ಪ್ರಭಾಸ್ ಜೊತೆ ನಟಿಸಲು ಸಿದ್ಧ ಎಂದ ಸುದೀಪ್? ಆದರೆ ಒಂದು ಕಂಡೀಷನ್!
ಥಿಯೇಟರ್‌ಗಳಲ್ಲಿ 'ವಿಕ್ರಾಂತ್ ರೋಣ'ನ ಕಾರುಬಾರು ಜೋರಾಗಿದೆ. ಅನೂಪ್ ಭಂಡಾರಿ ಕಲ್ಪನೆಯ ಫ್ಯಾಂಟಮ್ ಪ್ರಪಂಚದಲ್ಲಿ ಕಿಚ್ಚನ ಆರ್ಭಟ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಮತ್ತೊಂದ್ಕಡೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸುದೀಪ್, ಬಾಹುಬಲಿ ಪ್ರಭಾಸ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದು, ಒಂದು ಷರತ್ತನ್ನು ವಿಧಿಸಿದ್ದಾರೆ.
2500ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಆಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಅಭಿಮಾನಿಗಳು ಥಿಯೇಟರ್ ಅಂಗಳದಲ್ಲಿ ಹಬ್ಬದ ರೀತಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ಕೂಡ ಸಿನಿಮಾ ನೋಡಿ ಖುಷಿಯಾಗಿದ್ದಾರೆ. ಬೇರೆ ಭಾಷೆಯ ಸ್ಟಾರ್ ಕಲಾವಿದರು ರೋಣನ ಆರ್ಭಟ ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಚಿತ್ರಕ್ಕೆ ಸಿಕ್ಕಿರೋ ರೆಸ್ಪಾನ್ಸ್ ನೋಡ್ತಿದ್ರೆ, ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ.
ಇನ್ನು ಭಾರತೀಯ ಚಿತ್ರರಂಗದಲ್ಲೀಗ ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ ಶುರುವಾಗಿದೆ. ಕಲಾವಿದರು ಭಾಷೆಯ ಗಡಿ ದಾಟಿ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ದಶಕಗಳ ಹಿಂದೆಯೇ ಬಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ಕಿಚ್ಚ ಸುದೀಪ್ ನಟಿಸಿ ಗೆದ್ದಿದ್ದಾರೆ. ರಾಮ್‌ಗೋಪಾಲ್ ವರ್ಮಾ, ಎಸ್. ಎಸ್ ರಾಜಮೌಳಿ ರೀತಿಯ ಖ್ಯಾತ ಫಿಲ್ಮ್ ಮೇಕರ್‌ಗಳ ನಿರ್ದೇಶನದಲ್ಲಿ ಬಾದ್‌ಶಾ ಬಣ್ಣ ಹಚ್ಚಿ ಮೋಡಿ ಮಾಡಿದ್ದಾರೆ. ಬಾಲಿವುಡ್‌ನ ಪಿಂಕ್ ವಿಲ್ಲಾ ವೆಬ್ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಸುದೀಪ್ ಬೇರೆ ಸೂಪರ್ ಸ್ಟಾರ್‌ಗಳ ಜೊತೆ ನಟಿಸೋ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಜೊತೆ ನಟಿಸೋ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ ಅಂತ ಹೇಳಿದ್ದಾರೆ.

ನಾನು- ಪ್ರಭಾಸ್ ಶತ್ರುಗಳಲ್ಲ!
'ವಿಕ್ರಾಂತ್ ರೋಣ' ಸಿನಿಮಾ ಪ್ರಚಾರದ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ಸುದೀಪ್ ಮಾತನಾಡಿದ್ದಾರೆ. ಬೇರೆ ಬೇರೆ ವಿಷಯಗಳ ಬಗ್ಗೆಯೂ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಿಂಕ್ ವಿಲ್ಲಾ ವೆಬ್ಸೈಟ್ ಸಂದರ್ಶನದಲ್ಲಿ ಪ್ರಭಾಸ್ ಜೊತೆ ಅವಕಾಶ ಸಿಕ್ಕಿದ್ರೆ ನಟಿಸ್ತೀರಾ ಅನ್ನುವ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಉತ್ತರಿಸುವ ಸುದೀಪ್ "ನಾನು- ಪ್ರಭಾಸ್ ಶತ್ರುಗಳಂತೆ ಕಾಣ್ತೀವಾ? ಅವರು ತುಂಬಾ ಒಳ್ಳೆಯ ವ್ಯಕ್ತಿ, ಒಮ್ಮೆ ನಾನವರನ್ನು ಭೇಟಿ ಮಾಡಿದ್ದೇನೆ. ಇಬ್ಬರಿಗೂ ಒಳ್ಳೆ ಸ್ಟಫ್ ಸಿಕ್ಕರೆ ಖಂಡಿತ ನಾನು ನಟಿಸೋಕೆ ಸಿದ್ಧ. ಆದರೆ ಒಂದು ಷರತ್ತು" ಅಂತ ಹೇಳಿದ್ದಾರೆ.

ಪ್ರಭಾಸ್ ಜೊತೆ ನಟಿಸೋಕೆ ಕಿಚ್ಚನ ಷರತ್ತು!
ಮಾತು ಮುಂದುವರೆಸಿರುವ ಸುದೀಪ್ "ಪ್ರಭಾಸ್ ಜೊತೆ ನಟಿಸೋಕೆ ಸಿದ್ಧ, ಆದರೆ ಖಳನಾಯಕನಾಗಿ ಅಲ್ಲ. 'ದಬಾಂಗ್ - 3' ಸಿನಿಮಾದಲ್ಲಿ ನಾನು ಖಳನಟನಾಗಿ ನಟಿಸಿದ್ದೇನೆ. ಆದನೆ ನಾನು ನಾಯಕ ನಟ. ನೆಗೆಟೀವ್ ಶೇಡ್‌ನಲ್ಲಿ ನಟಿಸೋದು ನನಗೆ ಸಮಸ್ಯೆ ಅಲ್ಲ. ಆದರೆ ಸಂಪೂರ್ಣವಾಗಿ ಖಳನಾಯಕನಾಗಿ ನಟಿಸುವುದಿಲ್ಲ. ಒಮ್ಮೆ ಮಾತ್ರ 'ದಬಾಂಗ್ - 3' ಚಿತ್ರದಲ್ಲಿ ಸಂಪೂರ್ಣ ಖಳನಾಯಕನಾಗಿ ನಟಿಸಿದ್ದೆ. ಸಲ್ಮಾನ್ ಖಾನ್ ಸರ್ ಮೇಲಿನ ಪ್ರೀತಿಯಿಂದ ಮಾಡಿದ್ದೆ. ಇಲ್ಲ ಅಂದರೆ ಮಾಡುತ್ತಿರಲಿಲ್ಲ. ಬೇರೆಯವರ ಜೊತೆ ಒಳ್ಳೆ ಪಾತ್ರ ಆದರೆ ಮಾತ್ರ ನಟಿಸುತ್ತೇನೆ" ಎಂದಿದ್ದಾರೆ.

ಸುದೀಪ್ ನಿರ್ದೇಶನದಲ್ಲಿ ಸಲ್ಲು
ಹಿಂದೆ ಒಮ್ಮೆ ಸಲ್ಮಾನ್ ಖಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಬಗ್ಗೆ ಸುದೀಪ್ ಮಾತನಾಡಿದ್ದರು. ಇದೇ ವಿಚಾರವನ್ನು ಮತ್ತೆ ಕೇಳಿದಾಗ 'ಖಂಡಿತ ಆ ಪ್ರಯತ್ನದಲ್ಲಿ ನಾನಿದ್ದೀನಿ, ಸಲ್ಮಾನ್ ಸರ್ ಬೇರೆ ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಕಥೆ, ಚಿತ್ರಕಥೆ ಸಿದ್ಧವಾಗಿ ಎಲ್ಲಾ ಕೂಡಿ ಬಂದಾಗ ಖಂಡಿತ ಅವರ ಸಿನಿಮಾ ನಿರ್ದೇಶನ ಮಾಡ್ತೀನಿ' ಎಂದಿದ್ದಾರೆ.

'ವಿಕ್ರಾಂತ್ ರೋಣ' ಸಲ್ಲು ಬೆಂಬಲ
ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿರೋ ಸುದೀಪ್, "ನಾನು ಏನು ಕೇಳಲೇ ಇಲ್ಲ. ನಾನು ಹಿಂದಿ ಮಾರ್ಕೆಟ್‌ಗೆ 'ವಿಕ್ರಾಂತ್ ರೋಣ' ಸಿನಿಮಾ ತಗೊಂಡು ಹೋಗುತ್ತಿರುವ ವಿಷಯ ತಿಳಿದು ನಾನು ನಿನ್ನ ಜೊತೆ ಇದ್ದೀನಿ ಎಂದು ಹೇಳಿದ್ರು, ಅದು ದೊಡ್ಡ ವಿಷಯ. ಅವರು ನನ್ನ ಜೊತೆ ನಿಂತು ಚಿತ್ರ ಬೆಂಬಲಿಸಿದರು ಅದಕ್ಕಿಂತ ಏನ್ ಬೇಕು" ಅಂತ ಗುಣಗಾನ ಮಾಡಿದ್ದಾರೆ.

'ಬಾಹುಬಲಿ' ಚಿತ್ರದಲ್ಲಿ ಸುದೀಪ್ ಹವಾ
ಪ್ರಭಾಸ್ ಜೊತೆ ಅವಕಾಶ ಸಿಕ್ಕಿದರೆ ನಟಿಸೋಕೆ ಸಿದ್ಧ ಎಂದು ಸುದೀಪ್ ಹೇಳಿದ್ದಾರೆ. ಆದರೆ ಈಗಾಗಲೇ ಇಬ್ಬರು ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಒಟ್ಟಿಗೆ ತೆರೆ ಹಂಚಿಕೊಂಡಿರಲಿಲ್ಲ. ಎಸ್. ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ದಿ ಬಿಗಿನಿಂಗ್ ಚಿತ್ರದಲ್ಲಿ ಅಸ್ಲಾಂ ಖಾನ್ ಪಾತ್ರದಲ್ಲಿ ಕಿಚ್ಚ ಸುದೀಪ್ ಅಬ್ಬರಿಸಿ ಬೊಬ್ಬಿರಿದಿದ್ದರು.


Click it and Unblock the Notifications











