'ಮದಕರಿ' ಚಿತ್ರವನ್ನ ಕೈಬಿಡಲು ಕಾರಣ ಬಿಚ್ಚಿಟ್ಟ ಸುದೀಪ್
Recommended Video

ಚಿತ್ರದುರ್ಗದ ಪಾಳೇಗಾರ 'ಮದಕರಿ ನಾಯಕ'ನ ಕುರಿತು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರು ಸಿನಿಮಾ ಮಾಡುತ್ತಿರುವ ಸುದ್ದಿ ಕೇಳಿದ್ವಿ. ಒಂದು ಕಡೆ ರಾಕ್ ಲೈನ್ ವೆಂಕಟೇಶ್ ಮತ್ತು ದರ್ಶನ್, ಇನ್ನೊಂದು ಕಡೆ ಸುದೀಪ್ ಹೋಮ್ ಬ್ಯಾನರ್ ನಲ್ಲಿ ಈ ಸಿನಿಮಾ ಮಾಡಲು ನಿರ್ಧರಿಸಿದ್ದರು.
ಇದಕ್ಕೆ ಬೇಕಾದ ಎಲ್ಲ ತಯಾರಿಗಳನ್ನ ಎರಡೂ ತಂಡದವರು ಮಾಡಿಕೊಂಡಿದ್ದರು. ಇನ್ನೇನೂ ಶೂಟಿಂಗ್ ಶುರು ಮಾಡ್ತಾರೆ ಅನ್ನೋ ಸಮಯದಲ್ಲಿ ಈಗ ಸುದೀಪ್ ಕತ್ತಿ ಕೆಳಗಿಟ್ಟಿದ್ದಾರೆ.
'ಮದಕರಿ ಚಿತ್ರವನ್ನ ನಾನು ಮಾಡಲ್ಲ' ಎಂದು ಹೇಳಿದ್ದಾರೆ. ಹಲವು ವರ್ಷಗಳಿಂದ ಈ ಪ್ರಾಜೆಕ್ಟ್ ಮೇಲೆ ಕೆಲಸ ಮಾಡಿ, ಒಂದು ಸಿನಿಮಾ ಬರ್ತಿದೆ ಅಂತ ಗೊತ್ತಾದಮೇಲೂ ಇರಲಿ, ನಾವು ಆ ಕಥೆಯನ್ನ ಹೇಳ್ತೀವಿ ಎಂದು ಘೋಷಿಸಿ, ಈಗ ಬೇಡ ಎಂದು ಹಿಂದೆ ಸರಿದಿದ್ದಾರೆ. ಅಂದ್ಹಾಗೆ, ದಿಢೀರ್ ಅಂತ ಸುದೀಪ್ ಯಾಕೆ ಈ ಸಿನಿಮಾ ಮಾಡಲ್ಲ ಅಂದ್ರು? ಕಾರಣನೂ ತಿಳಿಸಿದ್ದಾರೆ ಮುಂದೆ ಓದಿ......

ರಾಕ್ ಲೈನ್ ಬಳಿ ಹೇಳಿದ್ದೀನಿ
''ಮದಕರಿ ನಾಯಕನ ಕುರಿತು ಸಿನಿಮಾ ಮಾಡಬೇಕು ಎಂದು ತುಂಬಾ ಆಸೆ ಪಟ್ಟಿದ್ದು ನಿಜ. ಆದ್ರೆ, ಅದ್ಯಾಕೋ ಈಗ ಬೇಡ ಅನಿಸುತ್ತಿದೆ. ರಾಕ್ ಲೈನ್ ವೆಂಕಟೇಶ್ ಅವರು ಸಿಕ್ಕಾಗ ಅವರ ಬಳಿ ಹೇಳಿದೆ, ನಾನು ಮಾಡಲ್ಲ ನೀವೇ ಮಾಡಿ, ಚೆನ್ನಾಗಿ ಮಾಡಿ'' ಅಂತ.

ಒಬ್ಬರು ಕತ್ತಿ ಕೆಳಗೆ ಹಾಕಬೇಕು
''ಎರಡು ಊರು ಮಧ್ಯೆ ಜಗಳ ಆಗ್ತಿದ್ರೆ ಒಬ್ಬರು ಕತ್ತಿ ಕೆಳಗೆ ಬಿಡಬೇಕಾಗುತ್ತೆ ಅನ್ನೋದನ್ನ ನಾನು ನಂಬುತ್ತೇನೆ. ಎಷ್ಟೋ ಜನ ಸಾಧಕರು ಬಂದ್ರು, ಸಾಧನೆ ಮಾಡಿದ್ರು ಹೋದ್ರು. ಈಗ ಅದಕ್ಕಾಗಿ ಕಿತ್ತಾಟ ಬೇಡ ಅನಿಸ್ತು. ಅದಕ್ಕೆ ನನ್ನ ಹಠ, ರೋಷ ಆಗಲಿ ಸತ್ತಿಲ್ಲ. ಅದನ್ನ ಮಾಡೋ ಸಿನಿಮಾದಲ್ಲಿ ಹಾಕೋಣ''

ಕಥೆಗೆ ಧಕ್ಕೆ ಬರಬಾರದು
''ಯಾವುದೋ ಬಯೋಪಿಕ್ ಆಗಲಿ, ಐತಿಹಾಸಿಕ ಆಗಲಿ ಮಾಡ್ತಿದ್ರೆ ಅದು ದೊಡ್ಡ ಜವಾಬ್ದಾರಿ. ಅದನ್ನ ಅವರು ಮಾಡ್ತಿದ್ದಾರೆ, ಮಾಡಲಿ. ಅದನ್ನ ಯಾರೇ ಮಾಡಿದ್ರು ನನಗೆ ಸಮಸ್ಯೆ ಏನೂ ಇಲ್ಲ. ನನಗೆ ಆಮೇಲೆ ಅನಿಸ್ತು, ಇದೆರೆಡರ ಮಧ್ಯೆ ಒಳ್ಳೆ ಕಥೆ ಸತ್ತೋಗಬಿಡುತ್ತಾ ಅಂತ''

ಸುಮ್ಮನೆ ವಿವಾದ ಆಗ್ತಿದೆ
ವಿವಾದ ಮಾಡ್ಬೇಕು ಅಂತ ಅವರ ತಲೆಯಲ್ಲೂ ಇಲ್ಲ. ನಮ್ಮ ತಲೆಯಲ್ಲೂ ಇಲ್ಲ. ಆದ್ರೂ ಅದಾಗ್ತಿದೆ. ಈ ಚಿತ್ರದ ಮೇಲೆ ಹಲವು ವರ್ಷ ಕೆಲಸ ಆಗಿದೆ. ನಾನೊಬ್ಬನೇ ಅಲ್ಲ, ತುಂಬಾ ಜನರ ಶ್ರಮ ಇದೆ. ಅವರಿಗೂ ನಿರಾಸೆ ಇತ್ತು. ಬಟ್, ಬೇಡ ಅಂತ ಹೇಳಿದೆ.

ಕಥೆ ಹೇಳಬಹುದು ಅನಿಸಿದ್ರೆ ಮತ್ತೆ ಮಾಡೋಣ
''ಇನ್ನು ಮುಂದೆ ಈ ಚಿತ್ರವನ್ನ ಯಾರೂ ಮಾಡೋದಿಲ್ಲ ಅಥವಾ ನಾವೇ ಮಾಡೋದಿಲ್ಲ ಅಂತಲ್ಲ. ಅಕಸ್ಮಾತ್ ಆ ಸಿನಿಮಾ ನೋಡಿದ ಮೇಲೆ, ಓಹ್ ಇನ್ನು ಕಥೆ ಹೇಳೋದು ಇದೆ ಅನಿಸಿದ್ರೆ ಆಗ ಯೋಚನೆ ಮಾಡೋಣ. ಯಾಕಂದ್ರೆ, ಸಿನಿಮಾ ಅನ್ನೋದು ದೊಡ್ಡ ಎಫರ್ಟ್. ತುಂಬಾ ದುಡ್ಡ ಖರ್ಚು ಮಾಡಬೇಕಾಗುತ್ತೆ. ಸುಮ್ಮನೇ ದುಡ್ಡ ವ್ಯರ್ಥ ಆಗಬಾರದು. ಅದೇ ಹಣದಿಂದ ಇನ್ನೊಂದು ಸಿನಿಮಾ ಮಾಡಬಹುದು'' ಎಂದು ಸುದೀಪ್ ಸ್ಪಷ್ಟನೆ ನೀಡಿದರು.


Click it and Unblock the Notifications











