ದರ್ಶನ್ ಫೋಟೊ ಮೇಲೆ ನಟ ಸುದೀಪ್ ಆಟೋಗ್ರಾಫ್: ಏನಂತ ಬರೆದ್ರು ಕಿಚ್ಚ?
ರಾಜ್ಯದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಕಳೆದ ಹಲವು ದಿನಗಳಿಂದ ಸ್ಯಾಂಡಲ್‌ವುಡ್ ತಾರೆಯರು ರಾಜ್ಯದ ಮೂಲೆ ಮೂಲೆಯಲ್ಲಿ ಚುನಾವಣೆ ಪ್ರಚಾರ ನಡೆಸಿದರು. ದರ್ಶನ್, ಸುದೀಪ್ ಮತಬೇಟೆ ಜೋರಾಗಿತ್ತು. ಪ್ರಚಾರದ ವೇಳೆ ಕೆಲ ಇಂಟ್ರೆಸ್ಟಿಂಗ್ ಸಂಗತಿಗಳು ಗಮನ ಸೆಳೆಯಿತು. ಇನ್ನು ಸುದೀಪ್ ಅಭಿಮಾನಿಗಳ ಕೈಯಲ್ಲಿದ್ದ ದರ್ಶನ್ ಫೋಟೊ ತೆಗೆದುಕೊಂಡು ಆಟೋಗ್ರಾಫ್ ನೀಡಿದ ಪ್ರಸಂಗವೂ ನಡೆಯಿತು.
ನಟ ಸುದೀಪ್ ಚುನಾವಣೆ ಪ್ರಚಾರ ಆರಂಭವಾಗುವುದಕ್ಕು ಮುನ್ನವೇ ಬಿಜೆಪಿಗೆ ಅದರಲ್ಲೂ ಮುಖ್ಯವಾಗಿ ಸಿಎಂ ಬೊಮ್ಮಾಯಿ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದರು. ಬೊಮ್ಮಾಯಿ ಸೇರಿದಂತೆ ಬಿಜೆಪಿಯ ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ಮತಯಾಚಿಸಿದರು. ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ದರ್ಶನ್ - ಸುದೀಪ್ ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದು ಗೊತ್ತೇಯಿದೆ. ಆದರೆ ಸುದೀಪ್ ಇವತ್ತಿಗೂ ಸ್ನೇಹ ಹಸ್ತವನ್ನು ಚಾಚುತ್ತಲೇ ನಿಂತಿದ್ದಾರೆ. ದರ್ಶನ್ ಮಾತ್ರ ಅಂತರ ಕಾಯ್ದುಕೊಂಡೇ ಇದ್ದಾರೆ. ಇನ್ನು ಪ್ರಚಾರದ ವೇಳೆ ಸುದೀಪ್ ಅಭಿಮಾನಿಗಳ ಕೈಯಲ್ಲಿದ್ದ ಫೋಟೊಗಳಿಗೆ ಆಟೋಗ್ರಾಫ್ ನೀಡಿದರು.

ರಾಜ್ಯದ ಮೂಲೆ ಮೂಲೆಯಲ್ಲಿ ಸುದೀಪ್ ಹಾಗೂ ದರ್ಶನ್ ರೋಡ್ ಶೋಗಳನ್ನು ನಡೆಸಿ ಮತಬೇಟೆ ನಡೆಸಿದರು. ದರ್ಶನ್ ಕಾಂಗ್ರೆಸ್, ಬಿಜೆಪಿ ಎಂದು ನೋಡದೇ ತಮ್ಮ ಸ್ನೇಹಿತರ ಪರ ಮತ ಕೇಳಿದರು. ಇನ್ನು ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆ ನಡೆಸಿದರು. ಎರಡು ಕಡೆಗಳಲ್ಲಿ ಸುದೀಪ್ ಅಭಿಮಾನಿಗಳ ಕೈಯಲ್ಲಿದ್ದ ಫೋಟೊವನ್ನು ತಾವೇ ಕೇಳಿ ತೆಗೆದುಕೊಂಡು ಆಟೋಗ್ರಾಫ್ ನೀಡಿದರು. ತಾವು ಹಾಗೂ ದರ್ಶನ್ ಜೊತೆಗಿರುವ ಫೋಟೊ ಮೇಲೆ ಸುದೀಪ್ ಏನು ಬರೆದಿದ್ಧಾರೆ ಎನ್ನುವ ಬಗ್ಗೆ ಈ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

ಸದ್ಯ ಸುದೀಪ್ ಆಟೋಗ್ರಾಫ್ ನೀಡಿದ್ದ ಆ ಫೋಟೊ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅದರಲ್ಲಿ ಕಿಚ್ಚ ಏನು ಬರೆದಿದ್ದಾರೆ ಅನ್ನುವುದನ್ನು ನೋಡುವುದಾದರೆ ಲವ್ ಸಿಂಬಲ್ ಬರೆದು ಯು ದರ್ಶನ್ ಎಂದು ಬರೆದಿರುವುದು ಗೊತ್ತಾಗುತ್ತಿದೆ. ಅಂದರೆ "ಲವ್ ಯು ದರ್ಶನ್" ಎಂದು ಸುದೀಪ್ ಮತ್ತೊಮ್ಮೆ ಕುಚಿಕು ಸ್ನೇಹಿತನ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಫೋಟೊ ಸಖತ್ ವೈರಲ್ ಆಗುತ್ತಿದೆ. ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ ಚಿತ್ರರಂಗಕ್ಕೆ ಬಂದ ಸುದೀಪ್ ಹಾಗೂ ದರ್ಶನ್ ಮುಂದೆ ಆತ್ಮೀಯ ಸ್ನೇಹಿತರಾಗಿದ್ದರು. ಆಗಾಗ್ಗೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.
ದರ್ಶನ್ ಸಿನಿಮಾ ಕಾರ್ಯಕ್ರಮಗಳಿಗೆ ಸುದೀಪ್, ಅದೇರೀತಿ ಸುದೀಪ್ ಸಿನಿಮಾ ಕಾರ್ಯಕ್ರಮಗಳಿಗೆ ದರ್ಶನ್ ಹೋಗುತ್ತಿದ್ದರು. ಆದರೆ ಇದ್ದಕ್ಕಿದಂತೆ ದಿಢೀರನೆ ಒಂದು ದಿನ ದರ್ಶನ್ "ನಾನು ಹಾಗೂ ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟರು ಮಾತ್ರ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ. ಇದು ಇಲ್ಲಿಗೆ ಮುಗಿಯಿತು" ಎಂದು ಟ್ವೀಟ್ ಮಾಡಿದ್ದರು. ಇದನ್ನು ಮೊದಲು ಯಾರು ನಂಬಲಿಲ್ಲ. ನಂತರ ಸ್ವತಃ ದರ್ಶನ್ ಇದಕ್ಕೆ ಸ್ಪಷ್ಟನೆ ನೀಡಿದ್ದರು. ಆದರೆ ನಿಜಕ್ಕೂ ಇಬ್ಬರೂ ದೂರಾಗಲೂ ಕಾರಣ ಏನು ಎನ್ನುವುದು ಮಾತ್ರ ಗೊತ್ತಾಗಲೇ ಇಲ್ಲ.
ಅಲ್ಲಿಂದ ಮುಂದೆ ದರ್ಶನ್ ಈ ಬಗ್ಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. ಸುದೀಪ್ ಮಾತ್ರ ಇದಕ್ಕೆ ತಿರುಗೇಟು ನೀಡಲಿಲ್ಲ. ಬದಲಿಗೆ ತಮ್ಮಿಬ್ಬರ ಸ್ನೇಹದ ಬಗ್ಗೆ ಹಲವು ಬಾರಿ ಮಾತನಾಡಿದರು. ಎರಡ್ಮೂರು ಬಾರಿ ದರ್ಶನ್‌ಗೆ ಬೆಂಬಲಿಸಿ ಸುದೀಪ್ ಟ್ವೀಟ್ ಸಹ ಮಾಡಿದ್ದರು. ದರ್ಶನ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದಾಗ ಶೀಘ್ರ ಚೇತರಿಕೆಗಾಗಿ ಸುದೀಪ್ ಪ್ರಾರ್ಥಿಸಿದ್ದರು. ಆ ನಂತರ ಕೂಡ ಸುದೀಪ್ ಸ್ನೇಹ ಹಸ್ತ ಚಾಚುತ್ತಲೇ ಬರ್ತಿದ್ದಾರೆ. ದರ್ಶನ್ ಮಾತ್ರ ಅದು ಮುಗಿದ ಅಧ್ಯಾಯ ಎಂದು ಸುಮ್ಮನಾಗಿದ್ಧಾರೆ.
ಇತ್ತೀಚೆಗೆ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಗೆ ಸುದೀಪ್ ಸುದೀರ್ಘ ಪತ್ರ ಬರೆದು ಸ್ನೇಹಿತ ಬೆಂಬಲಕ್ಕೆ ನಿಂತಿದ್ದರು. ಇದಕ್ಕೆ ದರ್ಶನ್ ಪ್ರತಿಕ್ರಿಯಿಸಿ ಧನ್ಯವಾದ ತಿಳಿಸಿದ್ದರು. ಆಗ ಅಭಿಮಾನಿಗಳು ಇಬ್ಬರು ಮತ್ತೆ ಒಂದಾಗುತ್ತಾರೆ ಎಂದು ಭಾವಿಸಿದ್ದರು. ನಟ ಜಗ್ಗೇಶ್ ಕೂಡ ಇಬ್ಬರು ಒಟ್ಟಾಗಿರುವುದನ್ನು ನೋಡುವ ಇಂಗಿತ ವ್ಯಕ್ತಪಡಿಸಿದ್ದರು.


Click it and Unblock the Notifications











