'ಹೆಬ್ಬುಲಿ' ಬ್ಯಾನರ್‌ನಲ್ಲೇ ದರ್ಶನ್ ಫ್ಯಾನ್ಸ್‌ಗೆ ಸುದೀಪ್ ಫ್ಯಾನ್ಸ್ ತಿರುಗೇಟು!
ಕಿಚ್ಚ ಸುದೀಪ್ ನಟನೆಯ 'ಹೆಬ್ಬುಲಿ' ಸಿನಿಮಾ ರೀ ರಿಲೀಸ್ ಆಗಿದೆ. ಕೆಜಿ ರಸ್ತೆಯ ನರ್ತಕಿ ಸೇರಿದಂತೆ ಕೆಲವರು ಚಿತ್ರಮಂದಿರಗಳಲ್ಲಿ ಸಿನಿಮಾ ಮತ್ತೆ ತೆರೆಗಪ್ಪಳಿಸಿದೆ. ಸುದೀಪ್ ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಿ ಸಂಭ್ರಮಿಸುತ್ತಿದ್ದಾರೆ. 7 ವರ್ಷಗಳ ಹಿಂದೆ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಕೃಷ್ಣ ನಿರ್ದೇಶನದ 'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಸೈನಿಕನ ಪಾತ್ರದಲ್ಲಿ ನಟಿಸಿದ್ದರು. ಅಮಲಾ ಪೌಲ್ ನಾಯಕಿಯಾಗಿ ಮಿಂಚಿದ್ದಾರೆ. ಸದ್ಯ ದೊಡ್ಡ ಸಿನಿಮಾಗಳು ಬಾರದೇ ಹಳೇ ಹಿಟ್ ಸಿನಿಮಾಗಳನ್ನು ರೀ ರಿಲೀಸ್ ಮಾಡುವ ಟ್ರೆಂಡ್ ನಡೀತಿದೆ. 'ಜಾಕಿ', 'ಎ', 'ಶಾಸ್ತ್ರಿ' ಸೇರಿದಂತೆ ಹಲವು ಸಿನಿಮಾಗಳು ಮತ್ತೆ ತೆರೆಗೆ ಬಂದು ಅಭಿಮಾನಿಗಳನ್ನು ರಂಜಿಸಿವೆ. ಮುಂದೆ ಮತ್ತಷ್ಟು ಸಿನಿಮಾಗಳನ್ನು ಮರು ಬಿಡುಗಡೆ ಮಾಡುವ ಪ್ರಯತ್ನಗಳು ನಡೀತಿದೆ.

2017ರಲ್ಲಿ ಬಿಡುಗಡೆಯಾಗಿದ್ದ 'ಹೆಬ್ಬುಲಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಬಹಳ ಬೇಗ 50 ಕೋಟಿ ರೂ. ಕಲೆಕ್ಷನ್ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇನ್ನು ಸುದೀಪ್ ಹೇರ್‌ಸ್ಟೈಲ್ ಹೊಸ ಟ್ರೆಂಡ್ ಹುಟ್ಟು ಹಾಕಿತ್ತು. ಚಿತ್ರದ ಆಲ್ಬಮ್ ಹಿಟ್ ಆಗಿ ಚಿತ್ರಕ್ಕೆ ಪ್ಲಸ್ ಆಗಿತ್ತು.
ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ತಡವಾಗುತ್ತಿದೆ. ಅಕ್ಟೋಬರ್‌ನಲ್ಲಿ ಕಿಚ್ಚ ಮತ್ತೆ ತೆರೆಮೇಲೆ ಅಬ್ಬರಿಸೋಕೆ ಬರ್ತಿದ್ದಾರೆ. ಇದರ ನಡುವೆ 'ಹೆಬ್ಬುಲಿ'ಯಾಗಿ ಇದೀಗ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ. ಇನ್ನು ಸಿನಿಮಾ ಬಿಡುಗಡೆ ಸಮಯದಲ್ಲಿ ಸುದೀಪ್ ಅಭಿಮಾನಿಗಳು ನರ್ತಕಿ ಚಿತ್ರಮಂದಿರದ ಮುಂದೆ ಹಾಕಿರುವ ಬ್ಯಾನರ್ ಭಾರೀ ವೈರಲ್ ಆಗುತ್ತಿದೆ. ಅದರ ಮೇಲೆ ಬರೆಸಿರುವ ಒಂದು ಸಾಲು ಹುಬ್ಬೇರಿಸುವಂತಿದೆ.

ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಶೀತಲ ಸಮರ ನಡೆಯುತ್ತಿರುವುದೇ ಗೊತ್ತೇಯಿದೆ. ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೆ ಈ ವಿಚಾರ ಚರ್ಚೆ ಆಗುತ್ತಿರುತ್ತದೆ. ಪರಸ್ಪರ ಕೆಸರೆರಚಾಟ ನಡೆಯುತ್ತಿರುತ್ತದೆ. ನಮ್ಮ ಹೀರೊನೇ ಗ್ರೇಟ್ ಎಂದು ಹೇಳುವ ಭರದಲ್ಲಿ ಮತ್ತೊಬ್ಬ ನಟನನ್ನು ಅವರ ಅಭಿಮಾನಿಗಳನ್ನು ಕೆಣಕುವ ಕೆಲಸ ಆಗುತ್ತಲೇ ಇರುತ್ತದೆ. ಸದ್ಯ 'ಹೆಬ್ಬುಲಿ' ರೀ-ರಿಲೀಸ್ ಹಿನ್ನೆಲೆಯಲ್ಲಿ ಚಿತ್ರಮಂದಿರದ ಮುಂದೆ ಹಾಕಿರುವ ಬ್ಯಾನರ್ ಇಂತದ್ದೇ ಚರ್ಚೆ ಹುಟ್ಟಾಕಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರುವಂತಾಗಿದೆ. ವಿಚಾರಣಧೀನ ಕೈದಿ 6106 ಸಂಖ್ಯೆ ಕೊಟ್ಟಿದ್ದಾರೆ. ಆದರೆ ಅಭಿಮಾನಿಗಳು 'ಕೈದಿ 6106' ಎನ್ನುವುದನ್ನು ಟ್ರೆಂಡ್ ಮಾಡುತ್ತಿದ್ದಾರೆ. ಬೈಕ್, ಕಾರ್ ಮೇಲೆ ಸ್ಟಿಕ್ಕರ್ ಮಾಡಿಸಿ ಅಂಟಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಂಡವರು ಇದ್ದಾರೆ. ಇದೇ ಸಂಖ್ಯೆ ಟ್ರೆಂಡ್ ಮಾಡಿ ಮಗುವಿನ ಫೋಟೊಶೂಟ್ ಮಾಡಿದ್ದು ವೈರಲ್ ಆಗಿತ್ತು.
ದರ್ಶನ್ ಅಭಿಮಾನಿಗಳು 'ಕೈದಿ 6106' ಎನ್ನುವುದನ್ನು ಟ್ರೆಂಡ್ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ಟಾಂಗ್ ಕೊಟ್ಟು ಸುದೀಪ್ ಫ್ಯಾನ್ಸ್ ಥಿಯೇಟರ್ ಮುಂದೆ ಬ್ಯಾನರ್ ಕೊಟ್ಟಿದ್ದಾರೆ. 'ಹೆಬ್ಬುಲಿ' ಬ್ಯಾನರ್‌ನಲ್ಲಿ ನಾನು ಕೈದಿಯಲ್ಲ, ಸೈನಿಕ ಎಂದು ಬರೆಸಲಾಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ದರ್ಶನ್ ಫ್ಯಾನ್ಸ್‌ಗೆ ತಿರುಗೇಟು ಕೊಡಲು ಈ ರೀತಿ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮಾತಿಗೆ ಮಾತು, ಏಟಿಗೆ ಎದುರೇಟು ಕೊಡುತ್ತಿದ್ದ ಅಭಿಮಾನಿಗಳು ಇದೀಗ ಈ ರೀತಿ ಬ್ಯಾನರ್‌ನಲ್ಲಿ ಬರೆದು ಸಂಭ್ರಮಿಸುವುದು ತಪ್ಪಲ್ಲ. ಇದು ನಿಜಕ್ಕೂ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ. ಈ ಬಗ್ಗೆ ಸ್ಟಾರ್ ನಟರೇ ತಮ್ಮ ಅಭಿಮಾನಿಗಳಿಗೆ ಕಿವಿಮಾತು ಹೇಳಬೇಕಿದೆ.


Click it and Unblock the Notifications











