ದರ್ಶನ್ ನಟನೆಯ 'ಕಾಟೇರ' ಸಿನಿಮಾ ನೋಡಿ ಕಿಚ್ಚ ಸುದೀಪ್ ಕೊಟ್ಟಿದ್ದ ರಿವ್ಯೂ ಏನು?
ಸ್ಯಾಂಡಲ್‌ವುಡ್‌ನಲ್ಲೀಗ ಯುದ್ಧದ ಮಾತು ಜೋರಾಗಿ ಕೇಳಿಬರ್ತಿದೆ. ಹುಬ್ಬಳ್ಳಿಯಲ್ಲಿ ನಡೆದ 'ಮಾರ್ಕ್' ಚಿತ್ರದ ಈವೆಂಟ್‌ನಲ್ಲಿ ಸುದೀಪ್ ಯುದ್ಧಕ್ಕೆ ಸಿದ್ಧ ಎಂದಿದ್ದರು. ಇದು ದರ್ಶನ್ ಹಾಗೂ ಸುದೀಪ್ ಫ್ಯಾನ್ಸ್ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಆದರೆ ನಾನು ಯಾರನ್ನು ಉದ್ದೇಶಿಸಿ ಆ ಮಾತು ಹೇಳಲಿಲ್ಲ. ಪೈರಸಿ ವಿರುದ್ಧ ನನ್ನ ಯುದ್ಧ ಎಂದು ಹೇಳಿದ್ದೆ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಸುದೀಪ್ ಯುದ್ಧದ ಹೇಳಿಕೆ ಬೆನ್ನಲ್ಲೇ ದಾವಣಗರೆಯಲ್ಲಿ ವಿಜಯಲಕ್ಷ್ಮಿ ದರ್ಶನ್ ನೀಡಿದ್ದ ಹೇಳಿಕೆ ಚರ್ಚೆ ಹುಟ್ಟಾಕ್ಕಿತ್ತು. ಸುದೀಪ್ ಅವರಿಗೆ ವಿಜಯಲಕ್ಷ್ಮಿ ತಿರುಗೇಟು ನೀಡಿದ್ದಾರೆ ಎನ್ನುವ ಅರ್ಥದಲ್ಲಿ ಚರ್ಚೆ ಜೋರಾಗಿದೆ. ಆದರೆ ಅದನ್ನು ನಾನು ಒಪ್ಪಲ್ಲ ಎಂದು ಸುದೀಪ್ ಕೇಳಿದ್ದಾರೆ. ವಿಜಯಲಕ್ಷ್ಮಿ ಯಾರ ಹೆಸರನ್ನು ಹೇಳಲಿಲ್ಲ, ವೈಯಕ್ತಿಕವಾಗಿ ನನಗೆ ಹೇಳಿದ್ದರೆ ನಾನು ಉತ್ತರಿಸುತ್ತೇನೆ ಎಂದಿದ್ದಾರೆ. ನಾವೆಲ್ಲಾ ಚಿತ್ರರಂಗದವರು ಚೆನ್ನಾಗಿಯೇ ಇದ್ದೇವೆ, ನಾನು 'ಕಾಟೇರ' ಸಿನಿಮಾ ನೋಡಿದ್ದೆ ಎಂದು ಸುದೀಪ್ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ದರ್ಶನ್ ನಟನೆಯ 'ಕಾಟೇರ' ಸಿನಿಮಾ ತೆರೆಗೆ ಬಂದಿತ್ತು. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಆಕ್ಷನ್ ಥ್ರಿಲ್ಲರ್ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈ ಚಿತ್ರವನ್ನು ನನ್ನ ಮನೆಯಲ್ಲೇ ನಾನು ನೋಡಿದ್ದೆ. ಬಳಿಕ ರಾಕ್‌ಲೈನ್ ವೆಂಕಟೇಶ್ ಅವರೊಟ್ಟಿಗೆ ಸಾಕಷ್ಟು ಮಾತನಾಡಿದ್ದೆ, ಅವ್ರನ್ನೇ ಕೇಳಿ ಎಂದು ಸುದೀಪ್ ಪವರ್ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.
ಸದ್ಯ ನಡೆಯುತ್ತಿರುವ ಫ್ಯಾನ್ಸ್ ವಾರ್ ಬಗ್ಗೆ ಕೇಳಿದ ಪ್ರಶ್ನೆಗೆ ಸುದೀಪ್ ಉತ್ತರಿಸಿದ್ದಾರೆ. "ಅವ್ರ(ದರ್ಶನ್ ಫ್ಯಾನ್ಸ್) ಬಗ್ಗೆ ನಾನು ಮಾತನಾಡ್ದೆ, ಅವ್ರು(ವಿಜಯಲಕ್ಷ್ಮಿ ದರ್ಶನ್) ನನ್ನ ಬಗ್ಗೆ ಮಾತನಾಡಿದ್ರು ಅನ್ನೋದು ನಿಮ್ಮ ನಿಮ್ಮ ಊಹೆ. ನಾನು, ದರ್ಶನ್ ಕಿತ್ತಾಡಿದ್ದೀವಾ? ಮೈಕ್ ಮೈಕ್ ಹಿಡ್ಕೊಂಡು ಬೈಯ್ಕೊಂಡಿದ್ದೀವಾ? ಇಲ್ಲ ಅಲ್ವಾ? ನಾವು ಹೇಳದ ಮಾತುಗಳು ನಿಮಗೆ ಕೇಳಿಸುತ್ತಿದ್ರೆ, ನೀವೆ ಸರಿ ಮಾಡ್ಕೊಳಿ. ಯುದ್ಧ ಇಲ್ಲಿ ಯಾರಿಗೂ ಇಷ್ಟ ಇಲ್ಲ" ಎಂದಿದ್ದಾರೆ.

ಮಾತು ಮುಂದುವರೆಸಿರುವ ಸುದೀಪ್ "ಕಾಟೇರ ಸಿನಿಮಾ ನಮ್ಮ ಮನೆಯಲ್ಲೇ ಶೋ ಹಾಕಿಕೊಟ್ಟಿದ್ರು. ಸಿನಿಮಾ ನೋಡಿ ಮುಕ್ಕಾಲು ಗಂಟೆ ರಾಕ್‌ಲೈನ್ ವೆಂಕಟೇಶ್ ಬಳಿ ಮಾತನಾಡಿದ್ದೀನಿ. ಅಷ್ಟೆಲ್ಲಾ ಇದ್ರೆ ಯಾಕ್ ಮಾಡ್ತಿದ್ದೆ. ಅದು ಯಾವಾಗ ಬಂದ ಸಿನಿಮಾ? ನಾನು ನೋಡಿದ್ದು ಯಾವಾಗ? ರಾಕ್‌ಲೈನ್ ವೆಂಕಟೇಶ್ ಅವರನ್ನು ಫೋನ್ ಮಾಡಿ ಕೇಳಿ, ನಾನು ಸಿನಿಮಾ ಬಗ್ಗೆ ಎಷ್ಟು ಮಾತನಾಡ್ದೆ ಅಂತ. ಮನಸ್ಸಿನಿಂದ ಸಿನಿಮಾ ಮಾಡೋಣ" ಎಂದು ಸುದೀಪ್ ಹೇಳಿದ್ದಾರೆ.
ಗ್ರೌಂಡ್ ಲೆವೆಲ್‌ನಲ್ಲಿ ಯುದ್ಧ ನಡೀತಿದೆ. ಅವ್ರು ನಮ್ಗೆ ನಿಮ್ಗೆ ಹೇಳಿದ್ದು ಅಂದ್ರೆ, ದಯವಿಟ್ಟು ಅವ್ರು ಸರಿ ಮಾಡಿಕೊಳ್ಳಲಿ. ಅದು ಯಾರ ಅಭಿಮಾನಿಗಳಾಗಿದ್ದರೂ ಸರಿ, ನಮ್ಮ ಅಭಿಮಾನಿಗಳು ನೋವು ಮಾಡಿದ್ದರೂ ಸರಿಪಡಿಸಿಕೊಳ್ಳಲಿ. ಅದು ಬಿಟ್ಟು ಯಾರೋ ಮಾತನಾಡಿದ್ದಕ್ಕೆ ನಾನು ಯಾಕೆ ರಿಯಾಕ್ಟ್ ಮಾಡಲಿ ಎಂದು ಸುದೀಪ್ ಪ್ರಶ್ನಿಸಿದ್ದಾರೆ.
ಎರಡು ವರ್ಷಗಳ ಹಿಂದೆ 'ಕಾಟೇರ' ಸಿನಿಮಾ ಬಂದು ಗೆದ್ದಿತ್ತು. ದರ್ಶನ್ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ತರುಣ್ ಸುಧೀರ್ ನಿರ್ದೇಶನದ ಸಿನಿಮಾ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚರ್ಚೆ ನಡೆದಿತ್ತು. 'ಉಳುವವನೆ ಭೂಮಿಯ ಒಡೆಯ' ಕಾನೂನು ಜಾರಿಯಾದಾಗ ನಡೆದಿರಬಹುದಾದ ಘಟನೆಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. ವಿಭಿನ್ನ ಅವತಾರಗಳಲ್ಲಿ ದರ್ಶನ್ ನಟಿಸಿ ಗೆದ್ದಿದ್ದರು.
ಒಂದ್ಕಾಲದಲ್ಲಿ ದರ್ಶನ್ ಹಾಗೂ ಸುದೀಪ್ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಇದ್ದಕ್ಕಿದಂತೆ ಭಿನ್ನಾಭಿಪ್ರಾಯ ಮೂಡಿತ್ತು. ದರ್ಶನ್ ಬಹಿರಂಗವಾಗಿ ಇನ್ಮುಂದೆ ಸುದೀಪ್ ಜೊತೆ ಸ್ನೇಹ ಮುಂದುವರೆಸಲ್ಲ ಎಂದುಬಿಟ್ಟರು. ಆ ಬಳಿಕ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ. ಸುದೀಪ್ ಮಾತ್ರ ಇವತ್ತಿಗೂ ಸ್ನೇಹಹಸ್ತ ಚಾಚುತ್ತಲೇ ಇದ್ದಾರೆ.


Click it and Unblock the Notifications











