆದರೆ ಇದು ನಾಯಿಗಳ ಯೋಗಕ್ಷೇಮ ಮತ್ತು ಅವುಗಳ ಜೀವನದ ಮೇಲೆ ಬೀರುವ ಪರಿಣಾಮದ ಬಗ್ಗೆ ಗಂಭೀರ ಕಳವಳ ಹುಟ್ಟುಹಾಕುತ್ತದೆ" ಎಂದು ನಟ ಸುದೀಪ್ ಅಭಿಪ್ರಾಯ ಪಟ್ಟಿದ್ದಾರೆ.
ಟ್ವೀಟ್ ಮುಂದುವರೆಸಿ "ನಾನು ಚಿಕ್ಕಂದಿನಿಂದ ನಾಯಿಗಳನ್ನು ಸಾಕುತ್ತಾ ಬೆಳೆದವನು. ನನ್ನ ಕುಟುಂಬವು ಇಂಡೀಸ್ ನಾಯಿಗಳನ್ನು ದತ್ತು ಪಡೆದಿರುವುದರಿಂದ, ಅವು ತರುವ ಪ್ರೀತಿ ಮತ್ತು ನಿಷ್ಠೆ ಎಂಥದ್ದು ಎಂದು ನನಗೆ ಗೊತ್ತು. ನಾಯಿಗಳು ಬದುಕಲು ಬೀದಿಗಳನ್ನು ಆಯ್ಕೆ ಮಾಡಿಕೊಳ್ಳಲಿಲ್ಲ, ಆದರೆ ನಾವು ಅವುಗಳಿಗೆ ಆಶ್ರಯ ನೀಡಬಹುದು. ನಾವು ಖಂಡಿತವಾಗಿಯೂ ಧ್ವನಿಯಿಲ್ಲದವರಿಗೆ ಧ್ವನಿಯಾಗಬಹುದು. ದಯವಿಟ್ಟು ಬೀದಿ ನಾಯಿಗಳನ್ನು ದತ್ತು ತೆಗೆದುಕೊಳ್ಳಿ" ಎಂದು ಸುದೀಪ್ ಮನವಿ ಮಾಡಿದ್ದಾರೆ.
ನಟ ಸುದೀಪ್ ಟ್ವೀಟ್ ಬಗ್ಗೆ ಕಾಮೆಂಟ್ ಬಾಕ್ಸ್‌ನಲ್ಲಿ ತರಹೇವಾರಿ ಕಾಮೆಂಟ್ ಬರ್ತಿದೆ. ಕಾರಿನಲ್ಲಿ ಓಡಾಡುವವರಿಗೆ ಬೀದಿನಾಯಿಗಳ ಕಾಟ ಏನು ಎನ್ನುವುದು ಗೊತ್ತಿಲ್ಲ. ರಸ್ತೆಯಲ್ಲಿ ನಡೆದಾಡುವವರೆಗೆ ಆ ಕಷ್ಟ ಗೊತ್ತು ಎಂದು ಕೆಲವರು ಕಾಮೆಂಟ್ ಮಾಡಿ ವ್ಯಂಗ್ಯವಾಡಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಸುದೀಪ್ ಪರ ಬ್ಯಾಟ್ ಬೀಸಿದ್ದಾರೆ. ಸುದೀಪ್ ಸರ್ ಸುಪ್ರೀಂ ಆದೇಶದ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ. ಬದಲಿಗೆ ನಾಯಿಗಳನ್ನು ದತ್ತು ಪಡೆಯಲು ಮನವಿ ಮಾಡಿದ್ದಾರೆ. ಅವರ ಟ್ವೀಟ್ ಅನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ ಎನ್ನುತ್ತಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರೋಧಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ "ದೆಹಲಿ-ಎನ್‌ಸಿಆರ್‌ನಿಂದ ಎಲ್ಲಾ ಬೀದಿ ನಾಯಿಗಳನ್ನು ಸ್ಥಳಾಂತರಿಸಬೇಕು ಎಂದ ಸುಪ್ರೀಂ ಕೋರ್ಟ್‌ನ ನಿರ್ದೇಶನ ದಶಕಗಳ ಮಾನವೀಯ, ವೈಜ್ಞಾನಿಕ ಬೆಂಬಲಿತ ನೀತಿಯಿಂದ ಹಿಂದಕ್ಕೆ ಸರಿದಂತೆ. ಮೂಕ ಪ್ರಾಣಿಗಳ ಸಮಸ್ಯೆ ಅಳಿಸುವಂಥದ್ದಲ್ಲ. ಕ್ರೌರ್ಯವಿಲ್ಲದೇ ಅವುಗಳಿಗೆ ಆಶ್ರಯ ಕಲ್ಪಿಸುವುದು, ಸಂತಾನಹರಣ ಚಿಕಿತ್ಸೆ, ವ್ಯಾಕ್ಸಿನೇಷನ್ ಮತ್ತು ಸಮುದಾಯ ಆರೈಕೆ ಮೂಲಕ ಬೀದಿಗಳನ್ನು ಸುರಕ್ಷಿತವಾಗಿರಿಸಬಹುದು" ಎಂದು ಅವರು ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ ರೀಟ್ವೀಟ್ ಮಾಡಿ ಕರ್ನಾಟಕ ಸಿಎಂ ಸಿದ್ಧರಾಮಯ್ಯ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಬೀದಿ ನಾಯಿಗಳನ್ನು ಸ್ಥಳಾಂತರಿಸುವುದೇ ಆಡಳಿತವಲ್ಲ. ಇದು ಕ್ರೌರ್ಯ. ಸಂತಾನಶಕ್ತಿ ಹರಣ ಚಿಕಿತ್ಸೆ, ಲಸಿಕೆ, ಆರೈಕೆ ಕೇಂದ್ರಗಳಂತಹ ಪರಿಹಾರ ಕ್ರಮಗಳಿವೆ. ಅದು ಬಿಟ್ಟು ಇಂತಹ ಭಯದಿಂದ ಇಂತಹ ನಿರ್ಧಾರ ಕೈಗೊಂಡರೆ ಸಮಸ್ಯೆ ಹೆಚ್ಚುತ್ತದೆ ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











