»   » ಕಿಚ್ಚ ಸುದೀಪ್ ಚಿತ್ರ ರು. 100 ಕೋಟಿ ಬಿಜಿನೆಸ್!

ಕಿಚ್ಚ ಸುದೀಪ್ ಚಿತ್ರ ರು. 100 ಕೋಟಿ ಬಿಜಿನೆಸ್!

Posted By:
Subscribe to Filmibeat Kannada
ಕಿಚ್ಚ ಸುದೀಪ್ ಅಭಿನಯದ ಚಿತ್ರವೊಂದು ರು.100 ಕೋಟಿ ಬಿಜಿನೆಸ್ ಮಾಡುವ ಭರವಸೆಯನ್ನು ಹುಟ್ಟುಹಾಕಿದೆ. ಆದರೆ ಅದು ಕನ್ನಡ ಚಿತ್ರವಲ್ಲದಿದ್ದರೂ ಕನ್ನಡದ ನಟನೊಬ್ಬನ ಪರಭಾಷಾ ಚಿತ್ರ ಎಂಬುದು ವಿಶೇಷ. ನಾವೀಗ ಮಾತನಾಡುತ್ತಿರುವುದು ಎಸ್ ಎಸ್ ರಾಜಮೌಳಿ ನಿರ್ದೇಶನದ 'ಈಗ' ಚಿತ್ರ ಬಗ್ಗೆ. ಬಿಡುಗಡೆಗೂ ಮುನ್ನವೇ ಈ ಚಿತ್ರ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರದು ವಿಲನ್ ಪಾತ್ರವಾದರೂ ಅಭಿನಯದ ಪರವಾಗಿ ಗಮನಾರ್ಹವಾಗಿದೆ. ಜುಲೈ 6ರಂದು ತೆರೆಗೆ ದಾಂಗುಡಿ ಇಡುತ್ತಿರುವ ಈ ಚಿತ್ರದ ಬಗ್ಗೆ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮ ಭಾರಿ ಭವಿಷ್ಯವನ್ನೇ ನುಡಿದ್ದಾರೆ.

ಈ ಬಗ್ಗೆ ಟ್ವೀಟಿಸಿರುವ ಅವರು, "ಈಗ ಚಿತ್ರ ತೆಲುಗು ಚಿತ್ರೋದ್ಯಮದಲ್ಲಿ ಭಾರಿ ಹವಾ ಎಬ್ಬಿಸಲಿದೆ. ನನ್ನ ಪ್ರಕಾರ ಈ ಚಿತ್ರ ರು.100 ಕೋಟಿ ಬಿಜಿನೆಸ್ ಮಾಡುತ್ತದೆ ಎಂಬ ಗ್ಯಾರಂಟಿ ಇದೆ. ಅಂದರೆ ತೆಲುಗು ಚಿತ್ರೋದ್ಯಮ ಒಂದರಲ್ಲೇ ರು.100 ಕೋಟಿ ಮಾಡುತ್ತದೆ. ಬೇಕಿದ್ದರೆ ನೋಡ್ತಾ ಇರಿ" ಎಂದಿದ್ದಾರೆ.

ಕಿಚ್ಚನ ಚಿತ್ರದ ಮೇಲೆ ರಾಮು ಬಹಳ ದೊಡ್ಡ ಭರವಸೆಯನ್ನೇ ಇಟ್ಟಿದ್ದಾರೆ. ಇದು ಒಂದು ರೀತಿ ಕಿಚ್ಚಗೆ ಬೆನ್ನುತಟ್ಟುವಂತಿದ್ದರೂ ಅವರ ಹೆಗಲ ಮೇಲೆ ನೂರು ಕೋಟಿ ಭರವಸೆಯ ಹೊರೆಯನ್ನೂ ಹೊರಿಸಿದ್ದಾರೆ ರಾಮು. ನಾನಿ ನಾಯಕ ನಟನಾಗಿರುವ ಈ ಚಿತ್ರದಲ್ಲಿ ಸಮಂತಾ ಎಂಬ ಚಂದನದ ಗೊಂಬೆ ನಾಯಕಿ.

ಈಗಾಗಲೆ ಚಿತ್ರದ ಟ್ರೇಲರ್ ಗಳು ಭಾರಿ ಸದ್ದು ಮಾಡಿದ್ದು, ಚಿತ್ರದಲ್ಲಿನ ಗ್ರಾಫಿಕ್ಸ್, ಅನಿಮೇಷನ್ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಭಾರತೀಯ ಚಿತ್ರರಂಗದಲ್ಲೇ ಇದೊಂದು ಹೊಸ ಪ್ರಯೋಗ ಎಂಬ ಮಾತುಗಳು ಬಾಲಿವುಡ್ ನಿಂದ ಟಾಲಿವುಡ್ ತನಕ ಕೇಳಿಬರುತ್ತಿವೆ.

ರಾಜಮೌಳಿ ಇದುವರೆಗೂ ಯಾವುದೇ ಒಂದು ಸಿದ್ಧಾಂತ, ಸೂತ್ರಕ್ಕೆ ಜೋತುಬಿದ್ದವರಲ್ಲ. ಚಿತ್ರದಿಂದ ಚಿತ್ರಕ್ಕೆ ಅವರ ಕಥಾವಸ್ತು, ಶೈಲಿ ಪ್ರತಿಯೊಂದು ಬದಲಾಗುತ್ತಾ ಭಿನ್ನವಾಗಿರುತ್ತದೆ. ಆ ದಾರಿಯಲ್ಲಿ ಅವರು ಯಶಸ್ಸನ್ನೂ ಗಳಿಸುತ್ತಿರುವುದು ಗೊತ್ತೇ ಇದೆ. ಈಗ ಚಿತ್ರದ ಪ್ರೋಗ್ರಸ್ ರಿಪೋರ್ಟ್ ಗೊತ್ತಾಗಬೇಕಾದರೆ ಜುಲೈ 6ರ ತನಕ ಕಾಯಲೇಬೇಕು.

ಈಗಾಗಲೆ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಒಟ್ಟು 1200 ಪ್ರಿಂಟ್ ಗಳೊಂದಿಗೆ ಚಿತ್ರ ತೆರೆಗೆ ಬರುತ್ತಿದೆ. 2010ರಲ್ಲಿ ಸೆಟ್ಟೇರಿದ ಈ ಚಿತ್ರವನ್ನು ರು.26 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಸ್ಪೆಷಲ್ ಎಫೆಕ್ಟ್ ಗಳಿಗಾಗಿಯೇ ರು.7 ಕೋಟಿ ನೀರಿನಂತೆ ಖರ್ಚಾಗಿದೆ.

ಮಗಧೀರ, ಯಮದೊಂಗ ಚಿತ್ರಗಳಿಗೆ ಎಡಿಟಿಂಗ್ ಮಾಡಿದ್ದ ಸೆಂಥಿಲ್ ಕುಮಾರ್ ಅವರ ಸಂಕಲನ ಚಿತ್ರಕ್ಕಿದೆ. ಎಂ ಎಂ ಕೀರವಾಣಿ ಅವರ ಸಂಗೀತ, ಕೆ ಕೆ ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣವಿರುವ ಈ ಚಿತ್ರದ ಸ್ಯಾಟಲೈಟ್ ರೈಟ್ಸ್ ರು.5.5 ಕೋಟಿಗೆ ಮಾರಾಟವಾಗಿರುವುದು ಹೊಸ ದಾಖಲೆ ಎನ್ನಬಹುದು. (ಏಜೆನ್ಸೀಸ್)

English summary
Kannada actor Sudeep's upcoming Telugu-Tamil bi-lingual socio-fantasy film written and directed by S. S. Rajamouli Will do Rs. 100 crore business, director Ram Gopal Varma has let his verdict out. Recently he tweeted, “I think ‘Eega’ will b first film to start the 100 crore club in Telugu industry. In other words I mean it will collect 100 cr in Telugu alone.”
Please Wait while comments are loading...