ಅಂಬಿ ಬಯೋಪಿಕ್ ನಲ್ಲಿ ಸುದೀಪ್: ಕಿಚ್ಚ ಹೇಳಿದ್ದೇನು?
ತೆಲುಗಿನ ಸೈರಾ ನರಸಿಂಹ ರೆಡ್ಡಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿದೆ. ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವುಕು ರಾಜನಾಗಿ ಮಿಂಚಿದ್ದಾರೆ. ವಿಶೇಷ ಅಂದ್ರೆ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ರಿಲೀಸ್ ಆಗಿದೆ. ಕನ್ನಡದಲ್ಲೂ ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೈರಾ ನರಸಿಂಹ ರೆಡ್ಡಿ ಗೆಲ್ಲಿಸಿದ ರಾಜ್ಯದ ಜನತೆಗೆ ಧನ್ಯವಾದ ತಿಳಿಸಲು ಸುದೀಪ್ ಮತ್ತು ನಿರ್ದೇಶಕ ಸುರೇಂದರ್ ರೆಡ್ಡಿ ಮಾಧ್ಯಮದ ಮುಂದೆ ಹಾಜರಾಗಿದ್ದರು. ಇತ್ತೀಚಿಗೆ ನಡೆದ ಸಕ್ಸಸ್ ಮೀಟ್ ನಲ್ಲಿ ಕಿಚ್ಚ ರೆಬಲ್ ಸ್ಟಾರ್ ಅಂಬರೀಶ್ ಮತ್ತು ಕ್ರಿಕೆಟಿಗ ರಾಹುಲ್ ದ್ರಾಮಿಡ್ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ.
ಸುದೀಪ್ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಈ ಬಗ್ಗೆ ಕಿಚ್ಚ ಈಗ ಸ್ಪಷ್ಟ ಪಡಿಸಿದ್ದಾರೆ. "ಇಲ್ಲ ಈಗ ನನ್ನಿಂದ ಅದು ಸಾಧ್ಯವಿಲ್ಲ. ಅದಕ್ಕೆ ಚಿಕ್ಕ ವಯಸ್ಸಿನ ಹೀರೋ ಬೇಕು" ಎಂದು ಹೇಳುವ ಮೂಲಕ ಕ್ರಿಕೆಟಿಗ ರಾಹುಲ್ ದ್ರಾವಿಡ್ ಬಯೋಪಿಕ್ ನಲ್ಲಿ ಬಣ್ಣ ಹಚ್ಚುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು "ಅಂಬರೀಶ್ ಕುರಿತು ಬಯೋಪಿಕ್ ಮಾಡೋದು ಕಷ್ಟ. ಅವರು ನಮ್ಮ ನಡುವೆ ಇದ್ದವರು, ಹಾಗಾಗಿ ಪರ್ಫೆಕ್ಟ್ ಆಗಿ ಅವರ ಬಯೋಪಿಕ್ ಮಾಡೋದು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ಎರಡು ಬಯೋಪಿಕ್ ಸುದ್ದಿಗಳಿಗೆ ಸುದೀಪ್ ತೆರೆ ಎಳೆದಿದ್ದಾರೆ.
ಇದೆ ವೇದಿಕೆಯಲ್ಲಿ ಸುದೀಪ್ ಡಬ್ಬಿಂಗ್ ಬಗ್ಗೆಯು ಮಾತನಾಡಿದ್ದಾರೆ. "ಕೆಲ ವರ್ಷಗಳ ಹಿಂದೆ ಡಬ್ಬಿಂಗ್ ವಿರುದ್ಧ ನಾನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ನಿಜ. ಆದರೆ ದೊಡ್ಡ ಸಿನಿಮಾ ಮಾಡುವಾಗ ಡಬ್ಬಿಂಗ್ ಅನಿವಾರ್ಯ. ಬೇರೆ ಭಾಷೆ ಸಿನಿಮಾಗಳು ಕನ್ನಡದಲ್ಲಿ ಬಂದ್ರೆ ಸಂತಸ ಪಡಬೇಕು" ಎಂದು ಹೇಳಿದ್ದಾರೆ.


Click it and Unblock the Notifications











