ಅಪ್ಪು ಬಗ್ಗೆ ಅಸಭ್ಯ ಮಾತು: ಗರಂ ಆದ ಸುದೀಪ್ ಪುತ್ರಿ
ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ರಾಜ್ಯವೇ ಕಂಬನಿ ಮಿಡಿದಿದೆ. ಪುನೀತ್ ಅಂಥಹಾ ಪ್ರಾಂಜಲ ಮನಸ್ಸಿನ ವ್ಯಕ್ತಿಯೊಬ್ಬ ಇಲ್ಲವಾಗಿದ್ದಕ್ಕೆ ಮನೆ ಮಗನ ಕಳೆದುಕೊಂಡ ಭಾವವನ್ನು ಕರ್ನಾಟಕದ ಕುಟುಂಬಗಳು ಅನುಭವಿಸುತ್ತಿವೆ. ಆದರೆ ಇಂಥಹಾ ವಿಷಮ ಪರಿಸ್ಥಿತಿಯಲ್ಲಿಯೂ ಕೆಲವರು ಪುನೀತ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ನಿಧನವಾದ ಕಾರಣ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಮದ್ಯ ಮಾರಾಟಕ್ಕೆ ಸ್ಥಳೀಯ ಆಡಳಿತ ನಿಷೇಧ ಹೇರಿತು. ಯಾವುದೇ ಅಹಿತಕರ ಘಟನೆಗಳಿಗೆ ಕಾರಣವಾಗಬಾರದು ಎಂಬ ಕಾರಣಕ್ಕೆ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಆದರೆ ಇದನ್ನು ಕೆಲವು ಬೇಜವ್ಬಾರಿ ಕುಡುಕರ ಪುನೀತ್ ನಿಂದನೆಗೆ ಬಳಸಿಕೊಂಡಿದ್ದಾರೆ.
ರಿತ್ವಿಕ್ ಕೆಎಸ್ ಎಂಬ ಕಿಡಿಗೇಡಿಯೊಬ್ಬ ಮದ್ಯದ ಬಾಟಲಿ ಹಿಡಿದು ಫೊಟೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ''ರಾಜ್‌ಕುಮಾರ್ ಸಹ ನಮ್ಮನ್ನು ನಾಳೆ ತಡೆಯಲು ಸಾಧ್ಯವಿಲ್ಲ'' ಎಂದಿದ್ದಾನೆ, ಅದರ ಜೊತೆಗೆ, ''ಅವನ್ನು ನೆನಪಿಟ್ಟುಕೊಳ್ಳುತ್ತೇವೆ, ಮರೆಯುವುದಿಲ್ಲ ಏಕೆಂದರೆ ಈ ಬಾಟಲಿ ಮುಗಿಸಿ ಅವನ ಸಮಾಧಿಯ ಮೇಲೆ ಮೂತ್ರ ವಿಸರ್ಜನೆ ಮಾಡಲಿದ್ದೇವೆ'' ಎಂದು ಪೋಸ್ಟ್ ಹಾಕಿದ್ದಾನೆ.

ಈ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸುದೀಪ್ ಪುತ್ರಿ ಸಾನ್ವಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ, ''ಕೇವಲ ಮದ್ಯಕ್ಕಾಗಿ ಪುನೀತ್ ಅವರ ವಿರುದ್ಧ ಇಂಥಹಾ ಮಾತುಗಳೇ? ಜನರಲ್ಲಿ ಮಾನವೀಯತೆ ಎಂಬುದೇ ಉಳಿದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ ಸಾನ್ವಿ.
ಪುನೀತ್ ವಿರುದ್ಧ ಹಾಕಲಾಗಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದ್ದು, ಪುನೀತ್ ವಿರುದ್ಧ ಪೋಸ್ಟ್ ಮಾಡಿದ ವ್ಯಕ್ತಿ ಕರ್ನಾಟಕದವನಂತೂ ಆಗಿರಲಾರ, ಆತ ಖಂಡಿತ ಉತ್ತರ ಭಾರತದಿಂದ ಬೆಂಗಳೂರಿಗೆ ದುಡಿಯಲು ಬಂದವನಾಗಿರುತ್ತಾನೆ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.
ಸುದೀಪ್ ಕುಟುಂಬ ಹಾಗೂ ಪುನೀತ್ ರಾಜ್‌ಕುಮಾರ್ ಕುಟುಂಬದ ನಡುವೆ ಬಹಳ ಆತ್ಮೀಯತೆ ಇತ್ತು. ಸುದೀಪ್ ಹಾಗೂ ಪುನೀತ್ ರಾಜ್‌ಕುಮಾರ್ ಇಬ್ಬರೂ ಬಾಲ್ಯದ ಗೆಳೆಯರು. ಪುನೀತ್ ಅಗಲಿಕೆಯಿಂದ ಸುದೀಪ್ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಪುನೀತ್ ಜೊತೆಗಿನ ಹಲವು ನೆನಪುಗಳನ್ನು ಅವರು ಹಂಚಿಕೊಂಡಿದ್ದಾರೆ. ಹದಿಮೂರು ವರ್ಷದ ಬಳಿಕ ತಮ್ಮ ಟ್ವಿಟ್ಟರ್ ಖಾತೆಯ ಡಿಪಿ ಬದಲಿಸಿ ಪುನೀತ್ ರಾಜ್‌ಕುಮಾರ್ ಚಿತ್ರವನ್ನು ಹಾಕಿಕೊಂಡಿದ್ದಾರೆ ಸುದೀಪ್.


Click it and Unblock the Notifications











