»   » ಸಬ್ ಟೈಟಲ್‌ನಲ್ಲಿ ಸುದೀಪ್ ತೆಲುಗು ಚಿತ್ರ 'ಈಗ'

ಸಬ್ ಟೈಟಲ್‌ನಲ್ಲಿ ಸುದೀಪ್ ತೆಲುಗು ಚಿತ್ರ 'ಈಗ'

Posted By:
Subscribe to Filmibeat Kannada
ಕರ್ನಾಟಕದಲ್ಲಿ ಡಬ್ಬಿಂಗ್‌ ಚಿತ್ರಗಳಿಗೆ ಬಾಗಿಲು ಮುಚ್ಚಿ ಚಿಲಕ ಹಾಕಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಡಬ್ಬಿಂಗ್ ಬೇಕೇ ಬೇಕು ಎಂದು ಬೊಬ್ಬೆ ಮೇಲೆ ಬೊಬ್ಬೆ ಹೊಡೆಯುತ್ತಿದ್ದರೂ ಕವಡೆಕಾಸಿನ ಪ್ರಯೋಜನವಾಗಿಲ್ಲ. ಆದರೇನಂತೆ ಸಬ್ ಟೈಟಲ್‌ನಲ್ಲಿ ಚಿತ್ರಗಳು ಬಿಡುಗಡೆಯಾಗುವ ಹೊಸ ದಾರಿ ಕಂಡುಕೊಂಡಿವೆ. ಈಗಾಗಲೆ ಈ ಪ್ರಯೋಗವನ್ನು ಜನಶ್ರೀ ವಾಹಿನಿ 'ಮಾಲ್ಗುಡಿ ಡೇಸ್' ಮೂಲಕ ಪ್ರಯೋಗಿಸಿದೆ.

ಕಿಚ್ಚ ಸುದೀಪ್ ಅಭಿನಯದ ತೆಲುಗು ಹಾಗೂ ತಮಿಳು ದ್ವಿಭಾಷಾ ಚಿತ್ರ 'ಈಗ' ಜುಲೈ 6ರಂದು ತೆರೆಕಾಣುತ್ತಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರ ಚಿತ್ರೋದ್ಯಮದಲ್ಲಿ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಈ ಚಿತ್ರದ ಕರ್ನಾಟಕದ ವಿತರಣೆ ಹಕ್ಕುಗಳು ಸುರೇಶ್ ಬಾಬು ಪಾಲಾಗಿವೆ. ಕರ್ನಾಟಕದಲ್ಲಿ ಒಟ್ಟು 100 ಪ್ರಿಂಟ್‌ಗಳೊಂದಿಗೆ ಸುರೇಶ್ ಡಿಸ್ಟ್ರಿಬ್ಯೂಟರ್ಸ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ವಿಶೇಷ ಎಂದರೆ ಸುದೀಪ್ ಚಿತ್ರ ಇದೇ ಮೊದಲ ಬಾರಿಗೆ ಇಂಗ್ಲಿಷ್ ಸಬ್ ಟೈಟಲ್‌ಗಳೊಂದಿಗೆ ಬಿಡುಗಡೆಯಾಗುತ್ತಿದೆ.

ದೇಶದಾದ್ಯಂತ ಈ ಚಿತ್ರವನ್ನು ಮೂರು ಆವೃತ್ತಿಗಳಲ್ಲಿ 1200 ಪ್ರಿಂಟ್‌ಗಳೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. "ತೆಲುಗು, ತಮಿಳು ಹಾಗೂ ಮಲಯಾಳಂ ಬಿಡುಗಡೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಸುದೀಪ್ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಇಂಗ್ಲಿಷ್ ಸಬ್ ಟೈಟಲ್‌ಗಳೊಂದಿಗೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ" ಎನ್ನುತ್ತಾರೆ ವಿತರಕ ಸುರೇಶ್ ಬಾಬು.

ಆಂಧ್ರಪ್ರದೇಶದಲ್ಲಿ ಒಟ್ಟು 400 ರಿಂದ 500 ಪ್ರಿಂಟ್‌ಗಳು ಹಾಗೂ ತಮಿಳುನಾಡಿನಲ್ಲಿ 250 ಪ್ರಿಂಟ್‌ಗಳೊಂದಿಗೆ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ತೆಲುಗು ಪ್ರಭಾವ ಇರುವ ಪ್ರದೇಶಗಳಲ್ಲಿ ತೆಲುಗು ಆವೃತ್ತಿ ಬಿಡುಗಡೆಯಾಗಲಿದೆ ಎಂದು ಅವರು ಹೈದರಾಬಾದಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಮಿಳಿನಲ್ಲಿ ಚಿತ್ರಕ್ಕೆ 'ನಾನ್ ಈ' ಎಂದೂ ಮಲಯಾಳಂನಲ್ಲಿ 'ಈಚ' ಎಂದೂ ಹೆಸರಿಡಲಾಗಿದೆ. ಕರ್ನಾಟದಲ್ಲಿ 'ಈಗ' ಚಿತ್ರ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕದ ವಿತರಣೆ ಹಕ್ಕುಗಳು ಎಷ್ಟಕ್ಕೆ ಸೇಲಾಗಿವೆ ಎಂಬ ವಿವರಗಳನ್ನು ಸುರೇಶ್ ಬಹಿರಂಗಪಡಿಸಿಲ್ಲ.

ಅತ್ಯಾಧುನಿಕ ಆನಿಮೇಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರ ಇದಾಗಿದೆ. ರಾಜಮೌಳಿ ಚಿತ್ರಗಳಿಗೆ ಅವರದೇ ಆದಂತಹ ಪ್ರೇಕ್ಷಕವರ್ಗವೂ ಇದೆ. ಈಗಾಗಲೆ ಪರಭಾಷೆಗಳಲ್ಲಿ ಗುರುತಿಸಿಕೊಂಡಿರುವ ಸುದೀಪ್ ವೃತ್ತಿಜೀವನದಲ್ಲಿ 'ಈಗ' ಚಿತ್ರ ಭಾರಿ ಬ್ರೇಕ್ ನೀಡಲಿರುವ ನಿರೀಕ್ಷೆಗಳಿವೆ.

ಎಂಎಂ ಕೀರವಾಣಿ ಸಂಗೀತ ಸಂಯೋಜನೆ ಇರುವ ಈ ಚಿತ್ರದಲ್ಲಿ ಸುದೀಪ್‌ಗೆ ಜೋಡಿ ಸಮಂತಾ. ನಾನಿ ಎಂಬ ಮತ್ತೊಬ್ಬ ನಟನೂ ಚಿತ್ರದಲ್ಲಿ ಕಾಣಿಸಲಿದ್ದಾನೆ. ಗ್ರಾಫಿಕ್ಸ್‌ಗೆ ಸಾಕಷ್ಟು ಒತ್ತುಕೊಟ್ಟಿರುವ ಈ ಚಿತ್ರದಲ್ಲಿ ಸುದೀಪ್ ಪಾತ್ರ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನಗೆಲ್ಲುತ್ತದೆ ಎಂಬುದನ್ನು ಕಾದುನೋಡೋಣ. (ಏಜೆನ್ಸೀಸ್)

English summary
Kannada actor Sudeep's Telugu and Tamil bilingual film Eega releasing with English subtitles in Karnataka says Suresh Babu of Suresh Distributors. Eega will be released all over the world on July 6 with nearly 100 screens in Karnataka alone.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada