ವಿಕ್ರಾಂತ್ ರೋಣ ಡಬ್ಬಿಂಗ್ ಮುಗಿಸಿ ಹಾಡಿನ ಚಿತ್ರೀಕರಣಕ್ಕೆ ಸಜ್ಜಾದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಇದೀಗ ಸಿನಿಮಾದ ಡಬ್ಬಿಂಗ್ ಕೆಲಸ ನಡೆಯುತ್ತಿದ್ದು, ಪ್ರಮುಖ ಕಲಾವಿದರು ತಮ್ಮ ಪಾತ್ರಗಳ ಧ್ವನಿಮುದ್ರಿಕೆ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದಷ್ಟೆ ಡಬ್ಬಿಂಗ್ ಶುರು ಮಾಡಿದ್ದ ಕಿಚ್ಚ ಸುದೀಪ್ ಆಗಲೇ ತಮ್ಮ ಕೆಲಸ ಮುಗಿಸಿದ್ದಾರೆ.
ವಿಕ್ರಾಂತ್ ರೋಣ ಚಿತ್ರದ ಡಬ್ಬಿಂಗ್ ಕೆಲಸ ಮುಗಿದಿರುವ ಬಗ್ಗೆ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಡಬ್ಬಿಂಗ್ ಮುಗಿಸಿ ಹಾಡಿನ ಚಿತ್ರೀಕರಣಕ್ಕೆ ಹೊರಬೇಕು ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಟಾಕಿ ಭಾಗ ಮುಗಿಸಿರುವ ವಿಕ್ರಾಂತ್ ರೋಣ ಬಹುನಿರೀಕ್ಷೆಯ ಹಾಡಿನ ಚಿತ್ರೀಕರಣ ಬಾಕಿಯುಳಿಸಿಕೊಂಡಿದೆ. ಇದೀಗ ಹಾಡಿನ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ ಕಿಚ್ಚ ಅಂಡ್ ಟೀಂ.
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, "ವಿಕ್ರಾಂತ್ ರೋಣ ಚಿತ್ರದ ನನ್ನ ಡಬ್ಬಿಂಗ್ ಮುಕ್ತಾಯವಾಗಿದೆ. ಅದ್ಭುತವಾದ ಅನುಭವ. 3ಡಿ ವರ್ಷನ್ ನಲ್ಲಿ ಕೆಲವು ದೃಶ್ಯಗಳನ್ನು ನೋಡಿದೆ. ವಿಕ್ರಾಂತ್ ರೋಣನ ಪ್ರಪಂಚ ನೋಡಲು ಸಖತ್ ಥ್ರಿಲ್ ಆಗಿದೆ. ಈಗ ಹಾಡಿನ ಚಿತ್ರೀಕರಣಕ್ಕೆ ಎದುರು ನೋಡುತ್ತಿದ್ದೇನೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅಂದಹಾಗೆ ವಿಕ್ರಾಂತ್ ರೋಣ ಚಿತ್ರದ ಹಾಡಿನಲ್ಲಿ ಕಿಚ್ಚನ ಜೊತೆ ಬಾಲಿವುಡ್ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆಹಾಕುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಮೊದಲ ಬಾರಿಗೆ ಕನ್ನಡ ಸಿನಿಮಾದ ಹಾಡೊಂದರಲ್ಲಿ ಜಾಕ್ವೆಲಿನ್ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಅದ್ದೂರಿ ಸೆಟ್ ನಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲು ಸಿನಿಮಾ ತಂಡ ಪ್ಲಾನ್ ಮಾಡಿದೆ.
ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ವಿಕ್ರಾಂತ್ ರೋಣ ಯಾವಾಗ ತೆೆರೆಗೆ ಬರುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಕೊರೊನಾ ಕಾರಣದಿಂದ ಬಿಡುಗಡೆ ದಿನಾಂಕ ಇನ್ನು ಅಧಿಕೃತವಾಗಿಲ್ಲ. ಅನೂಪ್ ಭಂಡಾರಿ ನಿರ್ದೇಶನದ ಈ ಸಿನಮಾದಲ್ಲಿ ಸುದೀಪ್ ಜೊತೆ ನಿರೂಪ್ ಭಂಡಾರಿ, ರವಿ ಶಂಕರ್, ನೀತಾ ಅಶೋಕ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











