ಹೊಸ ದಾಖಲೆ ಬರೆದ ಸುದೀಪ್: ಹೊಸ ಎತ್ತರಗಳತ್ತ 'ವಿಕ್ರಾಂತ್ ರೋಣ'
ಕನ್ನಡ ಚಿತ್ರರಂಗ ಹೊಸ ಸಾಹಸಗಳತ್ತ ಮುಖ ಮಾಡುತ್ತಿದೆ. ಕನ್ನಡ ಸಿನಿಮಾಗಳನ್ನು ವಿಶ್ವದ ಮೂಲೆ-ಮೂಲೆಗೆ ತಲುಪಿಸುವ ಪ್ರಯತ್ನಗಳಲ್ಲಿ ತೊಡಗಿಕೊಂಡಿದೆ. ಅದಕ್ಕೆ ಕನ್ನಡದ 'ಕೆಜಿಎಫ್ 2' ಹಾಗೂ 'ವಿಕ್ರಾಂತ್ ರೋಣ' ಸಾಕ್ಷಿ.
ಸಿನಿಮಾವನ್ನು ವಿಶ್ವ ಮಾರುಕಟ್ಟೆಗೆ ತಲುಪಿಸುವ ಯತ್ನದಲ್ಲಿ ಸುದೀಪ್ ನಟನೆಯ 'ವಿಕ್ರಾಂತ್ ರೋಣ' 'ಕೆಜಿಎಫ್ 2' ಗಿಂತಲೂ ಒಂದು ಹೆಜ್ಜೆ ಮುಂದೆ ಇಟ್ಟಿದೆ ಎಂದೇ ಹೇಳಬೇಕಾಗುತ್ತದೆ. ಸಿನಿಮಾವನ್ನು ಇಂಗ್ಲೀಷ್ ಭಾಷೆಗೆ ಸಹ ಡಬ್ ಮಾಡಿ ವಿಶ್ವದ ಪ್ರಮುಖ ನಗರಗಳಲ್ಲಿ ಇಂಗ್ಲೀಷ್ ಅವತರಣಿಕೆಯನ್ನು ಬಿಡುಗಡೆ ಮಾಡಲು ಚಿತ್ರತಂಡ ತಯಾರಾಗಿದೆ.
Recommended Video
'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಸಿನಿಮಾ ಎನ್ನಲಾಗಿತ್ತು. ಆದರೆ ಈಗದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಮಾತ್ರವೇ ಅಲ್ಲದೆ ಇಂಗ್ಲೀಷ್ ಭಾಷೆಯಲ್ಲಿಯೂ 'ವಿಕ್ರಾಂತ್ ರೋಣ' ಬಿಡುಗಡೆ ಆಗಲಿದೆ. ಇಂಗ್ಲೀಷ್ ಭಾಷೆಯಲ್ಲಿ ಸ್ವತಃ ಸುದೀಪ್ ಅವರೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

ಇಂಗ್ಲೀಷ್‌ನಲ್ಲಿ ಡಬ್ ಮಾಡಿದ ಮೊದಲ ನಟ ಸುದೀಪ್
ಕನ್ನಡದ ನಟರೊಬ್ಬರು ಕಮರ್ಶಿಯಲ್ ಸಿನಿಮಾಕ್ಕೆ ಇಂಗ್ಲೀಷ್‌ನಲ್ಲಿ ಡಬ್ ಮಾಡಿರುವುದು ಇದೇ ಮೊದಲು. ಇದು ಕರ್ನಾಟಕದಲ್ಲಿ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲೂ ದಾಖಲೆಯೇ. ಹೀಗೆ ಕಮರ್ಶಿಯಲ್ ಸಿನಿಮಾ ಒಂದರ ಪಾತ್ರಕ್ಕಾಗಿ ಪೂರ್ಣ ಇಂಗ್ಲೀಷ್‌ನಲ್ಲಿ ಡಬ್ ಮಾಡಿದ ಭಾರತೀಯ ಕಲಾವಿದರು ಬಹಳ ವಿರಳ. ಈ ವಿರಳ ಕಲಾವಿದರ ಪಟ್ಟಿಗೆ ಈಗ ಸುದೀಪ್ ಸಹ ಸೇರಿಕೊಂಡಿದ್ದಾರೆ.

ಸಿನಿಮಾದ ಸಣ್ಣ ವಿಡಿಯೋ ತುಣುಕು ಸಹ ಹಂಚಿಕೊಂಡಿದ್ದಾರೆ
ಸುದೀಪ್ ಅವರು 'ವಿಕ್ರಾಂತ್ ರೋಣ' ಸಿನಿಮಾಕ್ಕಾಗಿ ಇಂಗ್ಲೀಷ್‌ನಲ್ಲಿ ಡಬ್ಬಿಂಗ್ ಮಾಡುತ್ತಿರುವ ವಿಡಿಯೋ ಒಂದನ್ನು ಸಿನಿಮಾದ ನಿರ್ದೇಶಕ ಅನುಪ್ ಭಂಡಾರಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಸಿನಿಮಾದ ಒಂದು ಸಣ್ಣ ತುಣುಕನ್ನು ಸಹ ವಿಡಿಯೋದಲ್ಲಿ ಸೇರಿಸಿದ್ದಾರೆ. ಸುದೀಪ್ ಕಂಠದಲ್ಲಿ ಕನ್ನಡ ಮಾತ್ರವಲ್ಲ ಇಂಗ್ಲೀಷ್ ಡೈಲಾಗ್ ಸಹ ಖದರ್ ಆಗಿಯೇ ಕೇಳುತ್ತಿದೆ. ಇಂಗ್ಲೀಷ್‌ನಲ್ಲಿ ಡಬ್ ಮಾಡಿರುವುದರಿಂದ ಒಟಿಟಿಯಲ್ಲಿ ಬಿಡುಗಡೆ ಆದಾಗಲೂ ಸಹ ಹೆಚ್ಚು ಮಂದಿಗೆ ಸಿನಿಮಾ ತಲುಪಲಿದೆ.

ವಿಶ್ವದೆಲ್ಲೆಡೆ ಸಿನಿಮಾ ತಲುಪಿಸುವ ಯತ್ನ
'ವಿಕ್ರಾಂತ್ ರೋಣ' ಸಿನಿಮಾದ ಚಿತ್ರೀಕರಣ ಆರಂಭವಾದಾಗಿನಿಂದಲೂ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ತಲುಪಿಸುವದೇ ಚಿತ್ರತಂಡ ಯೋಜನೆಯಾಗಿತ್ತು. ಹಾಗಾಗಿಯೇ ಸಿನಿಮಾದ ಟೀಸರ್ ಅನ್ನು ದುಬೈನ ಬುರ್ಜ್ ಖಲೀಫಾ ಮೇಲೆ ಬಿಡುಗಡೆ ಮಾಡಲಾಯಿತು. ಹೀಗೆ ಬುರ್ಜ್ ಖಲೀಫಾ ಮೇಲೆ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ಕನ್ನಡದ ಮೊದಲ ಸಿನಿಮಾ ಎನಿಸಿಕೊಂಡಿತು 'ವಿಕ್ರಾಂತ್ ರೋಣ'.

ಅನುಪ್ ಭಂಡಾರಿ ನಿರ್ದೇಶನ
'ವಿಕ್ರಾಂತ್ ರೋಣ' ಆಕ್ಷನ್ ಥ್ರಿಲ್ಲರ್ ಕತೆಯನ್ನು ಹೊಂದಿದ್ದು ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ನಿರೂಪ್ ಭಂಡಾರಿ, ರವಿಶಂಕರ್, ನೀತಾ ಅಶೋಕ್, ಶ್ರದ್ಧಾ ಶ್ರೀನಾಥ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಇನ್ನಷ್ಟೆ ಘೋಷಿಸಬೇಕಿದೆ. ಸಿನಿಮಾವನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











