ಸುದೀಪ್ ನೇತೃತ್ವದಲ್ಲಿ ವಿಷ್ಣು ಸ್ಮಾರಕ; ದಾದಾ ಪ್ರತಿಮೆ ನಿರ್ಮಾಣಕ್ಕೆ ಅಡ್ವಾನ್ಸ್
ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿ ತೆರವು ವಿಚಾರ ಭಾರೀ ವಿವಾದ ಸೃಷ್ಟಿಸಿದೆ. ದಿವಂಗತ ನಟ ಬಾಲಕೃಷ್ಣ ಕುಟುಂಬ ಸದಸ್ಯರು ವಿಷ್ಣು ಸ್ಮಾರಕ ಧ್ವಂಸ ಮಾಡಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆ ಸುದೀಪ್ ನೇತೃತ್ವದಲ್ಲಿ ಕೆಂಗೇರಿ ಬಳಿಕ ದಾದಾ ದರ್ಶನ ಕೇಂದ್ರ ಸ್ಥಾಪನೆ ಆಗುತ್ತಿದೆ.
ಕೆಂಗೇರಿ ಬಳಿಕ ನಟ ಸುದೀಪ್ ಅರ್ಧ ಎಕರೆ ಜಾಗ ಖರೀದಿಸಿದ್ದಾರೆ. ಅಲ್ಲೇ ಅಭಿಮಾನಿಗಳು ವಿಷ್ಣು ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸೆಪ್ಟೆಂಬರ್ 18ರಂದು ದಾದಾ ಹುಟ್ಟುಹಬ್ಬದ ದಿನ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಸಿದ್ಧತೆ ನಡೀತಿದೆ. ಆ ಸ್ಮಾರಕದಲ್ಲಿ ವಿಷ್ಣು ಪುತ್ಥಳಿ ನಿರ್ಮಿಸಲಾಗುತ್ತಿದೆ. ಅದಕ್ಕಾಗಿ ಅಭಿಮಾನಿಗಳು ಪುತ್ಥಳಿ ತಯಾರಕರಿಗೆ ಅಡ್ವಾನ್ಸ್ ಕೊಟ್ಟಿದ್ದಾರೆ.

ಸುದೀಪ್ ಜೊತೆಗೆ ವಿಷ್ಣುಸೇನಾ ಸಮಿತಿ ಕೂಡ ಈ ಸ್ಮಾರಕ ನಿರ್ಮಾಣಕ್ಕೆ ಕೈಜೋಡಿಸಿದೆ. ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೆಂಗೇರಿ ಬಳಿ ಸುದೀಪ್ ಅವರ ಸಹಕಾರದೊಂದಿಗೆ ಸ್ಮಾರಕ ನಿರ್ಮಿಸುವ ಬಗ್ಗೆ ಇತ್ತೀಚೆಗೆ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು. ಅಭಿಮಾನ್ ಸ್ಟುಡಿಯೋದಲ್ಲೇ ವಿಷ್ಣು ಸ್ಮಾರಕ ನಿರ್ಮಾಣವಾಗಬೇಕು, ಅದು ಅಭಿಮಾನಿಗಳ ಆಶಯ. ಆದರೆ ಸದ್ಯ ಈ ಪ್ರಕರಣ ಕೋರ್ಟ್‌ನಲ್ಲಿದೆ. ಅಲ್ಲಿಯವರೆಗೆ ಅಭಿಮಾನಿಗಳು ವಿಷ್ಣು ಅವರನ್ನು ನೋಡಲು, ಪೂಜೆ ಮಾಡಲು ಒಂದು ಜಾಗ ಬೇಕು. ಹಾಗಾಗಿ ಕೆಂಗೇರಿ ಬಳಿ ವಿಷ್ಣು ದರ್ಶನ ಕೇಂದ್ರ ನಿರ್ಮಾಣ ಆಗುತ್ತಿದೆ ಎಂದಿದ್ದರು.
ಅಭಿಮಾನ್ ಸ್ಟುಡಿಯೋದಿಂದ 4 ಕಿಲೋ ಮೀಟರ್ ದೂರದಲ್ಲಿ ಕೆಂಗೇರಿ ವ್ಯಾಪ್ತಿಯಲ್ಲಿ ವಿಷ್ಣು ಸ್ಮಾರಕ ನಿರ್ಮಾಣವಾಗಲಿದೆ. ಈ ಬಗ್ಗೆ ಸುದೀಪ್ ಹುಟ್ಟುಹಬ್ಬದ ದಿನ ಹೆಚ್ಚಿನ ಮಾಹಿತಿ ಸಿಗಲಿದೆ. ಇನ್ನು ಸ್ಮಾರಕದಲ್ಲಿ 25 ಅಡಿ ಎತ್ತರದ ವಿಷ್ಣುದಾದಾ ಪುತ್ಥಳಿ ಸಿದ್ಧವಾಗಲಿದೆ. ಆ ಜವಾಬ್ದಾರಿಯನ್ನು ಪುತ್ಥಳಿ ತಯಾರಕರಿಗೆ ಒಪ್ಪಿಸಿ ಅಡ್ವಾನ್ಸ್ ಕೊಟ್ಟಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ವೀರಕಪುತ್ರ ಶ್ರೀನಿವಾಸ್ ಹಂಚಿಕೊಂಡಿದ್ದಾರೆ.

ಮುಂದಿನ ವರ್ಷ ವಿಷ್ಣು ಹುಟ್ಟುಹಬ್ಬದ ವೇಳೆಗೆ ಕೆಂಗೇರಿ ಬಳಿ ವಿಷ್ಣು ಸ್ಮಾರಕ ಸಿದ್ಧವಾಗುತ್ತದೆ ಎಂದು ವೀರಕಪುತ್ರ ಶ್ರೀನಿವಾಸ್ ಮಾಹಿತಿ ನೀಡಿದ್ದರು. ಇದನ್ನು ಅಭಿಮಾನಿಗಳೇ ಸೇರಿ ಮಾಡುತ್ತಿರುವುದರಿಂದ ಯಾವುದೇ ಸಮಸ್ಯೆ ಇಲ್ಲದೇ ಬೇಗ ನಿರ್ಮಾಣವಾಗುತ್ತದೆ ಎಂದಿದ್ದಾರೆ. 2009ರಲ್ಲಿ ನಟ ವಿಷ್ಣುವರ್ಧನ್ ನಿಧನರಾಗಿದ್ದರು. ಅಭಿಮಾನ್ ಸ್ಟುಡಿಯೋದಲ್ಲಿ ಅವರ ಪಾರ್ಥೀವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿತ್ತು. ಹಾಗಾಗಿ ಅಲ್ಲೇ ಸ್ಮಾರಕ ನಿರ್ಮಾಣ ಆಗಬೇಕಿತ್ತು. ಆದರೆ ಆ ಜಾಗ ವಿವಾದಕ್ಕೀಡಾಗಿ ಅಲ್ಲಿ ಸ್ಮಾರಕ ನಿರ್ಮಾಣ ಆಗಬೇಕು ಎನ್ನುವ ಅಭಿಮಾನಿಗಳ ಕನಸು ಇನ್ನು ನನಸಾಗಿಲ್ಲ.


Click it and Unblock the Notifications











