ಕಿಚ್ಚನ ಬ್ಯಾನರ್‌ನಲ್ಲಿ ಹೊಸ ಪ್ರಾಜೆಕ್ಟ್: ಸಂಜೀವ್ ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ
ಇತ್ತೀಚೆಗೆ ಸುದೀಪ್ ತಮ್ಮ 46ನೇ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟಿದ್ದರು. ಕಲೈಪುಲಿ ಎಸ್ ತನು ನಿರ್ಮಾಣದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರಲಿದೆ. ಇದೀಗ ತಮ್ಮದೇ ನಿರ್ಮಾಣದಲ್ಲಿ ಹೊಸ ಚಿತ್ರಕ್ಕೆ ಕಿಚ್ಚ ಕೈ ಹಾಕಿದ್ದಾರೆ. ಈ ಬಾರಿ ತಮ್ಮ ಅಕ್ಕನ ಮಗ ಸಂಚಿತ್ ಸಂಜೀವ್‌ನ ಬಣ್ಣದ ಲೋಕಕ್ಕೆ ಪರಿಚಯಿಸುತ್ತಿದ್ದಾರೆ.
ಬಹಳ ದಿನಗಳಿಂದ ಸಂಚಿತ್ ಸ್ಯಾಂಡಲ್‌ವುಡ್ ಎಂಟ್ರಿ ಮಾತುಗಳು ಕೇಳಿಬರ್ತಿತ್ತು. ಇದೀಗ ಫೈನಲಿ ಅದಕ್ಕೆ ವೇದಿಕೆ ಸಿದ್ಧವಾಗಿದೆ. ಈಗಾಗಲೇ ಕಿಚ್ಚನ 'ಅಂಬಿ ನಿಂಗೆ ವಯಸ್ಸಾಯ್ತೋ', 'ವಿಕ್ರಾಂತ್ ರೋಣ' ಸಿನಿಮಾಗಳಲ್ಲಿ ಸಂಚಿತ್ ಕೆಲಸ ಮಾಡಿದ್ದಾರೆ. ಆದರೆ ಕ್ಯಾಮರಾ ಮುಂದೆ ಅಲ್ಲ ಹಿಂದೆ ಗುರ್ತಿಸಿಕೊಂಡಿದ್ದರು. ಸುದೀಪ್ ಸೋದರಳಿಯ ಮುಂಬೈನಲ್ಲಿ ನಟನೆಯನ್ನು ಕೂಡ ಕಲಿತು ಬಂದಿದ್ದಾರೆ.

ಸಕಲ ತಯಾರಿಯೊಂದಿಗೆ ಸಂಚಿತ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ತಾವು ನಟಿಸುವ ಚೊಚ್ಚಲ ಚಿತ್ರವನ್ನು ತಾವೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಜೊತೆ ಕೆ. ಪಿ ಶ್ರೀಕಾಂತ್ ಹಾಗೂ ಮನೋಹರ್ ನಾಯ್ಡು ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಶ್ರೀಕಾಂತ್ ಮಾಹಿತಿ ನೀಡಿದ್ದಾರೆ. ನಾಳೆ(ಜೂನ್ 14) ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ.
ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ವೀನಸ್ ಮೂವಿಸ್‌ನ ಕೆ. ಪಿ ಶ್ರೀಕಾಂತ್ ಈಗಾಗಲೇ 2 ಸಿನಿಮಾ ನಿರ್ಮಿಸ್ತಿದ್ದಾರೆ. ಉಪೇಂದ್ರ ನಟನೆಯ 'ಯುಐ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಸೆಟ್ಟೇರಿ ನಿಂತೇ ಹೋಗಿದ್ದ ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಮರುಜೀವ ಕೊಟ್ಟಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಮುಹೂರ್ತ ನಡೀತು. ಇದೀಗ ಸುದೀಪ್ ಅಕ್ಕನ ಮಗನ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ಸುದೀಪ್ ರೀತಿಯಲ್ಲೇ ಆರಡಿ ಕಟೌಟ್ ಸಂಚಿತ್ ಸಂಜೀವ್. ಇದೀಗ ಸೋದರ ಮಾವನ ಹಾದಿಯಲ್ಲೇ ಜಬರ್ದಸ್ತ್ ಆಗಿ ಚಿತ್ರರಂಗಕ್ಕೆ ಬರೋಕೆ ಸಿದ್ಧರಾಗಿದ್ದಾರೆ. ಹೀರೊ ಆಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಅದೃಷ್ಟ ಪರೀಕ್ಷೆಗಿಳಿಯುತ್ತಿರುವುದು ವಿಶೇಷ. ಸುದೀಪ್ ಕೂಡ ಈ ಸಿನಿಮಾ ಬಗ್ಗೆ ಭಾರೀ ಉತ್ಸುಕರಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications











