ನೆಪೋಟಿಸಂ ಅಂದ್ರೆ ರಾಜ್‌ಕುಮಾರ್ ಮಕ್ಕಳನ್ನು ಯಾಕೆ ಕೇಳ್ಲಿಲ್ಲ; ಕಿಚ್ಚ ಸುದೀಪ್ ಕೆಂಡಾಮಂಡಲ
ಕನ್ನಡದಲ್ಲಿ ಈ ವಾರ 'ಮ್ಯಾಂಗೋ ಪಚ್ಚ' ಸಿನಿಮಾ ತೆರೆಗೆ ಬಂದು ಸದ್ದು ಮಾಡ್ತಿದೆ. ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಈ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ. ಮಾವನ ನೆರಳಿನಲ್ಲಿ ಬೆಳೆದ ಸಂಚಿತ್ ಮಾವನಂತೆಯೇ ತೆರೆಮೇಲೆ ಬಂದು ಗಮನ ಸೆಳೆದಿದ್ದಾರೆ. ಚಿತ್ರರಂಗಕ್ಕೆ ಒಳ್ಳೆ ನಟನಾಗುವ ಭರವಸೆ ಮೂಡಿಸಿದ್ದಾರೆ.
ಸಂಚಿತ್ ಸಿನಿಎಂಟ್ರಿ ಬಗ್ಗೆ ಭಾರೀ ಚರ್ಚೆ ನಡೀತಿದೆ. ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಕಿಚ್ಚ ಸುದೀಪ್ ಕೂಡ ಖುಷಿಯಾಗಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಜೊತೆ ಸೇರಿ ತಮ್ಮದೇ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ 'ಮ್ಯಾಂಗೋ ಪಚ್ಚ' ಚಿತ್ರ ನಿರ್ಮಿಸಿದ್ದಾರೆ. ಒಂದೊಳ್ಳೆ ಪ್ರಯತ್ನಕ್ಕೆ ಪ್ರೇಕ್ಷಕರ ಮೆಚ್ಚುಗೆ ವ್ಯಕ್ತವಾಗ್ತಿದೆ. ಸುದ್ದಿಗೋಷ್ಠಿ ನಡೆಸಿ ಸಿನಿಮಾ ಸಕ್ಸಸ್ ಬಗ್ಗೆ ಚಿತ್ರತಂಡ ಮಾತನಾಡಿದೆ. ಇದೇ ವೇಳೆ ನೆಪೋಟಿಸಂ ಪ್ರಶ್ನೆ ಎದುರಾಗಿದೆ. ಕೂಡಲೇ ಸುದೀಪ್ ಗರಂ ಆಗಿದ್ದಾರೆ.

ನೆಪೋಟಿಸಂ ಪ್ರಶ್ನೆ ಎಲ್ಲರಿಗೂ ಕೇಳ್ತೀರಾ? ದೊಡ್ಮನೆಯಿಂದಲೇ ಇದು ಶುರುವಾಯ್ತಲ್ಲ. ನೆಪೋಟಿಸಂ ಅನ್ನೋದು ಇದ್ದಿದ್ರೆ ರಾಜ್‌ಕುಮಾರ್ ಮಕ್ಕಳಿಗೂ ಕೇಳ್ಬೇಕಿತ್ತಲ್ಲ. ಅಂಬಾನಿ ಅವರನ್ನು ಕೇಳಬೇಕು. ಇದು ತಪ್ಪು. ಬಾಂಬೆಯಲ್ಲಿ ಯಾವ್ದೋ ಹುಟ್ಕೊಂಡ್ರೆ ಕರ್ನಾಟಕಕ್ಕೆ ಎಳೆದು ತರಬೇಡಿ. ರಾಜ್‌ಕುಮಾರ್ ಅವರ ಕಾಲದಿಂದಲೂ ನಮ್ಮಲ್ಲಿ ಬಹುಶಃ ಕುಟುಂಬದಲ್ಲಿ ಆ ಯೋಗ್ಯತೆ, ಅರ್ಹತೆ ಇದ್ದು ಕಲೆ ಒಲಿದರೆ, ಕನ್ನಡ ಜನ ಇಷ್ಟಪಟ್ಟರೆ ಮುಗೀತು. ಇದು ಯಾರ ಜಾಗ ಬೇಕಾದರೂ ಆಗಬಹುದು" ಎಂದು ಸುದೀಪ್ ಹೇಳಿದ್ದಾರೆ.
ಇವತ್ತು ಶಿವಣ್ಣ ಮೇರು ನಟ. ನಾವು ಅವರನ್ನು ನೋಡಿ ಸ್ಫೂರ್ತಿ ಪಡೆದಿದ್ದೀವಿ. ಅವರ ಉದಾಹರಣೆ ತಗೊಂಡು ಎಷ್ಟು ಜನ ಬೆಳೀತಿದ್ದಾರೆ. ಅಪ್ಪು ಅವರು ಅದ್ಭುತ ಪ್ರತಿಭೆ. ನೆಪೋಟಿಸಂ ಅನ್ನೋದು ಬರಬಾರದು, ಅವರಿಂದ ಸ್ಫೂರ್ತಿ ಪಡೆದವರು ಸಾಕಷ್ಟು ಜನ ಇದ್ದಾರೆ. ನನ್ನ ಮನೆಯಲ್ಲಿ ಸಂಚಿತ್ ಬಂದಿದ್ದಾನೆ. ಅವನನ್ನು ಬಿಟ್ಟು ಅಕ್ಕನ ಮಕ್ಕಳು, ನನ್ನ ಕಸೀನ್ಸ್ ಮಕ್ಕಳು ಸಾಕಷ್ಟು ಜನ ಇದ್ದಾರೆ. ಯಾರು ಚಿತ್ರರಂಗಕ್ಕೆ ಬಂದಿಲ್ಲ. ಮಗಳು ಚೆನ್ನಾಗಿ ಹಾಡ್ತಾಳೆ, ಹಾಗಾಗಿ ಬಂದಿದ್ದಾಳೆ. ಸಂಚಿತ್‌ಗೆ ನಟನೆಯಲ್ಲಿ ಆಸಕ್ತಿಯಿದೆ, ಬಂದಿದ್ದಾನೆ. ನೆಪೋಟಿಸಂ ಎನ್ನುವ ಪದ ಸುಮಾರು ವರ್ಷಗಳಿಂದ ನಮಗೆ ಸೂಟ್ ಆಗಲ್ಲ. ಕೆಲವರಿಗೆ ಆ ಪದದ ಅರ್ಥ ಕೂಡ ಗೊತ್ತಿಲ್ಲ. ಗೊತ್ತಿರುವುದು ಕಲೆ ಮಾತ್ರ ಎಂದು ಸುದೀಪ್ ತಿರುಗೇಟು ನೀಡಿದ್ದಾರೆ.


Click it and Unblock the Notifications