ಕಿಚ್ಚ 'ಮ್ಯಾಕ್ಸ್' ರಿಲೀಸ್ ಡೇಟ್; ಗಣೇಶ ಹಬ್ಬದ ದಿನ ನಿರ್ಮಾಪಕರು ಏನಂದ್ರು?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಕಲೈಪುಲಿ ಎಸ್. ತನು ಜೊತೆ ಸೇರಿ ಸುದೀಪ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಟೀಸರ್, ಸಾಂಗ್ ರಿಲೀಸ್ ಆಗಿ ಗಮನ ಸೆಳೆದಿದೆ.
'ವಿಕ್ರಾಂತ್ ರೋಣ' ಬಳಿಕ ಸುದೀಪ್ ನಟಿಸಿರುವ ಸಿನಿಮಾ ಇದು. ಚಿತ್ರದಲ್ಲಿ ಮತ್ತೊಮ್ಮೆ ಖಡಕ್ ಪೊಲೀಸ್ ಆಫೀಸರ್ ಆಗಿ ಕಿಚ್ಚ ಅಬ್ಬರಿಸಿದ್ದಾರೆ. ಅರ್ಜುನ್ ಮಹಾಕ್ಷಯ್ ಎನ್ನುವ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚಿದ್ದಾರೆ. ಒಂದು ದಿನದಲ್ಲಿ ನಡೆಯುವ ಕಥೆ ಇದಾಗಿದ್ದು ಬಹಳ ರೋಚಕವಾಗಿ ಸಿನಿಮಾ ಕಟ್ಟಿಕೊಡಲಾಗಿದೆ. ಮಾಸ್ ಪ್ರಿಯರಿಗಂತೂ ಭರ್ಜರಿ ಮನರಂಜನೆಯ ರಸದೌತಣ ಕಾದಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಮ್ಯಾಕ್ಸ್' ಸಿನಿಮಾ ತೆರೆಗೆ ಬರಲಿದೆ. ಆದರೆ ಕಾರಣಾಂತರಗಳಿಂದ ರಿಲೀಸ್ ತಡವಾಗುತ್ತಿದೆ. ಈ ವರ್ಷವೇ ರಿಲೀಸ್ ಆಗುತ್ತಾ ಎನ್ನುವ ಅನುಮಾನ ಮೂಡಿದೆ. ಇತ್ತೀಚೆಗೆ ಕಿಚ್ಚನ ಹುಟ್ಟುಹಬ್ಬಕ್ಕೆ ರಿಲೀಸ್ ಡೇಟ್ ಅನೌನ್ಸ್ ಆಗುತ್ತದೆ ಎಂದು ಕೆಲವರು ಭಾವಿಸಿದ್ದರು. ಆದರೆ ಗಣೇಶ ಹಬ್ಬಕ್ಕೆ ಹೇಳುವುದಾಗಿ ಚಿತ್ರತಂಡ ಹೇಳಿತ್ತು.
ಬೆಳಗ್ಗೆಯಿಂದ ಅಭಿಮಾನಿಗಳು 'ಮ್ಯಾಕ್ಸ್' ಸಿನಿಮಾ ಅಪ್‌ಡೇಟ್ ಕೇಳಲು ಮುಖ್ಯವಾಗಿ ರಿಲೀಸ್ ಡೇಟ್ ಯಾವಾಗ ಎಂದು ತಿಳಿಯಲು ಕಾದಿದ್ದರು. ಸಂಜೆ 6 ಗಂಟೆಗೆ ಚಿತ್ರತಂಡ ಅನೌನ್ಸ್ ಮಾಡಬೇಕಿತ್ತು. ಆದರೆ ನಿರಾಸೆ ಮೂಡಿಸಿದ್ದಾರೆ. ನಿರ್ಮಾಪಕ ಕಲೈಪುಲಿ ಎಸ್. ತನು ಟ್ವೀಟ್ ಮಾಡಿ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ. ಇವತ್ತು ರಿಲೀಸ್ ಡೇಟ್ ಅನೌನ್ಸ್ ಮಾಡೋಕೆ ಸಾಧ್ಯವಾಗ್ತಿಲ್ಲ ಎಂದಿದ್ದಾರೆ.
"ಆತ್ಮೀಯರೇ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು, ಅನಿರೀಕ್ಷಿತ ತಾಂತ್ರಿಕ ಕಾರಣಗಳಿಂದಾಗಿ ನಾವು ಇಂದು 'ಮ್ಯಾಕ್ಸ್' ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಲು ಸಾಧ್ಯವಾಗಲಿಲ್ಲ ಎಂದು ನಿಮಗೆ ತಿಳಿಸಲು ವಿಷಾದಿಸುತ್ತೇವೆ. ನಾವು ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತಿದ್ದೇವೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಪ್ರಕಟಿಸುತ್ತೇವೆ."
ಒಳ್ಳೆಯ ವಿಷಯಗಳು ಸಮಯ ತೆಗೆದುಕೊಳ್ಳುತ್ತವೆ, ನೀವು ಕಾಯುವುದಕ್ಕೆ ತಕ್ಕಂತೆ ಸಿನಿಮಾ ಬರುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಇದಕ್ಕೆ ಬೇಸರಗೊಂಡಿದ್ದಾರೆ. ರಿಲೀಸ್ ಡೇಟ್ ಘೋಷಿಸಲು ಕೂಡ ಏನು ಸಮಸ್ಯೆ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಕಿಚ್ಚನ ಖಡಕ್ ಪೋಸ್ಟರ್ ಅನಾವರಣವಾಗಿದೆ. 'ಮ್ಯಾಕ್ಸ್' ಚಿತ್ರದಲ್ಲಿ ಕನ್ನಡ ಹಾಗೂ ತಮಿಳು ಕಲಾವಿದರು, ತಂತ್ರಜ್ಞರು ಕೆಲಸ ಮಾಡಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್, ಸಂಯುಕ್ತಾ ಹೊರನಾಡ್, ಸುನಿಲ್, ಸುಕೃತಾ ವಾಗ್ಲೆ, ಪ್ರಮೋದ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣವಿದೆ. ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ.
ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದ್ದು ಇತ್ತೀಚೆಗೆ ಟೈಟಲ್ ಸಾಂಗ್ ರಿಲೀಸ್ ಆಗಿತ್ತು. ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದರು. ಸುದೀಪ್ ಕೂಡ ಚಿತ್ರದ ಮೇಲೆ ಬಹಳ ಭರವಸೆಯಿಂದ ಇದ್ದಾರೆ. ಮಹಾಬಲಿಪುರಂನಲ್ಲಿ ಸೆಟ್ ಹಾಕಿ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಕಿಚ್ಚನನ್ನು ಬಹಳ ಸ್ಟೈಲಿಶ್ ಆಗಿ ಅಷ್ಟೇ ರಗಡ್ ಅವತಾರದಲ್ಲಿ ತೋರಿಸುವ ಪ್ರಯತ್ನ ನಡೆದಿದೆ.


Click it and Unblock the Notifications











