"ಒಬ್ಬರನ್ನೊಬ್ಬರು ಟೀಕೆ ಮಾಡುವುದು ಬಿಡಬೇಕು.. ಇಬ್ರು ನನ್ನ ಮಾತು ಕೇಳಿದ್ರೆ, ಇದಕ್ಕೆ ನಾನು ಸಲ್ಯೂಷನ್ ಕೊಡ್ತೀನಿ"
ನಟ ಸುದೀಪ್ ಹಾಗೂ ನಿರ್ಮಾಪಕ ಎಂ. ಎನ್ ಕುಮಾರ್ ಕಾಲ್‌ಶೀಟ್ ಜಟಾಪಟಿ ಈಗ ಕ್ರೇಜಿಸ್ಟಾರ್ ಮನೆ ಅಂಗಳಕ್ಕೆ ತಲುಪಿದೆ. ತಮ್ಮ ವಿರುದ್ಧ ಆರೋಪ ಮಾಡಿದ್ದಕ್ಕೆ ಕಿಚ್ಚ, ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದೀಗ ನಟ ರವಿಚಂದ್ರನ್ ಭೇಟಿ ಮಾಡಿ ಕುಮಾರ್ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಧರಣಿ ಹಿಂಪಡೆಯಲು ಮನಸ್ಸು ಮಾಡಿದ್ದಾರೆ.
ಇನ್ನು ಎಂ. ಎನ್ ಕುಮಾರ್ ಜೊತೆ ಚರ್ಚಸಿರುವ ರವಿಚಂದ್ರನ್ ಸುದೀಪ್ ಜೊತೆ ಕೂಡ ಮಾತನಾಡಿ ಸಂಧಾನದ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರೆ. ಈ ಸಂಬಂಧ ಮಾಧ್ಯಮಗಳ ಜೊತೆ ರವಿಚಂದ್ರನ್ ಮಾತನಾಡಿ "ಕುಮಾರ್ ಎಲ್ಲಾ ಸಂಗತಿಯನ್ನು ವಿವರವಾಗಿ ಹೇಳಿದ್ದಾರೆ. ಇದು ಬಹಳ ದೊಡ್ಡ ಕಥೆ. ಮತ್ತೊಂದು ದಿನ ಕೇಳಬೇಕು. ಸದ್ಯ ಪರಿಸ್ಥಿತಿ ತಣ್ಣಗಾಗಬೇಕು. ನಾನು ಸುದೀಪ್ ಬಳಿ ಈ ಬಗ್ಗೆ ಮಾತನಾಡಬೇಕು. ಎರಡು ಕಥೆಗಳನ್ನ ಕೇಳ್ತೀನಿ. ನಂತರ ನನ್ನ ನಿರ್ಧಾರಕ್ಕೆ ಇಬ್ಬರೂ ಬದ್ಧರಾಗಬೇಕು. ನಂತರ ಏನು ಮಾಡಬೇಕು ಅನ್ನೋದನ್ನು ನಾನು ಹೇಳ್ತೀನಿ" ಎಂದಿದ್ದಾರೆ.

"ಕುಮಾರ್ ಹೇಳಿದ್ದನ್ನು ಕೇಳಿದರೆ ಇದು 20 ವರ್ಷದ ಕಥೆಯಂತೆ ಕಾಣ್ತಿದೆ. ಸುದೀಪ್ ಆದಷ್ಟು ಬೇಗ ಸಿಗ್ತಾರೆ. ಸ್ವಲ್ಪ ತಾಳ್ಮೆ ಇರಲಿ. ಈಗಾಗಲೇ ಸುದೀಪ್ ಹಾಗೂ ಕುಮಾರ್ ಇಬ್ಬರೂ ನೊಂದಿದ್ದಾರೆ. ಚಿತ್ರರಂಗದಲ್ಲಿ ನಾವು ಸರಿಯಾಗಬೇಕು. ಚಿತ್ರರಂಗದ ಒಕ್ಕೂಟದಲ್ಲಿ ಒಗ್ಗಟ್ಟಿರಬೇಕು. ಈ ಸಮಸ್ಯೆ ಬಗೆಹರಿಸಲು ನಾನು ಟ್ರೈ ಮಾಡ್ತೀನಿ. ಪರಿಹಾರ ನಾನು ಹುಡುಕೋ ಪ್ರಯತ್ನ ಮಾಡ್ತೀನಿ" ಎಂದು ರವಿಚಂದ್ರನ್ ಭರವಸೆ ನೀಡಿದ್ದಾರೆ.
ಮಾತು ಮುಂದುವರೆಸಿದ ಕ್ರೇಜಿಸ್ಟಾರ್ "ಒಬ್ಬರ ಮೇಲೆ ಇನ್ನೊಬ್ಬರು ಟೀಕೆ ಮಾಡೋದು ಬಿಡಬೇಕು. ಎಲ್ಲರೂ ಚೆನ್ನಾಗಿರಬೇಕು ಅನ್ನೋದು ನನ್ನ ಆಸೆ. ಸುದೀಪ್ ನನಗೆ 'ಮಾಣಿಕ್ಯ' ಚಿತ್ರದಿಂದ ತುಂಬಾ ಕ್ಲೋಸ್ ಆದರು. ಅದಕ್ಕು ಮುಂಚಿನಿಂದಲೂ ಕುಮಾರ್ ನನಗೆ ಗೊತ್ತು. ಅವರು ಕೊಟ್ಟ ದಾಖಲೆಗಳನ್ನು ನಾನು ನೋಡ್ತೀನಿ ಮೊದಲು. ಆ ಮೇಲೆ ಸುದೀಪ್ ಹತ್ರ ಕೂಡ ಮಾತಾಡ್ತೀನಿ" ಎಂದು ಹೇಳಿದ್ದಾರೆ.
ರವಿಚಂದ್ರನ್ ಭೇಟಿ ಬಳಿಕ ಮಾತನಾಡಿದ ನಿರ್ಮಾಪಕ ಎಂ. ಎನ್ ಕುಮಾರ್ "ನಾನು ಬಹಿರಂಗವಾಗಿ ಯಾವುದೇ ದಾಖಲೆ ಕೊಡಲ್ಲ. ಧರಣಿ ನಿಲ್ಲಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾಕಂದರೆ ಹಿರಿಯರ ಮಾತಿಗೆ ಬೆಲೆ ಕೊಡ್ಬೇಕು. ರವಿಚಂದ್ರನ್ ಸರ್ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ನನ್ನ ಮಾತನನ್ನು ಇಬ್ಬರು ಕೇಳಬೇಕು ಎಂದಿದ್ದಾರೆ. ಅದಕ್ಕೆ ನಾನು ಒಪ್ಪಿದ್ದೀನಿ"
"ಸ್ಟಾರ್‌ಗಳನ್ನು ಬೆಳೆಸುವ ಕೆಲಸ ನಮ್ಮದು. ಸ್ಟಾರ್‌ಗಳಿಗೆ ಮಸಿ ಬಳಿಯುವ ಕೆಲಸ ಮಾಡಲ್ಲ. ನಮ್ಮ ಸ್ನೇಹಿತರ ಜೊತೆ ಚರ್ಚಿಸಿ ಶಿವಣ್ಣನನ್ನು ಭೇಟಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ" ಎಂದಿದ್ದಾರೆ.


Click it and Unblock the Notifications











