ಪೈಲ್ವಾನ್ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ ಸುದೀಪ್: ಕಾರಣವೇನು?
Recommended Video
ಹೆಬ್ಬುಲಿ ನಂತರ ನಿರ್ದೇಶಕ ಕೃಷ್ಣ ಜೊತೆ ಕಿಚ್ಚ ಸುದೀಪ್ ಮಾಡಿರುವ ಎರಡನೇ ಸಿನಿಮಾ ಪೈಲ್ವಾನ್. ಸಂಪೂರ್ಣ ಚಿತ್ರೀಕರಣ ಮುಗಿಸಿರುವ ಪೈಲ್ವಾನ್ ಆಗಸ್ಟ್ ಅಂತ್ಯಕ್ಕೆ ತೆರೆಗೆ ಬರಲು ತಯಾರಾಗುತ್ತಿದೆ. ಪಕ್ಕಾ ದಿನಾಂಕ ನಿರ್ಧರಿಸಿಲ್ಲವಾದರೂ ಆಗಸ್ಟ್ 29ಕ್ಕೆ ಟಾರ್ಗೆಟ್ ಮಾಡಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಪ್ರತಿಯೊಂದು ಚಿತ್ರಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸುವ ಸುದೀಪ್ ಪೈಲ್ವಾನ್ ಬಗ್ಗೆ ಸ್ವಲ್ಪ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಪೈಲ್ವಾನ್ ಗಾಗಿ ಸಂಭಾವನೆ ಪಡೆದಿಲ್ಲವಂತೆ.
ಆರಂಭದಲ್ಲಿ ಪೈಲ್ವಾನ್ ಮಾಡೋಣ ಎಂದು ನಿರ್ದೇಶಕ ಕೃಷ್ಣ ಅಪ್ರೋಚ್ ಮಾಡಿದಾಗ, ಬೇಡ ಎಂದು ನಿರಾಕರಿಸಿದ್ದ ಸುದೀಪ್ ಆಮೇಲೆ ಮಾಡೋಣ ಎಂದು ಗ್ರೀನ್ ಸಿಗ್ನಲ್ ನೀಡಿದ್ದರು. ಬಳಿಕ ಜಿಮ್ ಗೆ ಹೋಗಿ, ದೇಹ ದಂಡಿಸಿ, ಸಿಕ್ಸ್ ಪ್ಯಾಕ್ ಮಾಡಿ ಚಿತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ. ಪೈಲ್ವಾನ್ ಬಗ್ಗೆ ಇಷ್ಟೆಲ್ಲ ಕಾಳಜಿ ವಹಿಸಿರುವ ಸುದೀಪ್ ಸಂಭಾವನೆ ಯಾಕೆ ಪಡೆದಿಲ್ಲ.? ಮುಂದೆ ಓದಿ....

ಬೇಡ ಎಂದವರು ಮಾಡೋಣ ಅಂದ್ರು
ಪೈಲ್ವಾನ್ ಪಾತ್ರ ಅಂದ್ರೆ ಬಟ್ಟೆ ಬಿಚ್ಚಬೇಕು. ಬರಿ ಮೈನಲ್ಲಿ ನಟಿಸಬೇಕು ಎಂಬ ಕಾರಣಕ್ಕೆ ಸುದೀಪ್ ಈ ಚಿತ್ರವನ್ನ ನಿರಾಕರಿಸಿದ್ದರು. ನಂತರ ಸ್ಕ್ರಿಪ್ಟ್ ಬಿಡಲು ಮನಸ್ಸಾಗದೇ ಮಾಡೋಣ ಎಂದು ಧೈರ್ಯ ಮಾಡಿದ್ರು. ಸರಿ ಅಂತ ಸಿನಿಮಾ ಒಪ್ಪಿದ ಸುದೀಪ್ ಈ ಚಿತ್ರವನ್ನ ಯಾರು ನಿರ್ಮಾಣ ಮಾಡಿದ್ರೆ ಸೂಕ್ತ ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದರಂತೆ.

ಸಂಭಾವನೆ ಬಿಡು, ಸಿನಿಮಾ ಮಾಡು
ಮೂರ್ನಾಲ್ಕು ಜನ ನಿರ್ಮಾಪಕರ ಜೊತೆ ಚರ್ಚೆಯಲ್ಲಿದ್ದ ಕೃಷ್ಣ ಅವರಿಗೆ, ಈ ಚಿತ್ರವನ್ನ ನೀನೆ ಮಾಡು ಎಂದು ಸುದೀಪ್ ಸೂಚಿಸಿದರಂತೆ. ಇಷ್ಟು ದೊಡ್ಡ ಬಜೆಟ್ ಸಿನಿಮಾ ನಿರ್ಮಿಸಲು ನನ್ನ ಹತ್ರ ಅಷ್ಟು ಹಣ ಇಲ್ಲ ಎಂದು ಕೃಷ್ಣ ಆತಂಕಗೊಂಡರಂತೆ. ಪರವಾಗಿಲ್ಲ, ನನಗೆ ದುಡ್ಡು ಕೊಡಬೇಡ. ಸಿನಿಮಾ ಚೆನ್ನಾಗಿ ಮಾಡು, ಆಮೇಲೆ ಕೊಡು'' ಎಂದು ಧೈರ್ಯ ತುಂಬಿದರಂತೆ.

ಸುದೀಪ್ ಧೈರ್ಯದಿಂದ ಶುರುವಾಗಿದ್ದೇ ಆರ್.ಆರ್.ಆರ್
ಸುದೀಪ್ ಅವರು ನೀಡಿದ ಆ ಧೈರ್ಯದಿಂದ ನಿರ್ದೇಶಕ ಕೃಷ್ಣ ನಿರ್ಮಾಣ ಸಂಸ್ಥೆ ಹುಟ್ಟುಹಾಕಲು ಮುಂದಾದರು. ಆಗಲೇ ಹುಟ್ಟಿಕೊಂಡಿದ್ದು ಆರ್.ಆರ್.ಆರ್ ಮೋಷನ್ ಪಿಕ್ಚರ್ ಸಂಸ್ಥೆ. ಪೈಲ್ವಾನ್ ಈ ಸಂಸ್ಥೆಯ ಮೊದಲ ಚಿತ್ರ. ಕೃಷ್ಣ ಅವರ ಪತ್ನಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸುದೀಪ್ ಅವರು ಸಂಭಾವನೆ ಪಡೆಯದೇ ಈ ಚಿತ್ರದಲ್ಲಿ ಕೆಲಸ ಮಾಡಿದ್ದು, ನಿರ್ದೇಶಕರಾಗಿದ್ದ ಕೃಷ್ಣ ಅವರನ್ನ ನಿರ್ಮಾಪಕರಾಗಿಯೂ ಪ್ರಮೋಟ್ ಮಾಡಿದ್ದಾರೆ.

ಸಂಭಾವನೆ ಸದ್ಯಕ್ಕೆ ಪಡೆದಿಲ್ಲ
ಸದ್ಯದವರೆಗೂ ಸುದೀಪ್ ಪೈಲ್ವಾನ್ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ. ಇದನ್ನ ಸ್ವತಃ ನಿರ್ದೇಶಕರೇ ಸ್ಪಷ್ಟಪಡಿಸಿದ್ದಾರೆ. ಸಿನಿಮಾ ರಿಲೀಸ್ ಆಗಿ ಸಕ್ಸಸ್ ಆದ್ಮೇಲೆ ಕೃಷ್ಣ ಅವರು ಸಂಭಾವನೆ ಹಣವನ್ನೇ ಕೊಡ್ತಾರೋ ಅಥವಾ ವಿಶೇಷವಾದ ಉಡುಗೊರೆ ಕೊಡ್ತಾರೋ ಗೊತ್ತಿಲ್ಲ. ಅಥವಾ ಸುದೀಪ್ ಅವರು ಕೂಡ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೋ ಅದೂ ಕೂಡ ನಿಗೂಢವಾಗಿಯೇ ಉಳಿದಿದೆ.


Click it and Unblock the Notifications











